'ವಿನಯ ಸಾಮರಸ್ಯ' ಯೋಜನೆ ಜಾರಿಯಾದರೂ 'ವಿನಯ' ಮಾತ್ರ ಊರಿಗೆ ಮರಳಲಿಲ್ಲ!

ಗ್ರಾಮದ 14 ದಲಿತ ಕುಟುಂಬಗಳೂ ಸಹ ಸವರ್ಣೀಯರ ಭಯದಿಂದ ವಿನಯ್ ಕುಟುಂಬದ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ. ಬಹುಸಂಖ್ಯಾತ ಗಾಣಿಗ ಸಮುದಾಯದವರೂ ಕೂಡಾ ವಿನಯ್‌ ಕುಟುಂಬದ ಜತೆಗೆ ಮಾತು ಬಿಟ್ಟಿದ್ದಾರೆ. ಮೇಲ್ಜಾತಿಯಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ವಿನಯ್‌ ಕುಟುಂಬವೇ ಗ್ರಾಮ ತೊರೆದು ಬೇರೆಡೆ ವಾಸಿಸುತ್ತಿರುವಾಗ “ವಿನಯ ಸಾಮರಸ್ಯ” ಯೋಜನೆ ಯಾಕಾಗಿ?

ಅಸ್ಪೃಶ್ಯತೆ ನಿವಾರಣೆಗಾಗಿ ಏ.14ರ ಅಂಬೇಡ್ಕರ್ ಜಯಂತಿಯಂದು ಸಮಾಜ ಕಲ್ಯಾಣ ಇಲಾಖೆ “ವಿನಯ ಸಾಮರಸ್ಯ ಯೋಜನೆ" ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಿದ್ದು, ರಾಜ್ಯಾದ್ಯಂತ ಈ ಯೋಜನೆಯ ಮೂಲಕ ಅಸ್ಪೃಶ್ಯತೆ ನಿವಾರಣೆ ಮಾಡಿ, ಜಾತಿ ಸಮಾನತೆ ತರುವುದಾಗಿ ಘೋಷಿಸಿದೆ.

ಸರ್ಕಾರ ಈ ಹೊಸ ಕಾರ್ಯಕ್ರಮ ಘೋಷಿಸಲು ಕಾರಣವಾಗಿದ್ದು, ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಮಿಯಾಪುರ ಗ್ರಾಮದ ಒಂದು ದಲಿತ ಕುಟುಂಬದ ಮೇಲೆ ನಡೆದ ಮೇಲ್ಜಾತಿಯ ದೌರ್ಜನ್ಯ.

ಪರಿಶಿಷ್ಟ ಸಮುದಾಯಕ್ಕೆ ಸೇರಿದ ಚೆನ್ನದಾಸರ ಸಮುದಾಯದ (ಪರಿಶಿಷ್ಟ ಜಾತಿ) ವಿನಯ್ ಎಂಬ ಮೂರು ವರ್ಷದ ಮಗುವಿನ ಹೆಸರಿನಲ್ಲೇ ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಿದೆ.

2021ರ ಸೆ.4ರಂದು ವಿನಯನ ಹುಟ್ಟುಹಬ್ಬ ಇದ್ದುದರಿಂದ ಆತನ ತಂದೆ ಚಂದ್ರಶೇಖರ್ ಊರಿನ ‘ಹನುಮಪ್ಪನ ಗುಡಿಗೆ’ ಕರೆದುಕೊಂಡು ಹೋಗಿದ್ದರು. ಪೂಜೆ ಮಾಡಿಸಿ ಹೊರಡುವಾಗ ಜೋರು ಮಳೆ ಬಂದಿದ್ದರಿಂದ ತಂದೆ-ಮಗ ಪೂಜಾರಿಯ ಸೂಚನೆ ಮೇರೆಗೆ ದೇವಸ್ಥಾನ ಪ್ರವೇಶಿಸಿದ್ದರು. ಇದೇ ಕಾರಣಕ್ಕೆ ಮಿಯಾಪುರದ ಗಾಣಿಗ ಸಮುದಾಯದವರು ಆ ದಲಿತ ತಂದೆ-ಮಗನನ್ನು ನಿಂದಿಸಿ, ದೇವಸ್ಥಾನ ಶುದ್ಧೀಕರಣಕ್ಕೆಂದು ಹತ್ತಾರು ಸಾವಿರ ದಂಡ ವಿಧಿಸಿದ್ದರು. ಘಟನೆ ನಡೆದ ಹಲವು ದಿನಗಳ ನಂತರ, ದಲಿತ ಪರ ಸಂಘಟನೆಗಳು ಮಧ್ಯಪ್ರವೇಶದ ಕಾರಣಕ್ಕೆ ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ನಂತರ ಆರೋಪಿಗಳು ಜೈಲು ಸೇರಿದ್ದರು.

