ಅತ್ಯಾಚಾರ ಪ್ರಕರಣದ ಅತ್ಯುತ್ತಮ ತನಿಖೆಗಾಗಿ ಸಿಐಡಿ ಶಂಕರ್‌ಗೆ ಕೇಂದ್ರ ಗೃಹ ಸಚಿವರ ಪದಕ

ಅತ್ಯಾಚಾರ ಪ್ರಕರಣದ ಅತ್ಯುತ್ತಮ ತನಿಖೆಗಾಗಿ ಸಿಐಡಿ ಶಂಕರಗೌಡ ಪಾಟೀಲ್‌ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಲಭಿಸಿದೆ. ʼಸಿಐಡಿ ತನಿಖೆʼ ಅನ್ನೋ ಪದಕ್ಕೆ ಸಿಐಡಿ ಶಂಕರ್‌ ಅವರು ಹೊಸ ವ್ಯಾಖ್ಯಾನ ಬರೆಯುವ ಮೂಲಕ ಎಲ್ಲರ ಕಣ್ಣರಳಿಸಿದ್ದಾರೆ.
CID Shankargouda

ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮಿಂಚಿನ ಓಟ ನಡೆಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ʼಆಪರೇಷನ್‌ ಮುಂಬೈʼ ಹೆಸರಲ್ಲಿ ಹೆಡೆಮುರಿ ಕಟ್ಟಿದ್ದ ಕಲಬುರಗಿಯ ಸಿಐಡಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ್‌ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಪುರಸ್ಕಾರ ಲಭಿಸಿದೆ.

ʼಸಿಬಿಐ ಶಂಕರ್ʼ ಸಿನಿಮಾದಲ್ಲಿ ಖಾಕಿಧಾರಿ ಶಂಕರನಾಗ್‌ ಅವರು ವಿಲನ್ ಪಾತ್ರಧಾರಿ ಮುಖ್ಯಮಂತ್ರಿ ಚಂದ್ರು ಅವರನ್ನು ಎಳೆದು ತಂದ ಸಿನಿಮಯ ರೀತಿಯಲ್ಲಿಯೇ ಸಿಐಡಿ ಶಂಕರಗೌಡ ಅವರು ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯ ಕಾಲರ್ ಪಟ್ಟಿ ಹಿಡಿದು ಎಳೆತರುತ್ತಿರುವ ಭಾವಚಿತ್ರ ಈಗ ಮತ್ತೊಮ್ಮೆ ಎಲ್ಲಡೆ ವೈರಲ್‌ ಆಗುತ್ತಿದೆ. ಹಾಗೆಯೇ "ಅಂದು ಸಿಬಿಐ ಶಂಕರ್, ಇಂದು ಸಿಐಡಿ ಶಂಕರ್‌" ಎಂಬ ಪ್ರಶಂಸೆ ಮಾತುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ  ವ್ಯಕ್ತವಾಗುತ್ತಿವೆ.

545 ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮ ಬೆಳಕಿಗೆ ಬಂದ ಮೇಲೆ ತಡವಾಗಿ ಎಚ್ಚೆತ್ತುಕೊಂಡ ಸರ್ಕಾರ ಅಕ್ರಮದ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ನಂತರದಲ್ಲಿ "ಇದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದ್ದು, ಸಿಐಡಿಯಲ್ಲಿ ಪೊಲೀಸರೇ ಇದ್ದು, ಪೊಲೀಸರ ವಿರುದ್ಧ ಹೇಗೆ ತನಿಖೆ ನಡೆಸುತ್ತಾರೆ? ಅಕ್ರಮ ಮುಚ್ಚಿ ಹಾಕಲೆಂದೇ ಸಿಐಡಿಗೆ ಕೊಡಲಾಗಿದೆ” ಎಂಬ ಟೀಕೆಗಳು ಪ್ರತಿಪಕ್ಷಗಳಿಂದ ಕೇಳಿಬಂದವು. ಇದಕ್ಕೆಲ್ಲ ಅಪವಾದ ಎಂಬಂತೆ ಈಗ ಸಿಐಡಿ ಶಂಕರ್ ಕಾರ್ಯವೈಖರಿ ಜನ ಮೆಚ್ಚುಗೆ ಪಾತ್ರವಾಗಿದೆ. ʼಸಿಐಡಿ ತನಿಖೆʼ ಅನ್ನೋ ಪದಕ್ಕೆ ಹೊಸ ವ್ಯಾಖ್ಯಾನ ಬರೆಯುವ ಮೂಲಕ ಎಲ್ಲರ ಕಣ್ಣರಳಿಸಿದ್ದಾರೆ!

ಪಿಎಸ್ಐ ಅಕ್ರಮ ಪ್ರಕರಣ ತನಿಖೆ ನಡೆಸುತ್ತಿರುವ ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾಶ್ ಮತ್ತವರ ತಂಡದಲ್ಲಿ ಶಂಕರಗೌಡ ಪಾಟೀಲ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಪಿಎಸ್ಐ ಅಕ್ರಮ ಎಸಗಿರುವ ಆರೋಪಿಗಳ ಹಿಂದಿನ ರಾಜಕೀಯ ಶಕ್ತಿಗಳಿಗೆ ಎದೆಗೊಟ್ಟು, ಯಾವ ಮುಲಾಜಿಲ್ಲದೆ ಅವರನ್ನು ಎಳೆದುತಂದು, ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಆರೋಪಿಗಳು ಪಾರಾಗಲು ಎಷ್ಟೇ ಪ್ರಯತ್ನ ಪಡುತ್ತಿದ್ದರೂ ತಡೆಗೋಡೆಯಾಗಿ ಶಂಕರಗೌಡ ಪಾಟೀಲ್‌ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

Image
CID Shankargouda

ಈ ಸುದ್ದಿ ಓದಿದ್ದೀರಾ? ಪಿಎಸ್‌ಐ ಅಕ್ರಮ ಭಾಗ-10 | ಆರೋಪಿಗಳ ಹೆಡೆಮುರಿ ಕಟ್ಟಲು 'ಸಿಐಡಿ ಶಂಕರ್‌ʼ ನಡೆಸಿದ 'ಆಪರೇಷನ್‌ ಮುಂಬೈʼ!

