ಮೋದಿ ಸರ್ಕಾರದ ನೀತಿಗಳ ವಿರುದ್ಧ ಹೋರಾಡುವವರ ದನಿ ಅಡಗಿಸಲಾಗುತ್ತಿದೆ : ಚಿಂತಕ ಶಿವಸುಂದರ್

  • ‘ರಾಜಕೀಯ ಕೈದಿಗಳ ಅವ್ಯವಸ್ಥೆ; ಮಾನವ ಹಕ್ಕುಗಳ ಬಿಕ್ಕಟ್ಟು’ ಕುರಿತು ವಿಚಾರಗೋಷ್ಠಿ
  • ನಾವು ಎಲ್ಲರೂ ಒಂದಾಗಿ, ಬೃಹತ್ ಜನಾಂದೋಲನ ಕಟ್ಟಿದರೆ ಮಾತ್ರ ನಮಗೆ ಭವಿಷ್ಯ.

ಮೋದಿ ಸರ್ಕಾರದ ನೀತಿಗಳ ವಿರುದ್ಧ ಹೋರಾಡುವವರ ದನಿ ಅಡಗಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಶಿವಸುಂದರ್ ಅಭಿಪ್ರಾಯಿಸಿದರು.

ಶನಿವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ರಾಜಕೀಯ ಕೈದಿಗಳ ಅವ್ಯವಸ್ಥೆ; ಮಾನವ ಹಕ್ಕುಗಳ ಬಿಕ್ಕಟ್ಟು’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

"ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ ನಿಂತು ನಾರಿ ಶಕ್ತಿ ಬಗ್ಗೆ ಮಾತನಾಡುತ್ತಿರುವಾಗ, 2002ಲ್ಲಿ ಗುಜರಾತ್‌ನಲ್ಲಿ ನಡೆದ ಬಿಲ್ಕೀಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಪ್ರಕರಣದ ಹನ್ನೊಂದು ಆರೋಪಿಗಳನ್ನು ಸನ್ನಡತೆ ಆಧಾರದಲ್ಲಿ ಅಲ್ಲಿನ ಸರ್ಕಾರ ಕ್ಷಮಾದಾನ ಕೊಟ್ಟು ಬಿಡುಗಡೆ ಮಾಡಿದೆ. ಇದು ನಮ್ಮ  ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಜವಾದ ಚಿತ್ರಣ" ಎಂದು ಶಿವಸುಂದರ್ ಆಕ್ರೋಶ ವ್ಯಕ್ತಪಡಿಸಿದರು.