ಘಟನೆಯ ಹಿನ್ನೆಲೆಯಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಮತ್ತು ಜಾತಿ ತಾರತಮ್ಯದ ವಿಷಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಹಜವಾಗೇ‌ ಒತ್ತಡಕ್ಕೆ ಸಿಲುಕಿದ ಬಿಜೆಪಿ ಸರ್ಕಾರ, ದಲಿತ ಸಮುದಾಯವನ್ನು ಓಲೈಸುವ ಯತ್ನವಾಗಿ ʼವಿನಯ ಸಾಮರಸ್ಯʼ ಯೋಜನೆ ಘೋಷಣೆ ಮಾಡಿತ್ತು.

ಹಾಗಾಗಿ, ಯೋಜನೆ ಜಾರಿ ಮಾಡಿರುವುದರಿಂದ ಮಿಯಾಪುರದಲ್ಲಿ ಸಮಸ್ಯೆ ಬಗೆಹರಿದಿದೆ. ಅಧಿಕಾರಿಗಳ ಮಧ್ಯಪ್ರವೇಶದಿಂದ ಆ ಗ್ರಾಮದಲ್ಲಿ ಜಾತಿ ಸೌಹಾರ್ದತೆ ಕಾಪಾಡಲಾಗಿದೆ ಎಂಬ ಕಲ್ಪನೆ ರಾಜ್ಯದ ಬಹುತೇಕರಲ್ಲಿ ಮೂಡಿತ್ತು.‌ 

ಸರ್ಕಾರದ ಘೋಷಣೆ ಎಷ್ಟರಮಟ್ಟಿಗೆ ಫಲಪ್ರದವಾಗಿದೆ ಮತ್ತು ಜನಸಾಮಾನ್ಯರ ಆ ಕಲ್ಪನೆ ಎಷ್ಟರ ಮಟ್ಟಿಗೆ ವಾಸ್ತವ ಎಂಬ ಕುತೂಹಲದಲ್ಲಿ ಈ ದಿನ.ಕಾಮ್, ವಿನಯ್ ತಂದೆ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ ಅಲ್ಲಿನ ಪರಿಸ್ಥಿತಿ ಕಲ್ಪನೆಗೆ ಮೀರಿ ತದ್ವಿರುದ್ಧವಾಗಿರುವುದು ಬೆಳಕಿಗೆ ಬಂದಿತು.

2023ರ ವಿಧಾನಸಭೆ ಚುನಾವಣೆಯನ್ನು ಕೇಂದ್ರೀಕರಿಸಿರುವ ಬಿಜೆಪಿ, ದಲಿತ ಮತಗಳ ಮೇಲೆ ಕಣ್ಣಿಟ್ಟು ಕುರುಡಾಗಿ ಯೋಜನೆಯನ್ನು ಜಾರಿಗಗೊಳಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮಿಯಾಪುರದಲ್ಲಿ ಜಾತಿಗಳ ಮಧ್ಯೆ ಉಂಟಾಗಿರುವ ಕಂದಕವನ್ನು ಮುಚ್ಚಲು ಸಮಾಜ ಕಲ್ಯಾಣ ಇಲಾಖೆಯ ವಿನಯ ಸಾಮರಸ್ಯ ಯೋಜನೆಯಾಗಲೀ ಅಥವಾ ಅಧಿಕಾರಿಗಳಾಗಲೀ ಯಶಸ್ವಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಏಕೆಂದರೆ? ಘಟನೆಯ ಬಳಿಕ ಸಾಮಾಜಿಕ ಬಹಿಷ್ಕಾರ ಮತ್ತು ಪ್ರಾಣ ಭಯದಿಂದ ಸ್ವತಃ ವಿನಯ್‌ ಮತ್ತು ಆತನ ತಂದೆ ಚಂದ್ರಶೇಖರ್ ಕುಟುಂಬ ಮಿಯಾಪುರ ತೊರೆದು ಆರು ತಿಂಗಳಾಗಿವೆ.

