ಉತ್ತರ ಪ್ರದೇಶ | ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದಕ್ಕೆ ಪ್ರಜ್ಞೆ ತಪ್ಪುವಂತೆ ಹೊಡೆದ ಶಿಕ್ಷಕ

  • ಹಲ್ಲೆ ನಡೆಸಿರುವ ಶಿಕ್ಷಕನ ವಿರುದ್ಧ 'ಅಟ್ರಾಸಿಟಿ' ಪ್ರಕರಣ ದಾಖಲು
  • ಕರ್ತವ್ಯದಿಂದ ಅಮಾನತುಗೊಂಡ ಸರ್ಕಾರಿ ಶಾಲೆಯ ಶಿಕ್ಷಕ 

ಉತ್ತರ ಪ್ರದೇಶದಲ್ಲಿ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ ಕಾರಣಕ್ಕೆ 8ನೇ ತರಗತಿ ಓದುತ್ತಿರುವ ದಲಿತ ಬಾಲಕನಿಗೆ ಅಮಾನುಷವಾಗಿ ಥಳಿಸಲಾಗಿದೆ.

ಬಿಜ್ನೋರ್‌ನ ಚಂದ್‌ಪುರ ತೆಹಸಿಲ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕ ಹರೇಂದ್ರ ಸಿಂಗ್ (32) ವಿದ್ಯಾರ್ಥಿಯನ್ನು ಥಳಿಸಿರುವ ಆರೋಪಿಯಾಗಿದ್ದು, ಆ ಶಿಕ್ಷಕನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. 

8ನೇ ತರಗತಿ ವಿದ್ಯಾರ್ಥಿ ಹರ್ಕೇಶ್ ಕುಮಾರ್ ಹಲ್ಲೆಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕನ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆತನನ್ನು ಬಂಧಿಸುವಂತೆ ಒತ್ತಾಯಿಸಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜ್ನೋರ್ ಗ್ರಾಮಾಂತರ ಠಾಣೆಯ ರಾಮ್ ಅರ್ಜ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತರಿಗೆ ನಿವೇಶನ, ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲು ಆಗ್ರಹ

ಶಿಕ್ಷಕ ಆರಂಭದಲ್ಲಿ ವಿದ್ಯಾರ್ಥಿಗೆ ಶೌಚಾಲಯಕ್ಕೆ ಹೋಗಲು ಅನುಮತಿ ನಿರಾಕರಿಸಿದ್ದಾರೆ. ಅರ್ಧಗಂಟೆಯ ನಂತರ ಮತ್ತೆ ವಿದ್ಯಾರ್ಥಿ ಅನುಮತಿ ಕೇಳಿದಾಗ ಪ್ರಜ್ಞೆ ತಪ್ಪುವಂತೆ ದೊಣ್ಣೆಯಿಂದ ಹೊಡೆದಿದ್ದಾನೆ.

‘ದಿ ಇಂಡಿಯನ್ ಎಕ್‌ಪ್ರೆಸ್‌' ಮಾಹಿತಿ ಆಧರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್