ವಿಜಯನಗರ | ಜಂಬುನಾಥನಹಳ್ಳಿ ಬುಡಕಟ್ಟು ಜನರಿಗೆ ಈಗಲೂ ಸೀರೆ ಹೊದಿಕೆಯ ಜೋಪಡಿಯೇ ಆಸರೆ!

  • ಹೊಸಪೇಟೆ ಪಟ್ಟಣ ಸಮೀಪದ ಜಂಬುನಾಥ್‌ಹಳ್ಳಿ ಬುಡಕಟ್ಟು ಹಾಡಿ
  • ಶೌಚಾಲಯಗಳಿಲ್ಲ- ಭಿಕ್ಷಾಟನೆ, ಕೂದಲು ಮಾರಾಟವೇ ಆದಾಯ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಸಮೀಪದ ಜಂಬುನಾಥಹಳ್ಳಿಯಲ್ಲಿ ಬುಡಕಟ್ಟು ಕುಟುಂಬಗಳು ಕನಿಷ್ಟ ನಾಗರಿಕ ಸೌಕರ್ಯಗಳೂ ಇಲ್ಲದೆ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಜಂಬುನಾಥಹಳ್ಳಿಯಲ್ಲಿ 30ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳು ಜೋಪಡಿಗಳಲ್ಲಿ ವಾಸವಿದ್ದಾರೆ. ಮಳೆ, ಬಿಸಿಲು ಚಳಿಯಿಂದ ರಕ್ಷಿಸಿಕೊಳ್ಳಲು ಗುಡಿಸಲುಗಳ ಮೇಲೆ ಹಳೆಯ ಸೀರೆ, ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಹಾಕಿಕೊಂಡಿದ್ದಾರೆ. ಒಂದು ವೇಳೆ ಜೋರಾಗಿ ಗಾಳಿ ಮಳೆ ಬಂದರೆ ಗುಡಿಸಲುಗಳ ಒಳಗೇ ನೀರು ನುಗ್ಗುವ ಸ್ಥಿತಿ ಇದೆ.

ಬಯಲಿನಲ್ಲಿಯೇ ಗುಡಿಸಲುಗಳು ಇರುವುದರಿಂದ ರಾತ್ರಿ ವೇಳೆಯಲ್ಲಿ ಹಾವು, ಚೇಳು ಮುಂತಾದ ವಿಷಜಂತುಗಳು ಗುಡಿಸಲಿನ ಒಳಗೆ ನುಗ್ಗುವ ಅಪಾಯ ಇದೆ. ಹಾಡಿಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇದರಿಂದ ಮಹಿಳೆಯರು ಬಯಲಿನಲ್ಲಿ ಶೌಚ ಇತ್ಯಾದಿಗಳಿಗೆ ತೆರಳಬೇಕಿದ್ದು, ಸಾಕಷ್ಟು ಮುಜುಗರ ಅನುಭವಿಸುವ ಸ್ಥಿತಿ ಇದೆ. ಹಾಡಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಬೀದಿ ದೀಪ ಈ ರೀತಿಯ ಯಾವುದೇ ಮೂಲಸೌಕರ್ಯಗಳಿಲ್ಲ.

ಜಂಬುನಾಥಹಳ್ಳಿಯಲ್ಲಿ ಶಿಳ್ಳೆಖ್ಯಾತ, ಸುಡುಗಾಡು ಸಿದ್ದ, ಸಿಂಗೋಳು ಸಮುದಾಯದ ಬುಡಕಟ್ಟು ಜನರು ವಾಸವಿದ್ದಾರೆ. ಇಲ್ಲಿನ ಜನ ಕೂಲಿ ಕೆಲಸವನ್ನೇ ಆಶ್ರಯಿಸಿದ್ದಾರೆ. 30 ಕುಟುಂಬಗಳು ಅನೇಕ ವರ್ಷಗಳಿಂದ ಪುಟ್ಟಪುಟ್ಟ ಗುಡಿಸಲುಗಳಲ್ಲಿಯೇ ವಾಸವಾಗಿದ್ದಾರೆ.