ಸಂಘ‌ಪರಿವಾರಕ್ಕೆ ಸೇರಿದ್ದ ಹನ್ನೊಂದು ಆರೋಪಿಗಳು ಬಿಲ್ಕೀಸ್ ಬಾನು ಅವರನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಲ್ಲದೆ, ಅವರ ಕಣ್ಣ ಮುಂದೆಯೇ ಒಂದು ಮಗುವನ್ನು ಮತ್ತು ತಪ್ಪಿಸಿಕೊಂಡು ಓಡುತ್ತಿದ್ದ ಆರು ಜನರನ್ನು ಕೊಂದು ಹಾಕಿದರು. ಇಂತಹ ಸುಮಾರು 4,500 ಪ್ರಕರಣಗಳನ್ನು ಅಂದು ಗುಜರಾತ್ ರಾಜ್ಯದ ಪೊಲೀಸರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮಧ್ಯ ಪ್ರವೇಶಿಸಿ ಇಂತಹ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ವರೆಗೆ ತೆಗೆದುಕೊಂಡು ಹೋದರು. ಸಿಬಿಐ ತನಿಖೆಯಿಂದ ಬಿಲ್ಕೀಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ರುಜುವಾತಾಗಿ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದವು. ಆದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನದಂದೇ ಆ 11 ಮಂದಿ ಆರೋಪಿಗಳನ್ನು ಸನ್ನಡತೆ ಆಧಾರದಲ್ಲಿ ಕ್ಷಮಾದಾನ ನೀಡಿ ಬಿಡುಗಡೆ ಮಾಡಲಾಗಿದೆ. ಅವರು ಬ್ರಾಹ್ಮಣರು, ಸಂಸ್ಕಾರವಂತರು, ಇದಕ್ಕಿಂತ ಸನ್ನಡತೆಯ ಪ್ರಮಾಣಪತ್ರ ಬೇಕೇ? ಎಂದು ಕೆಲವರು ಕೇಳುತ್ತಾರೆ. ಸಂಘಪರಿವಾರಕ್ಕೆ ಸೇರಿದವರಿಗೆ ಒಂದು ಕಾನೂನು, ಸೇರದವರಿಗೆ ಒಂದು ಕಾನೂನು ಎಂದು ಶಿವಸುಂದರ್ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ದಲಿತ ಯುವತಿಯನ್ನು ಠಾಕೂರ್ ಜಾತಿಗೆ ಸೇರಿದ ನಾಲ್ವರು ಸಾಮೂಹಿಕ ಅತ್ಯಾಚಾರ ಮಾಡಿದರು. ಸಾವು ಬದುಕಿನ ನಡುವೆ ಹೋರಾಟ ಮಾಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆಕೆಯ ಮೃತ ದೇಹವನ್ನು ಪೋಷಕರಿಗೂ ನೀಡದೆ, ಸಾಕ್ಷಾಧಾರಗಳನ್ನು ನಾಶಪಡಿಸಲು ಪೊಲೀಸರೇ ಆಕೆಯ ಮೃತದೇಹವನ್ನು ಸುಟ್ಟು ಹಾಕಿದರು. ಈ ಘಟನೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಲು ಬಂದಿದ್ದ ಎಂದು 2020ರ ಅಕ್ಟೋಬರ್‌ನಲ್ಲಿ ಬಂಧಿಸಲಾಯಿತು. ಈವರೆಗೆ ಆತ ಜೈಲಿನಲ್ಲಿದ್ದಾನೆ. ನರೇಂದ್ರ ಮೋದಿ ಸರ್ಕಾರದ ಆರ್ಥಿಕ, ಸಾಮಾಜಿಕ ನೀತಿಗಳ ವಿರುದ್ಧ ಹೋರಾಡುವವರ ಧ್ವನಿ ಅಡಗಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 14 ಮಂದಿ ಹೋರಾಟಗಾರರನ್ನು ಪೆಗಾಸಸ್ ತಂತ್ರಜ್ಞಾನ ಬಳಸಿ, ಆರೋಪಿಗಳನ್ನಾಗಿಸಿ ಜೈಲಿಗೆ ಅಟ್ಟಲಾಗಿದೆ. ನಾವು ಯಾರ ಪರವಾಗಿ ಹೋರಾಟ ಮಾಡುತ್ತಿದ್ದೇವೋ ಅವರು ಎಚ್ಚೆತ್ತುಕೊಳ್ಳಬೇಕು. ತುಂಬಾ ಗಂಭೀರವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾವ ರಾಜಕೀಯ ಪಕ್ಷವನ್ನು ನೆಚ್ಚಿಕೊಳ್ಳುವಂತಹ ಪರಿಸ್ಥಿತಿ ಇಲ್ಲ ಎಂದು ಶಿವಸುಂದರ್ ಹೇಳಿದರು.

ಯುಎಪಿಎ ಕಾನೂನು ಜಾರಿಗೆ ತಂದದ್ದು ಕಾಂಗ್ರೆಸ್ ಪಕ್ಷ, ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದಕ್ಕೆ ಎಲ್ಲ ವಿರೋಧ ಪಕ್ಷಗಳು ಸಹಕಾರ ನೀಡಿದವು. ನಾವು ಎಲ್ಲರೂ ಒಂದಾಗಿ, ಬೃಹತ್ ಜನಾಂದೋಲನ ಕಟ್ಟಿದರೆ ಮಾತ್ರ ನಮಗೆ ಭವಿಷ್ಯ. ಇಲ್ಲದಿದ್ದರೆ, ಎಂತಹ ಮೃಗಗಳ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದು ಬಿಲ್ಕೀಸ್ ಬಾನು ಪ್ರಕರಣದಿಂದ ಸಾಬೀತಾಗಿದೆ. ಸತ್ಯ ಜೈಲಿನಲ್ಲಿದೆ, ಸುಳ್ಳು ಬೀದಿ ಬೀದಿಗಳಲ್ಲಿ ಬಂದೂಕು, ತ್ರಿಶೂಲ ಹಿಡಿದುಕೊಂಡು ನಿಂತಿದೆ. ತೀಸ್ತಾ ಸೆಟಲ್ವಾಡ್ ಜೈಲಿನಲ್ಲಿದ್ದರೆ, ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂದರು.

