ಉತ್ತರ ಕನ್ನಡ | ಜಿಲ್ಲೆಗೆ 14 ಹೊಸ ಕಂದಾಯ ಗ್ರಾಮಗಳ ಸೇರ್ಪಡೆ

  • ಕಂದಾಯ ಗ್ರಾಮವನ್ನಾಗಿಸಲು ಕಳೆದ ಕೆಲವು ವರ್ಷಗಳಿಂದ ಗ್ರಾಮಸ್ಥರ ಮನವಿ
  • ಸರ್ವೆ ಮಾಡಿ, ದಾಖಲೆ ಪರಿಶೀಲಿಸಿ, ಹಕ್ಕು ಪತ್ರ ನೀಡುವ ಭರವಸೆ ಕೊಟ್ಟ ಜಿಲ್ಲಾಧಿಕಾರಿ 

ಹೊಸ ಕಂದಾಯ ಗ್ರಾಮಗಳ ರಚನೆಯ ಪ್ರಕ್ರಿಯೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭವಾಗಿದ್ದು, ಜಿಲ್ಲಾಡಳಿತವು ಎರಡು ಪ್ರಾಥಮಿಕ ಅಧಿಸೂಚನೆಯಲ್ಲಿ 14 ಹೊಸ ಕಂದಾಯ ಗ್ರಾಮಗಳನ್ನು ಪ್ರಕಟಿಸಿದೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಹಲವು ಗ್ರಾಮಸ್ಥರು ನಮ್ಮ ಊರಿನಲ್ಲಿ ಸಾಕಷ್ಟು ಜನವಸತಿಯಿದ್ದರೂ, ಗ್ರಾಮಗಳೆಂಬ ಮಾನ್ಯತೆ ಇಲ್ಲದೇ, ಸರ್ಕಾರವು ಜಾರಿಗೆ ತರುತ್ತಿರುವ ಯೋಜನೆಗಳು ನಮಗೆ ತಲುಪುತ್ತಿಲ್ಲ. ಹಾಗಾಗಿ, ನಾವು ವಾಸಿಸುತ್ತಿರುವ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಕಳೆದ ಏಪ್ರಿಲ್ 15ರಂದು ಕಂದಾಯ ಸಚಿವ ಆರ್‌ ಅಶೋಕ್ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಇವರ ಮನವಿಯನ್ನು ಪರಿಗಣಿಸಿ, ಮುಂದಿನ ದಿನಗಳಲ್ಲಿ 23 ಹೊಸ ಗ್ರಾಮಗಳ ರಚನೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು.

ಅಧಿಕಾರಿಗಳು ಇದನ್ನು ಕೂಲಂಕುಷವಾಗಿ ಪರಿಶೀಲಿಸಿ, ಹಳಿಯಾಳ ಮತ್ತು ಮುಂಡಗೊಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 14 ಗ್ರಾಮಗಳನ್ನು ಕಂದಾಯ ಇಲಾಖೆಯ ನಿಯಮದ ಅನುಸಾರ ಸೇರ್ಪಡೆ ಮಾಡುವುದಾಗಿ ಪ್ರಕಟಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸ್ವಾತಂತ್ರ್ಯ 75| ನಮ್ಮ ಕಾಲವನ್ನು ಕದಿಯುವ ಹಕ್ಕನ್ನು ಪ್ರಭುತ್ವಕ್ಕೆ ಕೊಟ್ಟವರಾರು?

ಕಂದಾಯ ಇಲಾಖೆಯ ಪ್ರಕಾರ ಕನಿಷ್ಠ 10 ಮನೆಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿದ್ದರೆ, ಅಂತಹ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಬಹುದು ಎಂಬ ನಿಯಮವಿದೆ. ಇದರಂತೆ, ಕನಿಷ್ಠ 50ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರದೇಶವನ್ನೂ ಕಂದಾಯ ಇಲಾಖೆಯು ಪರಿಗಣಿಸಿ, ಪರಿವರ್ತಿಸಲಾದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ‘ಕಲಂ 94’ ಪ್ರಕಾರ ಹಕ್ಕುಪತ್ರಗಳನ್ನು ನೀಡಲಾಗುತ್ತದೆ.

ಈ ಸಂಬಂಧ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, “ಜಿಲ್ಲೆಯಲ್ಲಿ ಹೊಸದಾಗಿ 14 ಕಂದಾಯ ಗ್ರಾಮಗಳನ್ನು ರಚಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಲು ಈ ಪ್ರದೇಶಗಳ ಸಂಪೂರ್ಣ ಸರ್ವೆ ಮಾಡಿಸಿ, ಪಹಣಿ ದಾಖಲೆಗಳ ಬದಲಾವಣೆ, ಗ್ರಾಮಗಳ ಗಡಿ ಗುರುತು ಮುಂತಾದ ಕಾರ್ಯಗಳನ್ನು ಹಂತ ಹಂತವಾಗಿ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್