
- ಭ್ರಷ್ಟಾಚಾರದ ಮಹಾಪೋಷಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ : ಕಾಂಗ್ರೆಸ್ ಆರೋಪ
- ʼಸಿಎಂ ಬೊಮ್ಮಾಯಿ ಅವರೇ ಎಲ್ಲಿ ಹೋಯ್ತು ನಿಮ್ಮ ʼಲಂಚ ಪಡೆಯುವುದಿಲ್ಲʼ ಎಂಬ ಬೋರ್ಡ್?ʼ
ಬಿಜೆಪಿ ಆಡಳಿತದಲ್ಲಿ ವಿಧಾನಸೌಧ ವ್ಯಾಪಾರಸೌಧವಾಗಿದೆ. ಸರ್ಕಾರಿ ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಕುಟುಕಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಅಧಿಕಾರಿಗಳ 'ಮಾಮೂಲು' ಭ್ರಷ್ಟಾಚಾರ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ತಾವು ಭ್ರಷ್ಟಾಚಾರದ ಮಹಾಪೋಷಕರಾಗಿರುವ ಕಾರಣ ವಿಧಾನಸೌಧದಿಂದ ಹಿಡಿದು ಗ್ರಾಮ ಪಂಚಾಯ್ತಿವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ” ಎಂದು ಆರೋಪಿಸಿದೆ.
40 ಪರ್ಸೆಂಟ್ ಸರ್ಕಾರದಲ್ಲಿ ಎಲ್ಲೆಲ್ಲೂ ಲಂಚವತಾರ! ಡಿಸಿಗಳು, ಜೆಸಿಗಳು, ಅಬಕಾರಿ ಅಧಿಕಾರಿಗಳಿಂದ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಬೊಮ್ಮಾಯಿ ಅವರೇ, ಎಲ್ಲಿ ಹೋಯ್ತು ನಿಮ್ಮ "ಲಂಚ ಪಡೆಯುವುದಿಲ್ಲ" ಎಂಬ ಬೋರ್ಡ್? ಯಾರು ಯಾರಿಗೆ ಎಷ್ಟೆಷ್ಟು ಮಾಮೂಲು ಎಂಬ ರೇಟ್ ಬೋರ್ಡ್ ಹಾಕಿ ಕುಳಿತಿರುವ ಅಧಿಕಾರಿಗಳನ್ನ ನಿಮಗೆ ನಿಯಂತ್ರಿಸಲಾಗದೇ” ಎಂದು ಪ್ರಶ್ನಿಸಿದೆ.

“ಸುಳ್ಳು ಬಿಜೆಪಿಯ ಮನೆದೇವ್ರು! ಜನರಿಗೆ, ಸದನಕ್ಕೆ, ಮಾಧ್ಯಮಗಳಿಗೆ ಸುಳ್ಳು ಹೇಳುತ್ತಿದ್ದ ಸರ್ಕಾರ ಈಗ ನ್ಯಾಯಾಲಯದಲ್ಲೂ ಸುಳ್ಳಿನ ಚಾಳಿ ಮುಂದುವರೆಸಿದೆ. ಹೈಕೋರ್ಟ್ ಹಲವು ಬಾರಿ ಛಿಮಾರಿ ಹಾಕಿದರೂ ಇದುವರೆಗೂ ಯಾವೊಬ್ಬ ಅಧಿಕಾರಿಯ ಮೇಲೂ ಸರ್ಕಾರ ಕ್ರಮ ಜರುಗಿಸಲಿಲ್ಲವೇಕೆ? ಬೊಮ್ಮಾಯಿ ಅವರೇ, ಅಧಿಕಾರ ನಿಮ್ಮ ಕೈಲಿ ಇಲ್ಲವೇ? ಗೊಂಬೆಯಾಟದ ಸಿಎಂ” ಎಂದು ಕಾಲೆಳೆದಿದೆ.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಪ್ರಮಾಣ ವಚನ ನಾಟಕ; ಕಾಂಗ್ರೆಸ್ ಟೀಕೆ
“ಪ್ರತಿ ನಗರದಲ್ಲೂ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡುತ್ತೇವೆ ಎಂದಿತ್ತು ಬಿಜೆಪಿ. ಪೌರ ಕಾರ್ಮಿಕರಿಗೆ ವೇತನವೇ ಸಮರ್ಪಕವಾಗಿ ನೀಡುತ್ತಿಲ್ಲ, ಹಲವು ಬಾರಿ ಬೇಡಿಕೆ ಈಡೇರಿಕೆಗೆ ಪ್ರತಿಭಟಿಸಿದರೂ ಅವರತ್ತ ತಿರುಗಿಯೂ ನೋಡ್ತಿಲ್ಲ, ಭತ್ಯೆಗಳಲ್ಲೂ ಕಮಿಷನ್ ಲೂಟಿ ಕೊಟ್ಟ ಭಾರವಸೆಯಂತೆ ವಸತಿ ಸೌಲಭ್ಯ ನೀಡದೆ ವಂಚಿಸಿದ್ದೇಕೆ” ಎಂದು ಪ್ರಶ್ನೆ ಮುಂದಿಟ್ಟಿದೆ.