ವಿಜಯನಗರ | ನಿರ್ಲಕ್ಷ್ಯಕ್ಕೆ ಒಳಗಾದ ಭೀಮಸಮುದ್ರದ ದಲಿತ ಕಾಲೊನಿ

Bheemasamudra
  • ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ದಲಿತ ಕಾಲೊನಿ
  • ಗ್ರಾಮದ ದಲಿತರ ಕಾಲೋನಿ ಎಂದು ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡು ಮುಡುಗು ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮಸಮುದ್ರ ಗ್ರಾಮದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ದಲಿತ ಕಾಲೊನಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸುಮಾರು 70 ಮನೆಗಳು ಇರುವ ದಲಿತ ಕಾಲೊನಿಯಲ್ಲಿ ಅವೈಜ್ಞಾನಿಕ ಕಳಪೆ ರಸ್ತೆ ಕಾಮಗಾರಿಯಿಂದ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಸರಿಯಾಗಿ ನೀರು ಹರಿಯದೆ ರಸ್ತೆಯಲ್ಲಿಯೇ ನಿಂತು ಕೊಳಚೆ ಪ್ರದೇಶ ನಿರ್ಮಾಣವಾಗಿ ಕಾಯಿಲೆಗಳನ್ನು ಹರಡುವ ತಾಣವಾಗಿ ಪರಿಣಮಿಸಿದೆ.

ಇಡೀ ಕಾಲೊನಿಗೆ ಒಂದೇ ಕುಡಿಯುವ ನೀರಿನ ಟ್ಯಾಂಕ್ ಇದ್ದು, ಅದು ಕೂಡ ದುರಾವಸ್ಥೆಯಲ್ಲಿದೆ. ಟ್ಯಾಂಕ್ ಶಿಥಿಲಗೊಂಡಿದ್ದು, ಸಿಮೆಂಟ್ ಕಿತ್ತುಕೊಂಡಿದ್ದು, ಕೇವಲ ಕಬ್ಬಿಣದ ತುಕ್ಕು ಮಾತ್ರ ಉಳಿದಿದೆ. ಆ ನೀರನ್ನು ಕುಡಿದು ಕಾಲೊನಿಯ ಹಲವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

"ಇಡೀ ಗ್ರಾಮದ ಬೇರೆ ಬೇರೆ ಕಾಲೊನಿಗಳ ಬೀದಿ ದೀಪಗಳ ಸರಿ ಇದೆ. ಆದರೆ ವಿಪರ್ಯಾಸ ಎಂಬಂತೆ ದಲಿತ ಕಾಲೊನಿಯಲ್ಲಿ ಮಾತ್ರ ಬೀದಿ ದೀಪ ರಾತ್ರಿ ವೇಳೆ ಉರಿಯುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಕತ್ತಲೆಯಲ್ಲಿಯೇ ಸಂಚರಿಸುವಂತಾಗಿದೆ. ದಲಿತ ಕೇರಿ ಅನ್ನುವ ಕಾರಣಕ್ಕೆ ಗ್ರಾಮದಲ್ಲಿ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ" ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?; ಕ್ವಿಜ್ ಶೋ | ಸ್ವಾತಂತ್ರ್ಯ ಹೋರಾಟದ ‘ಕ್ವಿಜ್ ಶೋ’ದ ಮೊದಲ ದಿನದ ವಿಜೇತರು

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿರುವ ಕಾಲೊನಿಯ ನಿವಾಸಿ ಅನಿಲ್ ಕುಮಾರ್, “ಕಾಲೊನಿಯಲ್ಲಿರುವ ರಸ್ತೆ, ನೀರಿನ ಟ್ಯಾಂಕ್ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಗ್ರಾಮದ ಗ್ರಾಮ ಪಂಚಾಯತಿ ಆಡಳಿತಕ್ಕೆ ಮತ್ತು ಸದಸ್ಯರು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಕು ಬೇಕಂತಲೇ ನಿರ್ಲಕ್ಷ್ಯ ವಹಿಸಿದ್ದಾರೆ" ಎಂದು ತಿಳಿಸಿದರು. 

ಈ ಸಮಸ್ಯೆ ಕುರಿತು ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತಿ ಸದಸ್ಯ ಚೆನ್ನಪ್ಪ, “ಗ್ರಾಮದ ದಲಿತ ಕಾಲೊನಿಯ ಬೀದಿ ದೀಪಗಳ ಸಮಸ್ಯೆ ಬಗ್ಗೆ ಪಿಡಿಒ ಗಮನಕ್ಕೆ ತಂದಿದ್ದು, ದೀಪಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆಯಿಲ್ಲ. ರಸ್ತೆ ಸ್ವಲ್ಪ ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುತ್ತದೆ. ಅದನ್ನು ಸಹ ಸ್ವಚ್ಛಗೊಳಿಸಲಾಗಿದೆ” ಎಂದು ಹೇಳಿದ್ದಾರೆ. 

ಮಾಸ್ ಮೀಡಿಯಾ ಕೂಡ್ಲಿಗಿ ತಾಲೂಕು ಸ್ವಯಂ ಸೇವಕ ಎಚ್‌ ಅನಿಲ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್