2021ರ ಸೆ.4ರಂದು ಚೆನ್ನದಾಸರ (ಪರಿಶಿಷ್ಟ ಜಾತಿ) ಸಮುದಾಯದ ತಂದೆ ಮತ್ತು ಮಗುವಿನ ಮೇಲೆ ಆ ಊರಿನ ಗಾಣಿಗ ಜನಾಂಗ ಅಮಾನವೀಯವಾಗಿ ನಡೆಸಿದ ದಬ್ಬಾಳಿಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮೂರು ವರ್ಷದ ಹಸುಳೆಯಲ್ಲೂ ಜಾತಿ ಹುಡುಕಿ, ದೇವಾಲಯ ‘ಶುದ್ಧೀಕರಣಕ್ಕಾಗಿ’ ದಂಡ ವಿಧಿಸಿದ ʼಕೃತ್ಯʼ ಈಗ ಹಳೆಯ ವಿಚಾರ. ಪ್ರಕರಣದ ಕೇಂದ್ರಬಿಂದುವಾದ ವಿನಯ್‌ ಎಂಬ ಮಗುವಿನ ಹೆಸರಿನಲ್ಲಿ ಸರ್ಕಾರ ಅಸ್ಪೃಶ್ಯತೆ ನಿವಾರಣೆಗೆ ಯೋಜನೆ ಜಾರಿ ಮಾಡಿರುವುದು ಈಗ ಹೊಸ ವಿಚಾರ. 

“ವಿನಯ ಸಾಮರಸ್ಯ” ಎಂಬ ಈ ಹೊಸ ಯೋಜನೆ ಈಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ? ಘಟನೆ ನಡೆದ ಹಲವು ದಿನಗಳ ನಂತರ ಮಿಯಾಪುರ ತೊರೆದಿರುವ ವಿನಯ್‌ ಕುಟುಂಬ ಆರು ತಿಂಗಳಾದರೂ ಇನ್ನೂ ಊರೊಳಗೆ ಪ್ರವೇಶ ಮಾಡಿಲ್ಲ. ಗ್ರಾಮದ 14 ದಲಿತ ಕುಟುಂಬಗಳೂ ಸಹ ಸವರ್ಣೀಯರ ಭಯದಿಂದ ಚಂದ್ರು ಕುಟುಂಬದ ಜತೆಗೆ ಅಂತರ ಕಾಯ್ದುಕೊಂಡಿದ್ದಾರೆ. ಬಹುಸಂಖ್ಯಾತ ಗಾಣಿಗ ಸಮುದಾಯದವರೂ ಕೂಡಾ ವಿನಯ್‌ ಕುಟುಂಬದ ಜತೆಗೆ ಮಾತು ಬಿಟ್ಟಿದ್ದಾರೆ. ಮೇಲ್ಜಾತಿಯಿಂದ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ವಿನಯ್‌ ಕುಟುಂಬವೇ ಗ್ರಾಮ ತೊರೆದು ಬೇರೆಡೆ ವಾಸಿಸುತ್ತಿರುವಾಗ “ವಿನಯ ಸಾಮರಸ್ಯ” ಯೋಜನೆ ಯಾರಿಗಾಗಿ ಮತ್ತು ಯಾಕಾಗಿ ಎಂಬ ಪ್ರಶ್ನೆ ಉದ್ಭವಿಸಿದೆ.