ಅತ್ಯಾಚಾರ ತನಿಖೆಗೆ ಸಂದ ಗೌರವ 

2019ರಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯಾಕಾಪುರದಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣದ ತನಿಖೆಯನ್ನು ಶಂಕರಗೌಡ ಪಾಟೀಲ್‌ ನಡೆಸಿದ್ದರು. ಕೇವಲ 22 ದಿನಗಳಲ್ಲಿ ಅತ್ಯಾಚಾರ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿ, ವಿಕೃತವೆಸಗಿದ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದ ಹಾಗೆ ವೈಜ್ಞಾನಿಕ ರೀತಿಯ ಸಾಕ್ಷಾಧಾರ ಸಂಗ್ರಹಿಸಿ, ಕೇವಲ 101 ದಿನಗಳಲ್ಲಿ ಆ ಪ್ರಕರಣದ ಬಗ್ಗೆ ತೀರ್ಪು ಹೊರಬರುವಂತೆ ಮಾಡಿದ್ದರು. ಅಪರಾಧಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ತಮ್ಮ ಖಚಿತ ದಿಕ್ಕಿನ ತನಿಖೆಯ ಮೂಲಕ ನೊಂದ ಕುಟುಂಬದ ಕಣ್ಣೀರು ಒರೆಸಿ, ಕರ್ತವ್ಯ ನಿಷ್ಠೆ ಮೆರೆದಿರುವುದಕ್ಕೆ ಶಂಕರಗೌಡ ಪಾಟೀಲ್‌ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಪುರಸ್ಕಾರ ಸಂದಿರುವುದು ಹೆಮ್ಮೆಯ ಸಂಗತಿ.

ಪ್ರಶಸ್ತಿ ಲಭಿಸಿರುವ ಕುರಿತು ಸಿಐಡಿ ಶಂಕರಗೌಡ ಪಾಟೀಲ್‌ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, “ಅತ್ಯಾಚಾರ ಪ್ರಕಣದ ತನಿಖೆಯ ಶ್ರೇಷ್ಠ ಮಾದರಿಯನ್ನು ಗುರುತಿಸಿ ನನಗೆ ಕೇಂದ್ರ ಗೃಹ ಸಚಿವರ ಪದಕ ಪುರಸ್ಕಾರ ಲಭಿಸಿದೆ. ನಮ್ಮ ರಾಜ್ಯದ ಆರು ಜನ ಪೊಲೀಸರಿಗೆ ಈ ಪ್ರಶಸ್ತಿ ದೊರಕಿರುವುದು ಸಂತಷವಾಗುತ್ತಿದೆ. ಪ್ರಶಸ್ತಿಗಳನ್ನು ತೆಲೆಯಲ್ಲಿಟ್ಟುಕೊಂಡು ಎಂದೂ ತನಿಖೆ ಮಾಡಿದವನಲ್ಲ. ಆದ ಅನ್ಯಾಯಕ್ಕೆ ನಮ್ಮ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸುತ್ತಿರುವೆ” ಎಂದು ತಿಳಿಸಿದರು.  

ಮುಂದುವರಿದು, “ನಮ್ಮ ಭಾಗದಲ್ಲಿ ಎಂಟು ವರ್ಷದ ಬಾಲಕಿಗೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಅದರ ತನಿಖೆ ನಡೆಸಿ, ಸೂಕ್ತ ಸಾಕ್ಷಾಧಾರಗಳ ಸಮೇತ 22 ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದೆ. ಡಿಎನ್‌ಎಗಳು ಹೋಲಿಕೆಯಾಗಿ ಆ ಆರೋಪಿಗೆ ಗಲ್ಲು ಶಿಕ್ಷೆಯಾಯಿತು. 101 ದಿನದಲ್ಲಿ ಗಲ್ಲು ಶಿಕ್ಷೆಯಾಗಿರುವುದು ರಾಜ್ಯದಲ್ಲಿ ಮೊದಲ ಪ್ರಕರಣ ಇರಬಹುದು. ಇದು ಪೊಲೀಸ್‌ ತನಿಖೆಗೆ ಸಂದ ಗೌರವ ಎಂದು ಭಾವಿಸುವೆ” ಎಂದರು.

ಜುಲೈ 26ರಂದು ಸಿಐಡಿ ಶಂಕರಗೌಡ ಪಾಟೀಲ್‌ ಅವರ ತನಿಖಾ ಕಾರ್ಯವೈಖರಿಯನ್ನು ಈ ದಿನ.ಕಾಮ್‌ ಗುರುತಿಸಿ, ʼಪಿಎಸ್‌ಐ ಅಕ್ರಮ ಭಾಗ-10ರಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲು 'ಸಿಐಡಿ ಶಂಕರ್‌ʼ ನಡೆಸಿದ 'ಆಪರೇಷನ್‌ ಮುಂಬೈʼ! ತಲೆಬರಹದಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ನೆನೆಯಬಹುದು.

ನಿಮಗೆ ಏನು ಅನ್ನಿಸ್ತು?
2 ವೋಟ್