ವೇದಗಣಿತ ಕಲಿಕೆಯಲ್ಲಿ ಸರಕಾರದ ಶೂನ್ಯ ಸಂಪಾದನೆ: ಸದ್ದಿಲ್ಲದೆ ಆದೇಶ ಹಿಂದಕ್ಕೆ

Vidhana Soudha
  • ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದಿಗೆ ಸಮಾಲೋಚಿಸದೇ ನಿರ್ದೇಶನ ನೀಡಲಾಗಿತ್ತು
  • ಎಸ್‌ಸಿ-ಎಸ್‌ಟಿ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕ್ರಿಯಾ ಯೊಜನೆ ಅನುಮೋದನೆಗೊಂಡಿರಲಿಲ್ಲ

ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ವೇದ ಗಣಿತ ಕಲಿಸಲು ಹೊರಟಿದ್ದ ರಾಜ್ಯ ಸರಕಾರವು, ಇದಕ್ಕೆ ಕಂಡು ಬಂದ ವಿರೋಧಕ್ಕೆ ಬೆದರಿ ತನ್ನ ಆದೇಶವನ್ನು ಸದ್ದಿಲ್ಲದೆ ಹಿಂದಕ್ಕೆ ಪಡೆದಿದೆ.

ವೇದಗಣಿತದ ಕಲಿಕೆಯಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವೇ ಕುಸಿಯಲಿದೆ, ವಿದ್ಯಾರ್ಥಿಗಳು ಅನಗತ್ಯ ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದು ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ದಿನ.ಕಾಂ ಸಹ ಈ  ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿತ್ತು.

Eedina App

ಕರ್ನಾಟಕದ ಗ್ರಾಮ ಪಂಚಾಯಿತಿಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಅನುದಾನದ ಬಳಸಿಕೊಂಡು 5 ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವೇದಗಣಿತ ತರಬೇತಿ ನೀಡುವ ಕುರಿತು ಸರ್ಕಾರ  ಈ ಹಿಂದೆ ಆದೇಶ ಹೊರಡಿಸಿತ್ತು. ಇದನ್ನು ಕಳೆದ ಮಂಗಳವಾರ (ಅ.11) ಹಿಂದಕ್ಕೆ ಪಡೆಯಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಎಂ ರಾಜು ಈ ಕುರಿತು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

AV Eye Hospital ad

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿರುವ ಶೇ. 25ರಷ್ಟು ಅನುದಾನದಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತ ಸಮವಸ್ತ್ರ ಸಹಿತ ವೇದಗಣಿತ ತರಬೇತಿ ನೀಡಲು ಹಿರಿಯೂರಿನ ಎವಿಎಂ ಅಕಾಡೆಮಿಗೆ ಗುತ್ತಿಗೆ ನೀಡಲಾಗಿತ್ತು. ಈ ಕುರಿತು ನಿಯಮಾನುಸಾರ ಮತ್ತು ಮಾರ್ಗಸೂಚಿಗಳ ಅನ್ವಯ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಲ್ಲೇಖಿತ ಪತ್ರದಲ್ಲಿ ನಿರ್ದೇಶನ ನೀಡಲಾಗಿತ್ತು. 

ಪ್ರಸ್ತುತ ಈ ವಿಷಯದ ಕುರಿತು ಪುನರ್ ಪರಿಶೀಲಿಸಲಾಗಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ವಿಷಯಗಳ ಪಠ್ಯ ಕ್ರಮದ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನಿರ್ಧರಿಸಬೇಕಾಗಿರುತ್ತದೆ. ಆದರೆ, ಈ ಕುರಿತು ಇಲಾಖೆಯೊಂದಿಗೆ ಸಮಾಲೋಚಿಸದೇ ನಿರ್ದೇಶನ ನೀಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸರ್ಕಾರದ ಪತ್ರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಎಸ್‌ಸಿ - ಎಸ್‌ಟಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸೆ. 28ರಂದು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಉಪಕಾರ್ಯದರ್ಶಿ ಪ್ರಜ್ಞಾ ಅಮ್ಮೆಂಬಳ ಅವರು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರು. 

ಈ ಸುದ್ದಿ ಓದಿದ್ದೀರಾ? ದೆಹಲಿ ಕಾಂಗ್ರೆಸ್ಸಿಗರಿಗೆ ಕರ್ನಾಟಕ ಎಟಿಎಂ ಇದ್ದಂತೆ: ಸಿಎಂ ಬೊಮ್ಮಾಯಿ ಟೀಕೆ

ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಹಕ್ಕುಗಳ ಸಂರಕ್ಷಣಾ ಪರಿಷತ್ತು, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದ್ದ ಪತ್ರದಲ್ಲಿ ‘ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಅಧಿನಿಯಮ 2013 ಮತ್ತು 2017ರ ನಿಯಮಗಳನ್ನು ಉಲ್ಲಂಘಿಸಿ 'ವೇದ ಗಣಿತ' ಎಂಬ ಯೋಜನೆಯ ಆದೇಶವನ್ನು ಹೊರಡಿಸಿದ್ದು, ಆ ಆದೇಶವು ಮುಖ್ಯಮಂತ್ರಿ ಅಧ್ಯಕ್ಷತೆಯ ಎಸ್ಸಿ ಎಸ್ಟಿ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಕ್ರಿಯಾ ಯೊಜನೆ ಅನುಮೋದನೆಗೊಂಡಿಲ್ಲ. ಹಾಗಾಗಿ, 'ವೇದ ಗಣಿತ' ಯೋಜನೆಯ ಅನುಷ್ಠಾನದ ಆದೇಶವನ್ನು ಹಿಂಪಡೆಯುವಂತೆ ಕೋರಿತ್ತು’ ಎಂದು ತಿಳಿಸಿದ್ದಾರೆ.

ವೇದಗಣಿತ ಯೋಜನೆಯ ಅನುಷ್ಠಾನಗೊಳಿಸಬೇಕಾದಲ್ಲಿ ಮುಂದಿನ ನೋಡಲ್ ಏಜೆನ್ಸಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ಪತ್ರದಲ್ಲಿ ತಿಳಿಸಿದ್ದರು.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app