ವಿಜಯನಗರ | ಪ್ರತಿಭಟನೆ ವೇಳೆ ಪೆಟ್ರೊಲ್ ಸುರಿದುಕೊಳ್ಳಲು ಪ್ರಚೋದನೆ ಆರೋಪ; ಪತ್ರಕರ್ತನ ವಿರುದ್ಧ ಕೇಸ್!

  • 'ಜಾಗೃತಿ ಬೆಳಕು' ಪತ್ರಿಕೆಯ ವರದಿಗಾರ ಮುಹಮ್ಮದ್ ಗೌಸ್ ವಿರುದ್ಧ ಪ್ರಕರಣ
  • ಎಸ್ಪಿ ಕಚೇರಿ ಮುಂದೆ ಪೆಟ್ರೊಲ್ ಸುರಿದುಕೊಂಡಿದ್ದ ಡಿ ಪೋಲಪ್ಪ ಕುಟುಂಬ 

ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿಯಲ್ಲಿ ಪತ್ರಕರ್ತ ಮುಹಮ್ಮದ್ ಗೌಸ್ ವಿರುದ್ಧ ಗುರುವಾರ ಹೊಸಪೇಟೆ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.

“ಡಿ ಪೋಲಪ್ಪ ಮತ್ತು ಅವರ ಕುಟುಂಬದ ಆರು ಮಂದಿ ಸದಸ್ಯರು ಆಗಸ್ಟ್ 30ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರು ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ “ಜಾಗೃತಿ ಬೆಳಕು” ಪತ್ರಿಕೆಯ ವರದಿಗಾರ ಮಹಮ್ಮದ್ ಗೌಸ್ ಅವರು ಕೈಸನ್ನೆ ಮೂಲಕ ಮೈಮೇಲೆ ಪೆಟ್ರೋಲ್ ಸುರಿದುಕೊಳ್ಳುವಂತೆ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ. ಪ್ರಚೋದನೆಗೆ ಸಂಬಂಧಿಸಿದ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಹೇಳಿಕೆ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ? ವಿಜಯನಗರ| ಸಚಿವ ಆನಂದ್ ಸಿಂಗ್ ವಿರುದ್ಧ 'ಅಟ್ರಾಸಿಟಿ ಕೇಸ್' ದಾಖಲು

“ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ಅವರು ಪೆಟ್ರೋಲ್ ಸುರಿದು ಸುಟ್ಟು ಹಾಕುತ್ತೇನೆ” ಎಂದು ನನ್ನ ಮನೆಗೆ ಬಂದು ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದರು. ಅದೇ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ಕೊಡಲು ಹೋದಾಗ ಎಸ್ಪಿ ಇರಲಿಲ್ಲ. ಬೇಸತ್ತು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೆ. ಅನಂತರ ಪೊಲೀಸರು ಬಂದು ತಡೆದರು” ಎಂದು ಡಿ ಪೋಲಪ್ಪ ಲಿಖಿತ ದೂರು ನೀಡಿದ್ದರು. 

ಅದಾದ ನಂತರ ಸಚಿವ ಆನಂದ್ ಸಿಂಗ್ ಹಾಗೂ ಇತರರ ಮೂವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಎಸ್ಸಿ ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್