ಪ್ರಸ್ತುತ ವಿನಯ್ ಕುಟುಂಬ, ಆತನ ತಾಯಿಯ ತವರು ಮನೆಯಾದ ಯಲಬುರ್ಗಾ ತಾಲ್ಲೂಕಿನ ಕುರುಗುಂಡಿ ಗ್ರಾಮದಲ್ಲಿ ತಾತ್ಕಾಲಿವಾಗಿ ನೆಲೆಗೊಂಡಿದೆ. 

ಇದನ್ನು ಓದಿದ್ದೀರಾ?: ಸುದ್ದಿ ವಿವರ | ವಿನಯ ಸಾಮರಸ್ಯ ಯೋಜನೆ ಏಕೆ, ಏನು?

ಮಿಯಾಪುರದಲ್ಲಿರುವ ತುಂಡು ಭೂಮಿಯಲ್ಲೇ ವಿನಯ್ ತಂದೆ ಚಂದ್ರಶೇಖರ್ ಬೇಸಾಯ ಮಾಡುತ್ತಿದ್ದರು. ಘಟನೆ ನಡೆದ ನಂತರ ಕೃಷಿ ಕೆಲಸಗಳಿಗೂ ಯಾರೂ ನೆರವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಕೃಷಿ ಸಂಬಂಧಿಸಿದ ಕೆಲಸಗಳಿಗೆ ಬಳಸುವ ಉಪಕರಣಗಳು, ಎತ್ತುಗಳು ಹಾಗೂ ಟ್ರ್ಯಾಕ್ಟರ್‌ಗಳಿಗಾಗಿ ಮೇಲ್ಜಾತಿಯವರನ್ನೇ ಅವಲಂಬಿಸಬೇಕಾಗಿದೆ. ಸವರ್ಣೀಯರು ಹೇರಿರುವ ಸಾಮಾಜಿಕ ಬಹಿಷ್ಕಾರದಿಂದಾಗಿ ಇಡೀ ಗ್ರಾಮವೇ ಚಂದ್ರಶೇಖರ್ ಕುಟುಂಬದ ಜತೆಗೆ ಮಾತು ಬಿಟ್ಟಿದ್ದು, ಕೃಷಿ ಕೆಲಸಕ್ಕೆ ಈಗ ಅವರಿಗೆ ಯಾರೂ ನೆರವಾಗುತ್ತಿಲ್ಲ. 

Image

ಹೆರಿಗೆ ನೋವೆಂದರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತ ಗ್ರಾಮಸ್ಥರು

ವಿನಯ್ ಮತ್ತು ಚಂದ್ರಶೇಖರ್ ದೇವಸ್ಥಾನ ಪ್ರವೇಶ ವಿಚಾರ ವಿವಾದದ ಸ್ವರೂಪ ಪಡೆದುಕೊಂಡು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಊರಿನ ಜನ ವಿನಯ್ ಕುಟುಂಬದ ಮೇಲೆ ಮತ್ತಷ್ಟು ಹಗೆ ಸಾಧಿಸಲು ಆರಂಭಿಸಿತ್ತು.

ಘಟನೆ ನಡೆದ ಕೆಲ ತಿಂಗಳುಗಳ ನಂತರ ಚಂದ್ರು ಪತ್ನಿ ತುಂಬು ಗರ್ಭಿಣಿಯಾಗಿದ್ದರು. ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದೊಯ್ಯಲು ನೆರವು ಯಾಚಿಸಿದರೂ, ಯಾವ ಗ್ರಾಮಸ್ಥರೂ ನೆರವಿಗೆ ಬಾರದೆ ಅಮಾನವೀಯವಾಗಿ ವರ್ತಿಸಿದ್ದಾರೆ.

“ಗ್ರಾಮದಿಂದ ಕೇವಲ ಏಳು ಕಿ.ಮೀ. ಅಂತರದಲ್ಲಿರುವ ಆಸ್ಪತ್ರೆಗೆ ಹೋಗಿ ಬರಲು ಎರಡು ಸಾವಿರ ರೂಪಾಯಿ ಬಾಡಿಗೆ ನೀಡುತ್ತೇನೆ ಎಂದರೂ ಯಾರೂ ಸಹಾಯ ಮಾಡಲಿಲ್ಲ. ಊರಿನಲ್ಲಿ ಮೂರ್ನಾಲ್ಕು ಬಾಡಿಗೆ ಕಾರುಗಳಿವೆ” ಎಂದು ಚಂದ್ರು ʼಈ ದಿನ.ಕಾಮ್‌ʼಗೆ ವಿವರಿಸಿದರು.

