
- ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದ ಆರೋಪಿ
- ಭಟ್ಕಳ ಹಾಗೂ ಮುರಡೇಶ್ವರ ಪೂಲೀಸರ ಕಾರ್ಯಾಚರಣೆ
ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿ, ಭಟ್ಕಳದಲ್ಲಿ ಕೋಮು ಸಂಘರ್ಷ ಹುಟ್ಟುಹಾಕುಲು ಯತ್ನಿಸಿದ ಕೋಮುವಾದಿ ಹಿಂದು ಕಾರ್ಯಕರ್ತರನ್ನು ಭಟ್ಕಳ ಪೋಲಿಸರು ಬಂಧಿಸಿದ್ದಾರೆ.
ಇಬ್ಬರು ಹಿಂದುತ್ವವಾದಿ ಕಾರ್ಯಕರ್ತರು ತಮ್ಮ ವ್ಯಯಕ್ತಿಕ ದ್ವೇಷದ ಗಲಾಟೆಗೆ ಕೋಮು ಬಣ್ಣ ಬಳಿಯುವ ಉದ್ದೇಶದಿಂದ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯನ್ನು ಪರಿಶೀಲಿಸಿದ ಭಟ್ಕಳ ಹಾಗೂ ಮುರಡೇಶ್ವರ ಪೂಲೀಸರು ಕಾರ್ಯಾಚರಣೆ ನಡೆಸಿ, ದುರುದ್ದೇಶದಿಂದ ದೂರು ನೀಡಿದವರನ್ನು ಬಂಧಿಸಿದ್ದಾರೆ.
ಶಿರಾಲಿಯ ನವೀನ್ ಸೋಮಯ್ಯ ನಾಯ್ಕ ಮತ್ತು ನವೀನ್ ವೆಂಕಟೇಶ ನಾಯ್ಕ ಬಂಧಿತರು. ಇಬ್ಬರೂ ವಯಕ್ತಿಕ ಕಾರಣಕ್ಕೆ ಅಕ್ಟೋಬರ್ 8ನೇ ತಾರೀಕಿನಂದು ತೆರ್ನಮಕ್ಕಿ ಚರ್ಚ್ ಎದುರು ಜಗಳ ಮಾಡಿಕೊಂಡಿದ್ದರು. ನವೀನ್ ಸೋಮಯ್ಯ ನಾಯ್ಕ್ ಮೇಲೆ ನವೀನ್ ವೆಂಕಟೇಶ ನಾಯ್ಕ್ ಹಲ್ಲೆ ಮಾಡಿದ್ದನು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆದರೆ, ನವೀನ್ ಸೋಮಯ್ಯ ನಾಯ್ಕ್ ತಾನು ಮಾವಿನಕಟ್ಟಾದಿಂದ ಮುರುಡೇಶ್ವರದ ಕುಂಬಾರಕೇರಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ಟಿವಿಎಸ್ ಜೂಪಿಟರ್ ಸ್ಕೂಟಿಯಲ್ಲಿ ಬಂದ ವ್ಯಕ್ತಿಗಳು ರಾಡ್ ಮತ್ತು ಚೈನ್ನಿಂದ ತನಗೆ ಹಲ್ಲೆಮಾಡಿ ಹೋಗಿದ್ದಾರೆ. ಅವರು ಹಿಂದಿ ಮಾತನಾಡುತಿದ್ದರು. ಬಿಳಿ ಪಂಚೆ ಉಟ್ಟಿದ್ದರು. ಅವರು ಅನ್ಯಕೋಮಿನವರು ಎಂದು ಮುರುಡೇಶ್ವರ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುರುಡೇಶ್ವರ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಸಮಗ್ರ ತನಿಖೆ ನಡೆಸಿದ್ದಾರೆ. ಕೊನೆಗೆ ದೂರುದಾರನ ಬಗ್ಗೆ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. 'ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಸುಳ್ಳು ದೂರು ನೀಡಿದ್ದಾಗಿ ನವೀನ್ ತಪ್ಪನ್ನು ಒಪ್ಪಿಕೊಂಡಿದ್ದಾನೆ' ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಳು ದೂರು ನೀಡಿದ ಹಾಗೂ ಹಲ್ಲೆ ನಡೆಸಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.