ಈ ಸುದ್ದಿ ಓದಿದ್ದೀರಾ : ರಾಜಕೀಯ ಕೈದಿಗಳ ಬಿಡುಗಡೆಗೆ ವೆಲ್ಫೇರ್ ಪಾರ್ಟಿ ಒತ್ತಾಯ: ಆಗಸ್ಟ್‌ 19ರಿಂದ ಸಾಮೂಹಿಕ ಸಹಿ ಅಭಿಯಾನ

ಮಾನವ ಹಕ್ಕುಗಳ ಹೋರಾಟಗಾರ ಜಿ ಎನ್ ಸಾಯಿಬಾಬಾ ಶೇ.98ರಷ್ಟು ದೈಹಿಕ ನ್ಯೂನತೆಯನ್ನು ಹೊಂದಿದ್ದು, ಒಬ್ಬ ಸಹಾಯಕನಿಲ್ಲದೆ ದಿನನಿತ್ಯದ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಅಂಥವರ ಮೇಲೆ ನರೇಂದ್ರ ಮೋದಿಯ ಕೊಲೆ ಸಂಚಿನ ಆರೋಪ ಹೊರಿಸಲಾಗಿದೆ. ಎರಡು ವರ್ಷದ ಹಿಂದೆ ನಿಧನ ಹೊಂದಿದ ಅವರ ತಾಯಿಯ ಅಂತಿಮ ದರ್ಶನ ಪಡೆಯಲು ನ್ಯಾಯಾಲಯ ಜಾಮೀನು ನೀಡಿಲ್ಲ. ಕಾರಣ, ಇವರು ತಪ್ಪಿಸಿಕೊಂಡು ಓಡಿ ಹೋಗಬಹುದೆಂದು. ಇದಕ್ಕೆ ತದ್ವಿರುದ್ಧವಾಗಿ 2002ರ ಗುಜರಾತ್ ನರಮೇಧದಲ್ಲಿ ಕೌಸರ್ ಬಾನು ಎಂಬ ಹೆಣ್ಣು ಮಗಳ ಹೊಟ್ಟೆಯಲ್ಲಿದ್ದ ಭ್ರೂಣವನ್ನು ತ್ರಿಶೂಲದಲ್ಲಿ ಚುಚ್ಚಿ ಮೆರವಣಿಗೆ ಮಾಡಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬಾಬಾ ಭಜರಂಗಿಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದು ನ್ಯಾಯಾಲಯ ಶಾಶ್ವತ ವೈದ್ಯಕೀಯ ಜಾಮೀನು ನೀಡುತ್ತದೆ ಎಂದು ಅವರು ಹೇಳಿದರು. 

Image
wpi

ಅಧ್ಯಕ್ಷತೆ ವಹಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವಕೇಟ್ ತಾಹೇರ್ ಹುಸೇನ್ ಮಾತನಾಡಿ, “ಇಂದಿನ ನ್ಯಾಯ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕಾಗಿದೆ, ಸಾಮಾಜಿಕ ಕಾರ್ಯಕರ್ತರು, ದಲಿತ ಹಿಂದುಳಿದ ಪರ ಹೋರಾಟಗಾರರನ್ನು ಕರಾಳ ಕಾನೂನುಗಳು ಜೈಲಿಗೆ  ಹಾಕಿವೆ. ಇಂಥ ಸಾಮಾಜಿಕ ಕಾರ್ಯಕರ್ತರನ್ನು ಸರ್ಕಾರ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯ ಮಾಡಬೇಕಾಗಿದೆ. ಯುಎಪಿಎ, 124 ಎ, ಎಂಎಸಿಒಸಿಎ ನಂತಹ ಕರಾಳ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. 

ಈ ವೇಳೆ ಹೈಕೋರ್ಟ್ ನ್ಯಾಯವಾದಿ, ಎಪಿಸಿಆರ್ ಕರ್ನಾಟಕ ರಾಜ್ಯಾಧ್ಯಕ್ಷ ಪಿ ಉಸ್ಮಾನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಸೇರಿದಂತೆ ಇನ್ನಿತರರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್