ವಿಜಯನಗರ | ಕ್ಯಾಸನಕೆರೆಯಲ್ಲಿ ಹತ್ತು ಜನಕ್ಕೆ ವಾಂತಿ ಭೇದಿ, ಬಾಲಕಿ ಸಾವು; ಜಿಲ್ಲಾಧಿಕಾರಿ ಭೇಟಿ

Kudligi
  • ಆಗಸ್ಟ್‌ 12 ರಂದು ಬಿಂದು ಎನ್ನುವ ಬಾಲಕಿ ಸಾವು
  • ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದ ಅಧಿಕಾರಿಗಳು

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ ಹತ್ತು ಜನರಿಗೆ ವಾಂತಿ ಭೇದಿ ಮತ್ತು ಕಳೆದ ಶುಕ್ರವಾರ ಬಾಲಕಿಯೋರ್ವಳು ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕ್ಯಾಸನಕೆರೆ ಗ್ರಾಮದಲ್ಲಿ ಸಂಚರಿಸಿ ಕುಡಿಯುವ ನೀರು ಪೂರೈಕೆಯಾಗುವ ಪೈಪ್ ಲೈನ್, ಮಿನಿ ಟ್ಯಾಂಕ್ ಹಾಗೂ ಓವರ್ ಹೆಡ್ ಟ್ಯಾಂಕ್‌ಗಳನ್ನು ವೀಕ್ಷಣೆ ಮಾಡಿ, ಗ್ರಾಮದಲ್ಲಿ ಮತ್ತೊಮ್ಮೆ ಎಲ್ಲ ಕಡೆ ಸ್ವಚ್ಛತೆಯನ್ನು ಕೈಗೊಳ್ಳುವಂತೆ ಚೌಡಾಪುರ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.

ಆಗಸ್ಟ್‌ 12ರಂದು ಗ್ರಾಮದಲ್ಲಿ ಬಿಂದು ಎನ್ನುವ ಬಾಲಕಿ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ವಾಂತಿ ಭೇದಿಯಿಂದ ಕೂಡ್ಲಿಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.   

ಈ ವೇಳೆ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್, ತಾಲೂಕು ಪಂಚಾಯತಿ ಇಒ ವೈ ರವಿ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರದೀಪ್ ಸಿಡಿಪಿಓ ನಾಗನಗೌಡ ಹಾಗೂ ಪಿಡಿಓ ಪ್ರಶಾಂತ್ ಉಪಸ್ಥಿತರಿದ್ದರು.

ಪ್ರಕರಣದ ಹಿನ್ನೆಲೆ

ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾಸನಕೆರೆ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಗ್ರಾಮದ ಹತ್ತು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತು ಆಗಸ್ಟ್‌ 12 ರಂದು ಬಿಂದು (5) ಎನ್ನುವ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಡಪೇಟೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಳು.

ಈ ಸುದ್ದಿ ಓದಿದ್ದೀರಾ?; ‘ಸರ್ಕಾರ ನಡೀತಾ ಇಲ್ಲ..’ ಎಂಬ ಹೇಳಿಕೆ ಹಿಂದಿನ ಮರ್ಮವೇನು? ಮಾಧುಸ್ವಾಮಿ ಮೇಲೆ ಯಡಿಯೂರಪ್ಪ ಬಣ ಮುಗಿಬಿದ್ದಿದ್ಯಾಕೆ?

ಗ್ರಾಮದ ಮಹೇಶ್, ಲೋಕೇಶ್, ಬಾಲಕಿ ಕೀರ್ತನಾ ಹಾಗೂ ರಾಜು, ಬಸವರಾಜ ಸೇರಿ ಇತರರು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಗ್ರಾಮದಲ್ಲಿ ಸರಬರಾಜು ಆಗುವ ಪೈಪ್ ಲೈನ್ ಡ್ಯಾಮೇಜ್ ಆಗಿದ್ದು ಹಾಗಾಗಿ ಕಲುಷಿತ ನೀರು ಸರಬರಾಜಾಗುತ್ತಿದೆ. ಈ ನೀರಿನ ಸೇವನೆಯಿಂದ ಜನರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಘಟನೆಗೆ ಸ್ಪಷ್ಟ ಕಾರಣ ತಿಳಿದಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ವೈದ್ಯರು ಹಾಗೂ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರ ತಂಡ ಚಿಕಿತ್ಸಾ ಕಾರ್ಯದಲ್ಲಿ ತೊಡಗಿದ್ದಾರೆ.

ಘಟನೆಯ ನಂತರ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಉಪ ಕಾರ್ಯದರ್ಶಿ ತಿಮ್ಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖನಾಯ್ಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎಂ.ಪಿ.ದೊಡ್ಡಮನಿ ಭೇಟಿ ನೀಡಿ ಪರಿಶೀಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್