ಉತ್ತರ ಕನ್ನಡ | ಜಿಲ್ಲಾಧಿಕಾರಿಗೆ ದೂರು ನೀಡಿದ್ದಕ್ಕೆ ಕ್ಷೌರಿಕನ ಅಂಗಡಿಗೆ ಬೀಗ ಜಡಿಯಲು ಮುಂದಾದ ಗ್ರಾಮ ಪಂಚಾಯ್ತಿ!

  • ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೌರಿಕ ವೃತ್ತಿ ನಿಷೇಧಿಸಿ ಆದೇಶ
  • ಸಾರ್ವಜನಿಕರ ಖಂಡನೆ ಬಳಿಕ ಕ್ಷಮೆ ಕೇಳಿ ರಾಜೀನಾಮೆ ನೀಡುವುದಾಗಿ ಹೇಳಿಕೆ

ಕೋವಿಡ್ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯಿಂದ ಸರಿಯಾಗಿ ಸ್ಪಂದಿಸಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ ಕಾರಣಕ್ಕೆ ಕ್ಷೌರಿಕ ವೃತ್ತಿ ಮಾಡುವವರೊಬ್ಬರ ಅಂಗಡಿಯನ್ನು ಗ್ರಾಮ ಪಂಚಾಯ್ತಿಯವರು ಮುಚ್ಚಿಸಲು ಮುಂದಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ. ಕಳೆದ ಕೋವಿಡ್ ಸಂದರ್ಭದಲ್ಲಿ ವಂದಾನೆ ಗ್ರಾಮದ ಗೋಪಾಲಕೃಷ್ಣ ಕೊಡಿಯಾರವರ ಪತ್ನಿ ಮತ್ತು ಮಗಳಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮೊದಲ ದಿನ ಬಂದು ಮನೆಯನ್ನು ಸೀಲ್‌ಡೌನ್ ಮಾಡಿ ನೋಟಿಸ್ ಅಂಟಿಸಿ, ಸ್ಯಾನಿಟೈಸರ್ ಮತ್ತು ಮಾಸ್ಕ್ ನೀಡಿ ಹೋಗಿದ್ದರು. ನಂತರ ಆ ಕಡೆ ಸಂಬಂಧಪಟ್ಟವರು ಯಾರೂ ಮುಖ ತೋರಿಸಿರಲಿಲ್ಲ ಎಂದು ಗೋಪಾಲಕೃಷ್ಣ ಆರೋಪಿಸಿದ್ದರು.

Eedina App

ಕ್ಯಾದಗಿ ಗ್ರಾಮ ಪಂಚಾಯಿತಿಯಿಂದ ನೀಡಿದ ಸ್ಯಾನಿಟೈಸರ್ ಅವಧಿ ಮುಕ್ತಾಯಗೊಂಡಿತ್ತು. ಯಾವುದೇ ಸಹಕಾರ ಸಿಗದ ಕಾರಣಕ್ಕೆ ಗೋಪಾಲಕೃಷ್ಣರವರು ಸ್ಯಾನಿಟೈಸರ್‌ನ ಫೋಟೊ ತೆಗೆದು ಜಿಲ್ಲಾಧಿಕಾರಿಗೆ ವಾಟ್ಸಪ್ ಮುಖಾಂತರ ಕಳುಹಿಸಿದ್ದರು. ಬಳಿಕ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಸೂಚಿಸಿದ್ದರು. 

ಗ್ರಾಮ ಪಂಚಾಯಿತಿ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ ಕಾರಣಕ್ಕೆ ಗೋಪಾಲಕೃಷ್ಣ ಕೊಡಿಯಾ ಅವರನ್ನು ಕ್ಯಾದಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ದ್ವೇಷ ಸಾಧಿಸಿದ್ದರು. ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ಷೌರಿಕ ವೃತ್ತಿ ನಡೆಸದಂತೆ ಆದೇಶ ಹೊರಡಿಸಿದ್ದರು.

