ಧಾರವಾಡ | ಮಾಜಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿವೆ

Daravada
  • ಯೋಗೀಶಗೌಡ ಹತ್ಯೆ ಆರೋಪ ಎದುರಿಸುತ್ತಿರುವ ವಿನಯ್ ಕುಲಕರ್ಣಿ
  • ಷರತ್ತುಬದ್ಧ ಜಾಮೀನಿನ ಮೇಲೆ ವಿನಯ್ ಕುಲಕರ್ಣಿ ಬಿಡುಗಡೆ

ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ನನ್ನನ್ನು (ವಿನಯ್  ಕುಲಕರ್ಣಿ) ಕೊಲೆ ಪ್ರಕರಣದಲ್ಲಿ ಸಿಕ್ಕಿಸಿದ್ದಾರೆ, ನಾನು ನಿರಪರಾಧಿ’ ಎಂಬ ಮಾಜಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ಬೆದರಿಕೆ ಹುಟ್ಟಿಸುವಂತಿದೆ ಎಂದು ಹತ್ಯೆಯಾದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‌ಗೌಡ ಅವರ ಹಿರಿಯ ಸಹೋದರ ಗುರುನಾಥಗೌಡ ಹೇಳಿದ್ದಾರೆ.

“ಇತ್ತೀಚೆಗೆ ಕಿತ್ತೂರಿನಲ್ಲಿ ನಡೆದ ಹುಟ್ಟುಹಬ್ಬ ಸಮಾರಂಭದಲ್ಲಿ ವಿನಯ್ ಕುಲಕರ್ಣಿ ‘ನಾನು ನಿರಪರಾಧಿ, ರಾಜಕೀಯ ಪ್ರತಿಸ್ಪರ್ಧಿಗಳು ನನ್ನನ್ನು ಆರೋಪಿ ಸ್ಥಾನದಲ್ಲಿ ಕೂರಿಸಿ ಜಿಲ್ಲೆಯಿಂದ ಹೊರಗುಳಿಯುವಂತೆ ಮಾಡಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರೆ. ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಸಾರ್ವಜನಿಕ ವೇದಿಕೆಗಳಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ದೂಷಿಸುವುದು ಸಾಕ್ಷಿಗಳಿಗೆ ಬೆದರಿಕೆ ಹಾಕಿದಂತಿದೆ” ಎಂದು ಗುರುನಾಥಗೌಡ ಹೇಳಿದ್ದಾರೆ.

“ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ(ಸಿಬಿಐ) ವಿನಯ್ ಕುಲಕರ್ಣಿ ಅವರನ್ನು ಆರೋಪಿ ಎಂದು ಪರಿಗಣಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಈಗ ಕುಲಕರ್ಣಿ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ತಡೆ ನೀಡಿದೆ. ತನಿಖಾ ಸಂಸ್ಥೆಯೇ ಕುಲಕರ್ಣಿ ಅವರನ್ನು ಆರೋಪಿಯೆಂದು ಕರೆದ ಮೇಲೆ ನಮ್ಮ ಪಾತ್ರವಿರಲು ಹೇಗೆ ಸಾಧ್ಯ?. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಲ್ಲಿ ನಮ್ಮ  ಪಾತ್ರವಿಲ್ಲ” ಎಂದು ಗುರುನಾಥಗೌಡ ಹೇಳಿದ್ದಾರೆ.

 ಈ ಸುದ್ದಿ ಓದಿದ್ದೀರಾ?: ಕೊಟ್ಟ ಭರವಸೆ ಈಡೇರಿಸಿದ ಮೇಲೆ ಉಳಿದ ಮಾತುಗಳನ್ನಾಡಿ: ಮೋದಿಗೆ ಸಿದ್ದರಾಮಯ್ಯ ಆಗ್ರಹ

AV Eye Hospital ad

ವಿನಯ್ ಕುಲಕರ್ಣಿ ಇದೇ ರೀತಿ ಮಾತನಾಡುವುದನ್ನು ಮುಂದುವರಿಸಿದರೆ ಅವರ ಜಾಮೀನು ರದ್ದು ಕೋರಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

“‘ಪಂಚಮಸಾಲಿಗಳು ಕುಲಕರ್ಣಿಯವರ ಜೊತೆಗಿದ್ದಾರೆ’ ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ. ವಿನಯ್ ಕುಲಕರ್ಣಿ ಹಾಗೂ ನನ್ನ ಸಹೋದರ ಯೋಗಿಶ್ ಗೌಡ ಇಬ್ಬರೂ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಕುಲಕರ್ಣಿ ಅವರನ್ನು ಬೆಂಬಲಿಸುತ್ತಿರುವ ಜಯ ಮೃತ್ಯುಂಜಯ ಸ್ವಾಮಿಗಳು ಭೀಕರವಾಗಿ ಹತ್ಯೆಗೀಡಾದ ಯೋಗೀಶ್‌ಗೌಡರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಸೌಜನ್ಯ ತೋರಲಿಲ್ಲ. ಹಣ ಮತ್ತು ಅಧಿಕಾರ ಹೊಂದಿರುವ ಜನರನ್ನು ಸ್ವಾಮಿಗಳು ಬೆಂಬಲಿಸುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app