
ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಾಲ್ಕೋಡ್ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಹೊನ್ನಾವರ ತಾಲೂಕಿನ ಹುಡಗೋಡದ ಮಹಾಬಲೇಶ್ವರ ನಾಯ್ಕ ಹಾಗೂ ಬಳಕೂರಿನ ಗಜಾನನ ನಾಯ್ಕ ಎಂಬವರು ಚಿರತೆ ದಾಳಿಯಲ್ಲಿ ಗಾಯಗೊಂಡವರು. ಇವರು ಸಾಲ್ಕೋಡ್ ಗ್ರಾಮದಲ್ಲಿ ಮನೆ ಪೇಂಟಿಂಗ್ ಕೆಲಸಕ್ಕೆಂದು ತೆರಳಿದ್ದರು. ಕೆಲಸ ಮುಗಿಸಿ, ವಾಪಸ್ಸಾಗುವಾಗ ಘಟನೆ ನಡೆದಿದೆ.
ಇಬ್ಬರೂ ಬೈಕ್ನಲ್ಲಿ ತೆರಳುತ್ತಿದ್ದಾಗ ಗುಡ್ಡದ ಮೇಲಿದ್ದ ಚಿರತೆ ಏಕಾಏಕಿ ಬೈಕ್ ಸವಾರರ ಮೇಲೆರಗಿ ದಾಳಿ ನಡೆಸಿದೆ. ದಾಳಿಯಲ್ಲಿ ಮಹಾಬಲೇಶ್ವರ ಎಂಬುವವರ ಮೊಣಕಾಲಿಗೆ ಗಂಭೀರ ಗಾಯಗಳಾಗಿದ್ದು, ದೇಹದ ಇತರೆಗೆ ಪರಚಿದ ಗಾಯಗಳಾಗಿವೆ.
ಗಾಯಾಳುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರು ಅರೇಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸಧ್ಯ ಗಾಯಗೊಂಡ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಹಲವು ದಿನಗಳಿಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುವುದು ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿರುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅರಣ್ಯ ಇಲಾಖೆಯವರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಮುಂದಾದರು ವನ್ಯ ಪ್ರಾಣಿಗಳಿಂದ ಜಾನುವಾರು ಹಾಗೂ ಜನರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ತಾಲೂಕಿನ ಜನರು ಆಗ್ರಹಿಸಿದ್ದಾರೆ.