ದಿನೇದಿನೆ ಗ್ರಾಮದಲ್ಲಿ ಹೆಚ್ಚಾಗುತ್ತಿದ್ದ ಅಸಹಿಷ್ಣತೆ, ಮಾನಸಿಕ ಕಿರಿಕಿರಿ ಉಂಟುಮಾಡುತ್ತಿದ್ದ ಸಾಮಾಜಿಕ ಬಹಿಷ್ಕಾರ ಹಾಗೂ ಬಂಧನವಾದ ಕೆಲವೇ ದಿನಗಳಲ್ಲಿ ಆರೋಪಿತರು ಜೈಲಿನಿಂದ ಬಿಡುಗಡೆಯಾಗಿದ್ದರಿಂದ ಚಂದ್ರಶೇಖರ್ ಕುಟುಂಬ ಈಗ ಊರನ್ನೇ ತೊರೆದಿದೆ. ವಯಸ್ಸಾದ ಚಂದ್ರು ತಂದೆ ಮಾತ್ರ ತನ್ನ ಮನೆ ಬಿಟ್ಟು ಬರುವುದಿಲ್ಲ ಎಂದು ಊರಿನಲ್ಲಿ ಕಾಲ ದೂಡುತ್ತಿದ್ದಾರೆ. ʼಹೊಲ, ಮನೆ ನೋಡಲು ಮತ್ತು ವಯಸ್ಸಾದ ತಂದೆಯನ್ನು ಭೇಟಿ ಮಾಡಲು ಆಗಾಗ ಊರಿಗೆ ಹೋಗುವ ತಾನು, ಭಯದಲ್ಲೇ ಹೋಗಿಬರುತ್ತೇನೆʼ ಎಂದು ಚಂದ್ರಶೇಖರ್ ತಮ್ಮ ಭೀತಿ ತೋಡಿಕೊಂಡರು.

ಮಿಯಾಪುರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೂ ಪಡೆದುಕೊಳ್ಳದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಏ.14ರ ಅಂಬೇಡ್ಕರ್‌ ಜಯಂತಿಯಂದು “ಅಸ್ಪೃಶ್ಯತೆ ಆಚರಣೆಗೆ ಒಳಗಾದ ಮಗು ವಿನಯ್ ಹೆಸರಿನಲ್ಲಿಯೇ ಅಸ್ಪೃಶ್ಯತೆ ನಿವಾರಣೆ ಆಂದೋಲನ ಆರಂಭಿಸಿದ್ದೇವೆ" ಎಂದು ಹೇಳಿದ್ದರು. 

ಆದರೆ ಇಂತಹ ಒಂದು ಯೋಜನೆಗೆ ಮುಗುವಿನ ಹೆಸರಿಡುವ ಮುನ್ನ ವಿನಯ್‌ ಪೋಷಕರ ಜತೆಗೆ ಚರ್ಚೆ ಕೂಡ ನಡೆಸಿಲ್ಲ ಎಂಬ ಸಂಗತಿಯೂ ಚಂದ್ರಶೇಖರ್ ಜತೆಗಿನ ಮಾತುಕತೆ ವೇಳೆ ಹೊರಬಿದ್ದಿದೆ.

“ನಮಗೆ ಆದ ಅವಮಾನ ಇನ್ಯಾರಿಗೂ ಅಗುವುದು ಬೇಡ, 'ವಿನಯ ಸಾಮರಸ್ಯ' ಯೋಜನೆ ಜಾರಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಜನ ಹೇಗೆ ನಡೆದುಕೊಳ್ಳಲಿದ್ದಾರೆ ನೋಡಬೇಕಿದೆ. ಈ ಯೋಜನೆಗೆ ಹೆಸರಿಡುವ ಮುನ್ನ ನಮ್ಮ ಬಳಿ ಯಾರೂ ಚರ್ಚೆ ನಡೆಸಿಲ್ಲ” ಎಂದು ಚಂದ್ರು ಖಚಿತಪಡಿಸಿದರು.‌

ಮಗುವಿನ ಹೆಸರಿನಲ್ಲಿ ಯೋಜನೆ ಎಷ್ಟು ಸರಿ?

