ಉತ್ತರ ಕನ್ನಡ | ಹೊಸ ಪ್ರಭೇದದ ಏಡಿಗೆ ‘ಘಟಿಯಾನ ದ್ವಿವರ್ಣ’ ಎಂದು ನಾಮಕರಣ

uttara kannada
  • ಯಲ್ಲಾಪುರದ ಬಾರೆ ಎಂಬಲ್ಲಿ ಪತ್ತೆ
  • ಬಿಳಿ ಮತ್ತು ನೇರಳೆ ಬಣ್ಣದಿಂದ ದೇಹ ರಚನೆ

ಸಿಹಿ ನೀರಿನಲ್ಲಿ ವಾಸಿಸುವ ಹೊಸ ಪ್ರಭೇದಕ್ಕೆ ಸೇರಿದ ಏಡಿಯೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಾರೆ ಎಂಬಲ್ಲಿ ಪತ್ತೆಯಾಗಿದೆ.

ಏಡಿಯ ದೇಹವು ಬಿಳಿ ಬಣ್ಣದಿಂದ ಕೂಡಿದ್ದು, ಕಾಲುಗಳು ನೇರಳೆ ಬಣ್ಣದಲ್ಲಿದೆ. ಎರಡು ಬಣ್ಣದಿಂದ ಕಂಗೊಳಿಸುವ ಏಡಿಗೆ ‘ಘಟಿಯಾನ ದ್ವಿವರ್ಣ’ ಎಂದು ನಾಮಕರಣ ಮಾಡಿದ್ದಾರೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಈ ಭಾಗದಲ್ಲಿ ಅಧ್ಯಯನದಲ್ಲಿ ತೊಡಗಿದ್ದಾಗ ಎರಡು ಬಣ್ಣದ  ಏಡಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ಗುರುತಿಸಿದ್ದರು. 

ಈ ಏಡಿಯ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಿದ ತಂಡಕ್ಕೆ ಈ ಏಡಿ ಹೊಸ ಪ್ರಭೇದಕ್ಕೆ ಸೇರುತ್ತದೆ ಎಂದು ತಿಳಿದಿದೆ. ಎರಡು ಬಣ್ಣಗಳಿಂದ ಕೂಡಿರುವುದರಿಂದ ದ್ವಿವರ್ಣ ಎಂದು ಹೆಸರಿಟ್ಟಿದ್ದಾರೆ.

ಸಾಮಾನ್ಯವಾಗಿ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಏಡಿಗಳನ್ನು ‘ಘಟಿಯಾನ’ ಶಬ್ದದೊಂದಿಗೆ ಗುರುತಿಸಲಾಗುತ್ತದೆ. ಈ ಏಡಿಯು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದರಿಂದ ಆ ಹೆಸರನ್ನು ಮೊದಲಲ್ಲಿ ಸೇರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಮಂಗಳೂರು | ಸರ್ಕಾರಿ ಉಪಕರಣಾಗಾರ-ತರಬೇತಿ ಕೇಂದ್ರದಿಂದ ಅರ್ಜಿ ಆಹ್ವಾನ

“ ಈ ಪ್ರಭೇದದಲ್ಲಿ ಈಗಾಗಲೇ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಪತ್ತೆ ಹಚ್ಚಲಾಗಿದೆ. ‘ದ್ವಿವರ್ಣ’ವು 14ನೆಯದ್ದಾಗಿದೆ” ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ ಹೇಳಿದ್ದಾರೆಂದು 'ಪ್ರಜಾವಾಣಿ' ಉಲ್ಲೇಖಿಸಿದೆ. 

“ನಮ್ಮ ದೇಶದಲ್ಲಿ 125 ಏಡಿಗಳ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಒಂದರಲ್ಲಿಯೇ ಸುಮಾರು 74 ವಿವಿಧ ಪ್ರಭೇದದ ಏಡಿಗಳನ್ನು ಗುರುತಿಸಲಾಗಿದೆ. ಘಟಿಯಾನ ದ್ವಿವರ್ಣ 75ನೇ ಪ್ರಭೇದವಾಗಿದೆ” ಎಂದು ಮಂಜುನಾಥ್‌ ಹೇಳಿದ್ದಾರೆ. 

“ಈ ಭಾಗದಲ್ಲಿ ಕಂಡುಬರುವ ಗಂಡು ದ್ವಿವರ್ಣ ಏಡಿಗಳು 48 ಸೆಂಟಿ ಮೀಟರ್ ಗಾತ್ರವಿದ್ದರೆ, ಹೆಣ್ಣು 34 ಸೆಂಟಿಮೀಟರ್ ಗಾತ್ರವಿರುತ್ತದೆ. ಬಂಡೆಗಳ ಅಡಿಯಲ್ಲಿರುವ ರಂಧ್ರಗಳು ದ್ವಿವರ್ಣ ಏಡಿಗಳ ವಾಸಸ್ಥಾನವಾಗಿದೆ. ಸಣ್ಣ ಹುಳಗಳನ್ನು ಮತ್ತು ಪಾಚಿಯನ್ನು ಆಹಾರವಾಗಿ ಸೇವಿಸುತ್ತವೆ” ಎಂದು ಮಾಹಿತಿ ನೀಡಿದ್ದಾರೆ.

ಹೊಸ ಪ್ರಭೇದದ ಏಡಿಯನ್ನು ಪತ್ತೆ ಹಚ್ಚಿದ್ದಕ್ಕಾಗಿ ತಂಡದ ಸದಸ್ಯರನ್ನು ಭಾರತೀಯ ಭೌಗೋಳಿಕ ಸಮೀಕ್ಷೆ (ಜಿ.ಎಸ್.ಐ) ‘ನಾಗರಿಕ ವಿಜ್ಞಾನಿಗಳು’ ಎಂದು ಗೌರವಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್