ಒಂದು ನಿಮಿಷದ ಓದು| ಹಿರಿಯ ಸಾಹಿತಿ ಪ್ರೊ ಎಂ.ಎಚ್‌. ಕೃಷ್ಣಯ್ಯ ನಿಧನ

M H Krishnaiah

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ವಿಮರ್ಶಕ ಪ್ರೊ ಎಂ. ಎಚ್‌. ಕೃಷ್ಣಯ್ಯ ಇಂದು (ಆ.12) ಸಂಜೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಗಾಯತ್ರಿ ನಗರದ ಹರಿಶ್ಚಂದ್ರಘಾಟ್‌ನಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ  ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಜನಿಸಿದ ಕೃಷ್ಣಯ್ಯ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ ಎ ಮತ್ತು ಎಂ ಎ ಪದವಿ ಮುಗಿಸಿ, ಪ್ರಾಧ್ಯಾಪಕರಾಗಿ ಬೆಂಗಳೂರು, ಮಂಗಳೂರು, ಕೋಲಾರ, ಮಾಗಡಿ ಸೇರಿದಂತೆ ಹಲವು ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು.

ʼಕುವೆಂಪು ಸಾಹಿತ್ಯ: ಚಿತ್ರ ಸಂಪುಟʼ ಕೃತಿಯನ್ನು ಸಂಪಾದಿಸಿ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಆರ್‌ ಎಂ ಹಡಪದ, ರೂಪಶಿಲ್ಪಿ ಬಸವಯ್ಯ , ಶೃಂಗಾರ ಲಹರಿ, ಕಲಾದರ್ಶನ, ರಂಗಭೂಮಿ ಮತ್ತು ಸೌಂದರ್ಯ ಪ್ರಜ್ಞೆ ಸೇರಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಅವರು ರಚಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಿ, ಕನ್ನಡ ಪುಸ್ತಕ ಪ್ರಾಧಿಕಾರ, ತಾಂಜಾವೂರಿನ ದಕ್ಷಿಣ ವಿಭಾಗೀಯ ಸಾಂಸ್ಕೃತಿಕ ಕೇಂದ್ರ, ಉದಯಭಾನು ಕಲಾ ಸಂಘದಲ್ಲಿ ಕೃಷ್ಣಯ್ಯ ಸಕ್ರಿಯರಾಗಿದ್ದರು.

ʼಶೃಂಗಾರ ಲಹರಿʼ ಕೃತಿಗೆ ಲಲಿತಾ ಕಲಾ ಅಕಾಡೆಮಿ ಪುರಸ್ಕಾರ, ʼಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆʼ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಲಭಿಸಿತ್ತು. ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಹಾಗೂ ಮಾಸ್ತಿ ಪ್ರಶಸ್ತಿಗೂ ಕೃಷ್ಣಯ್ಯ ಭಾಜನರಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್