ಸುಡುಗಾಡು ಸಿದ್ದರು ವೇಷ ಧರಿಸಿ ಊರಿಂದ ಊರಿಗೆ ಹೋಗಿ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದರು. ವಯಸ್ಕರು ಬಸ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಸಿಂಗೊಳು ಬುಡಕಟ್ಟು ಜನರಿಗೆ ತಲೆ ಕೂದಲು, ಹೇರ್ಪಿನ್, ಹಣೆ ಬೊಟ್ಟು, ಬಲೂನು, ಸೂಜಿ ದಾರ ಇತ್ಯಾದಿಗಳ ವ್ಯಾಪಾರವೇ ಆದಾಯದ ಮೂಲ. ಈ ಹಾಡಿಯಲ್ಲಿ ವಾಸವಿರುವ ಕೆಲವರು ಹಂದಿ ಸಾಕಾಣಿಕೆಯಲ್ಲಿಯೂ ತೊಡಗಿದ್ದಾರೆ.

ಆಧುನೀಕತೆ ಮತ್ತು ಜೀವನ ಶೈಲಿ ಬದಲಾದಂತೆ ಬುಡಕಟ್ಟು ಸಮುದಾಯದ ಜನರ ಉತ್ಪನ್ನಗಳಿಗೆ ಹಳ್ಳಿಗಳಲ್ಲಿ ಬೇಡಿಕೆಯೂ ಕಡಿಮೆ ಆಗಿದ್ದು, ತಮ್ಮ ಕುಲಕಸುಬುಗಳನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳುವ ಸ್ಥಿತಿ ಇದೆ.

Image

ಮನೆ ಕೊಟ್ಟರೆ ಸರ್ಕಾರದವರಿಗೆ ಪುಣ್ಯ ಬರ್ತೈತಿ

ಜಂಬುನಾಥಹಳ್ಳಿಯ ನಿವಾಸಿ ಬುಡಕಟ್ಟು ಮಹಿಳೆ ರತ್ನಮ್ಮ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮಗೆ ಮನೆ ಬೇಕು ಸ್ವಾಮಿ, ಮನೆ ಇಲ್ಲ, ಏನು ಇಲ್ಲ. ಗುಡಿಸಲಲ್ಲಿಯೇ ಜೀವನ ಮಾಡುತ್ತಿದ್ದೇವೆ. ಮಳೆ ಹಿಡಿದುಕೊಂಡರೆ ಕಟ್ಟಿಗೆಯೂ ಇರುವುದಿಲ್ಲ. ಕಟ್ಟಿಗೆ ಇಲ್ಲದೆ ಅಡುಗೆ ಮಾಡಲಾಗದೆ ಎಷ್ಟೋ ಸಾರಿ ಉಪವಾಸ ಮಲಗಿದ್ದೇವೆ. ಮನೆ ಒಂದು ಮಾಡಿಕೊಟ್ಟರೆ, ಸರ್ಕಾರದವರಿಗೆ ಪುಣ್ಯ ಬರ್ತೈತಿ” ಎಂದು ತಮ್ಮ ಅಳಲು ತೋಡಿಕೊಂಡರು.

ಸ್ವಂತ ಜಾಗ ಇಲ್ಲ, ಮನೆಯೂ ಇಲ್ಲ 

ಮತ್ತೋರ್ವ ಬುಡಕಟ್ಟು ಮಹಿಳೆ ದುರ್ಗಮ್ಮ ಈ ದಿನ.ಕಾಮ್ ಜತೆಗೆ ಮಾಡಿನಾಡಿ, “ನನಗೆ ಗಂಡು ಮಕ್ಕಳಿಲ್ಲ ಸ್ವಾಮಿ, ಒಬ್ಬಳೇ ಮಗಳು. ಗಂಡ ತೀರಿಕೊಂಡಿದ್ದಾರೆ. ಜಾಗ ಇಲ್ಲ, ಮನೆ ಇಲ್ಲ. ಇಲ್ಲಿಯೇ ಒಂದು ಸಣ್ಣ ಗುಡಿಸಲು ನಿರ್ಮಿಸಿಕೊಂಡಿದ್ದೇನೆ. ಕೂಲಿ ನಾಲಿ ಮಾಡಿ ಬದುಕು ಸಾಗಿಸುತ್ತಿದ್ದೇನೆ” ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