AV Eye Hospital ad
uk dc
ಗೋಪಾಲಕೃಷ್ಣ ಕೊಡಿಯಾ ಹಾಗೂ ಜಿಲ್ಲಾಧಿಕಾರಿಗೆ ನೀಡಿದ್ದ ದೂರು

 

ರಾಜೀನಾಮೆ ನೀಡುವುದಾಗಿ ಹೇಳಿಕೆ

ಕ್ಯಾದಗಿ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಗೋಪಾಲಕೃಷ್ಣ ಕೊಡಿಯಾ ಅವರ ವಿಚಾರವಾಗಿ ಗದ್ದಲ ಉಂಟಾಗಿತ್ತು. ಕ್ಷೌರಿಕ ವೃತ್ತಿ ನಿಷೇಧಿಸಿ ಆದೇಶ ಮಾಡಿ ಮಾನಸಿಕ ಕಿರುಕುಳ, ಆರ್ಥಿಕ ತೊಂದರೆ ನೀಡಿದ ಘಟನೆಗೆ ಗ್ರಾಮ ಪಂಚಾಯಿತಿ ಸದಸ್ಯರು ಕ್ಷಮೆ ಕೇಳಿದರು. ನಂತರ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದು ಗಲಾಟೆ ಆರಂಭಿಸಿದ ಬಳಿಕ ಉಪಾಧ್ಯಕ್ಷರು ತಾವು ಮತ್ತು ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಒಪ್ಪಿಕೊಂಡರು.

ಪಿಡಿಒ ವಿರುದ್ಧ ಕ್ರಿಮಿನಲ್ ಕೇಸ್

ಕ್ಷೌರಿಕ ಅಂಗಡಿ ಮುಚ್ಚುವಂತೆ ಕ್ಯಾದಗಿ ಗ್ರಾಮ ಪಂಚಾಯಿತಿಯಿಂದ ನೋಟಿಸ್ ನೀಡಿದ್ದನ್ನು ಪ್ರಶ್ನಿಸಿ ಗೋಪಾಲಕೃಷ್ಣ ಸಿದ್ದಾಪುರ ತಾಲೂಕು ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯವು ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಕ್ರಿಮಿನಲ್ ಪ್ರಕರಣ ಮತ್ತು ಸದಸ್ಯರ ವಿರುದ್ಧ ಸಿವಿಲ್ ಪ್ರಕರಣ ದಾಖಲಿಸಿದೆ. 

ಈ ಸುದ್ದಿ ಓದಿದ್ದೀರಾ? ಕೋಲಾರ | ಉಳ್ಳೇರಹಳ್ಳಿ ಪ್ರಕರಣ: ಗುಜ್ಜುಕೋಲು ಹೊರ ತಂದು ಯುವಕರ ಆಕ್ರೋಶ

ಸಿಇಒ, ಗ್ರಾ.ಪಂ ಅಧ್ಯಕ್ಷರ ರಾಜೀನಾಮೆ ಪಡೆಯಲಿ

ಘಟನೆ ಕುರಿತು ಈ ದಿನ.ಕಾಮ್ ಜತೆಗೆ ಗೋಪಾಲ ಕೃಷ್ಣ ಕೊಡಿಯಾ ಮಾತನಾಡಿ, “ಅಧಿಕಾರ ದುರುಪಯೋಗ ಪಡಿಸಿಕೊಂಡು ಗ್ರಾಮ ಪಂಚಾಯಿತಿಯಿಂದ ಶೋಷಿತ ವರ್ಗದ ವ್ಯಕ್ತಿ ಗೆ ಮಾನಸಿಕ ಹಿಂಸೆ, ದೌರ್ಜನ್ಯ ನಡೆಸಲಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಅವರು, ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜೀನಾಮೆ ಪಡೆಯಬೇಕು. ನನಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ನಮ್ಮ ಒತ್ತಾಯ” ಎಂದು ಹೇಳಿದರು.

ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿಯ ಘಟನೆ ನಡೆದಿರುವುದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿದೆ.

ನಿಮಗೆ ಏನು ಅನ್ನಿಸ್ತು?
7 ವೋಟ್
eedina app