ಅಸ್ಪೃಶ್ಯತೆ ಮತ್ತು ಅತ್ಯಾಚಾರದ ಬಗ್ಗೆ ಹೊರಗೆ ನಿಂತು ಎಷ್ಟೇ ಮಾತನಾಡಿದರೂ, ಅಂತಹ ಅವಮಾನ ಮತ್ತು ದಬ್ಬಾಳಿಕೆಗಳ ಆಘಾತವನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟ. ಯಾರೂ ಕೂಡಾ ಇಂತಹ ಅಪಮಾನಗಳನ್ನು ಮತ್ತೆಮತ್ತೆ ಕೆದಕಿ ಮನಸಿಗೆ ಘಾಸಿ ಮಾಡಿಕೊಳ್ಳುವುದಕ್ಕೆ ಬಯಸುವುದಿಲ್ಲ. ಹಸಿ ಗಾಯಕ್ಕೆ ಉಪ್ಪು ಸವರಿದರೆ ಆಗುವ ನೋವಿನ ನೂರು ಪಟ್ಟು ಹೆಚ್ಚು ನೋವು ಇಂತಹ ಅಪಮಾನಗಳನ್ನು ನೆನಪಿಸಿಕೊಂಡಾಗ ಆಗುತ್ತದೆ. 

ಇಂತಹ ಸೂಕ್ಷ್ಮತೆ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಿನಯ್‌ ಹೆಸರಿನಲ್ಲೇ ಯೋಜನೆ ಘೋಷಣೆ ಮಾಡಿರುವುದು ಎಷ್ಟು ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

Image
1927ರಲ್ಲಿ ಮಹಾರಾಷ್ಟ್ರದ ರಾಯಗಡದಲ್ಲಿ ನಡೆದ ಮೊದಲ ಅಸ್ಪೃಶ್ಯತೆ ವಿರೋಧಿ ಹೋರಾಟವಾದ 'ಚೌಡಾರ್ ಕೆರೆ ಸತ್ಯಾಗ್ರಹ' ಚಿತ್ರ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಚಳವಳಿಯ ನೇತೃತ್ವ ವಹಿಸಿದ್ದರು. 

"ಘಟನೆ ನಡೆದಾಗ ವಿನಯ್‌ ಮೂರು ವರ್ಷದ ಮಗು. ಆ ವಯಸ್ಸಿನಲ್ಲಿ ಆತನಿಗೆ ಜಾತಿ, ವರ್ಗ, ಬಣ್ಣದ ಬಗ್ಗೆ ತಿಳಿದಿಲ್ಲ. ಈಗಾಗಲೇ ಊರು ತೊರೆದಿರುವ ಅವರ ಕುಟುಂಬ ಕ್ರಮೇಣ ಈ ಘಟನೆಯನ್ನು ಮರೆತುಬಿಡಬಹುದು. ಅಥವಾ ಮಿಯಾಪುರಕ್ಕೆ ಮರಳಿದರೂ ಈ ಘಟನೆ ಅವರ ನೆನಪಿನಿಂದ ಮಾಸಬಹುದು. ಆದರೆ ಇಂತಹ ಗಂಭೀರ ವಿಚಾರದಲ್ಲೂ ರಾಜಕೀಯ ಲಾಭದ ಉದ್ದೇಶದಿಂದ, ಮಗುವಿನ ಹೆಸರಿನಲ್ಲೇ ಯೋಜನೆ ಜಾರಿ ಮಾಡಿರುವುದು ಅಸೂಕ್ಷ್ಮ, ಅಮಾನವೀಯ ನಡೆ. ಜೀವನ ಪರ್ಯಂತ ವಿನಯ್ ಇಂತಹದ್ದೊಂದು ಭಾರವನ್ನು ಹೊತ್ತುಕೊಂಡೇ ಸಾಗಲಿ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಂತಿದೆ" ಎಂದು ಸರ್ಕಾರದ ನಡೆಯನ್ನು ಹಲವು ದಲಿತ ಹೋರಾಟಗಾರರು ಖಂಡಿಸಿದ್ದಾರೆ.