Image

ಬುಡಕಟ್ಟು ಜನರ ಜೀವನಕ್ಕೆ ಆಧಾರ ಬೇಕಿದೆ

ವಿಜಯನಗರ ಜಿಲ್ಲಾ ಅಲೆಮಾರಿ ಅಭಿವೃದ್ಧಿ ಕೋಶ ಅನುಷ್ಠಾನ ಸಮಿತಿಯ ನಾಮನಿರ್ದೇಶಿತ ಸದಸ್ಯ ಪಕ್ಕೀರಪ್ಪ ಬಾದಿಗಿ ಹೊಸಪೇಟೆ ಈ ದಿನ.ಕಾಮ್ ಜತೆಗೆ ಮಾತನಾಡಿ, “ಹೊಸಪೇಟೆ ಸುತ್ತಮುತ್ತ ಸುಡುಗಾಡು ಸಿದ್ಧ, ಸಿಂಗೋಳ, ಚನ್ನದಾಸರು, ಶಿಳ್ಳೆಖ್ಯಾತ, ಬುಡುಗ ಜಂಗಮ ಬುಡಕಟ್ಟು ಸಂಮುದಾಯದ 150ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಇವರಲ್ಲಿ ಬಹುತೇಕರಿಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಆದರೂ ಬಹುತೇಕರು ಸ್ವಂತ ಸೂರು ಇಲ್ಲದೆ. ಶೆಡ್‌ಗಳಲ್ಲಿಯೇ ಬದುಕು ಸಾಗಿಸುವ ಅನಿವಾರ್ಯ ಸ್ಥಿತಿ ಇದೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಬುಡಕಟ್ಟು ಮಹಿಳೆ ಹೆಗಲ ಮೇಲೆ ಪತಿಯ ಕೂರಿಸಿ ಮೆರವಣಿಗೆ  

“ತಾಲ್ಲೂಕಿನಲ್ಲಿ ಬಹುತೇಕರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದೇ ರೀತಿ ಜಂಬುನಾಥಹಳ್ಳಿಗೂ ಸರ್ಕಾರದಿಂದ ನಿವೇಶನಗಳನ್ನು ನೀಡಿ ಮನೆ ನಿರ್ಮಿಸಿಕೊಡಬೇಕು. ಅಷ್ಟು ಮಾತ್ರವಲ್ಲದೆ, ಕನಿಷ್ಟ ಭೂಮಿ ಮಂಜೂರು ಮಾಡಬೇಕು. ಇಲ್ಲವೆ ಬದುಕಿಗೆ ಆಧಾರವಾಗುವ ನಿಟ್ಟಿನಲ್ಲಿ ಸ್ವ ಉದ್ಯೋಗಕ್ಕೆ ಆರ್ಥಿಕ ನೆರವು ನೀಡಬೇಕು. ಬುಡಕಟ್ಟು ಸಮುದಾಯದ ಮಕ್ಕಳು ಹತ್ತನೇ ತರಗತಿಗಿಂತ ಹೆಚ್ಚು ವಿದ್ಯಾಭ್ಯಾಸ ಮಾಡಿರುವ ಉದಾಹರಣೆಗಳೇ ಇಲ್ಲ. ಹಾಗಾಗಿ ಬುಡಕಟ್ಟು ಸಮುದಾಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಗಮನಹರಿಸಬೇಕು” ಎಂದು ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್