ವಿಪರ್ಯಾಸವೆಂದರೆ; ವಿನಯ ಸಾಮರಸ್ಯ ಎಂದು ಹೆಸರು ನೀಡಿ, ಬಾಲಕ ವಿನಯ ಮತ್ತು ಆತನ ದಲಿತ ಕುಟುಂಬದ ಮೇಲಿನ ದೌರ್ಜನ್ಯವನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರಿ ವ್ಯವಸ್ಥೆ, ಆ ಕುಟುಂಬಕ್ಕೆ ಧೈರ್ಯ ತುಂಬುವ ಅಥವಾ ಆ ಘಟನೆಗೆ ಕಾರಣವಾದ ಮೇಲ್ಜಾತಿ ಸಮುದಾಯದವರ ಮನಪರಿವರ್ತನೆ ಮಾಡುವ ಯಾವ ಯತ್ನವನ್ನೂ ಈವರೆಗೆ ಮಾಡಿಲ್ಲ!

ಸಮಾಜ ಕಲ್ಯಾಣ ಇಲಾಖೆ ಸಚಿವರಾಗಲಿ, ಇಲಾಖೆಯ ಸ್ಥಳೀಯ ಅಧಿಕಾರಿಗಳಾಗಲಿ ಚಂದ್ರು ಕುಟುಂಬಕ್ಕೆ ಊರಿಗೆ ವಾಪಸು ಬರುವಂತೆ ಈವರೆಗೆ ಧೈರ್ಯ ತುಂಬಿಲ್ಲ. ವಿನಯ್‌ ಕುಟುಂಬಕ್ಕೆ ಕಾನೂನು ಬಾಹಿರವಾಗಿ ಹೇರಿರುವ ʼಸಾಮಾಜಿಕ ಬಹಿಷ್ಕಾರʼದ ಬಗ್ಗೆ ಜಾಣ ಕುರುಡು ಪ್ರದರ್ಶಿಸಲಾಗುತ್ತಿದೆ. ಆ ಊರಿನ ಗಾಣಿಗ ಸಮುದಾಯಕ್ಕೆ ʼದಲಿತರೊಂದಿಗೆ ಸೌಹಾರ್ದಯುತ ಜೀವನ ನಡೆಸಿʼ ಎಂದು ತಿಳಿ ಹೇಳಿಲ್ಲ. ಘಟನೆ ನಡೆದ ನಂತರ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಏನೂ ಕ್ರಮ ಕೈಗೊಳ್ಳದ ಸರ್ಕಾರ, ರಾಜ್ಯಾದ್ಯಂತ ಮಗುವಿನ ಹೆಸರಿನಲ್ಲಿ ಯೋಜನೆ ಘೋಷಿಸಿ ಕೈತೊಳೆದುಕೊಂಡಿದೆ.

"ಸರ್ಕಾರವೇನೋ ನನ್ನ ಮಗನ ಹೆಸರಲ್ಲಿ ಯೋಜನೆ ಘೋಷಿಸಿದೆ. ಆದರೆ ಆರೋಪಿಗಳು ಬಿಡುಗಡೆಯಾಗಿ ಊರಲ್ಲೇ ಇರುವುದರಿಂದ ನಾನು ಜೀವ ಭಯದಲ್ಲೇ ಊರಿಗೆ ಹೋಗಿಬರುವ ಸ್ಥಿತಿ ಇದೆ. ಸರ್ಕಾರದ ಘೋಷಣೆಯಿಂದ ನನ್ನ ಜೀವದಲ್ಲಿ ಏನೂ ಬದಲಾಗಿಲ್ಲ" ಎಂಬ ವಿನಯ್‌ ತಂದೆ ಚಂದ್ರಶೇಖರ್‌ ಅವರ ನೋವಿನ ನುಡಿ, ಎಲ್ಲವನ್ನೂ ಹೇಳುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್