
- ಗ್ರಾಮ ಸಹಾಯಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
- ಕನಿಷ್ಠ ವೇತನ 21 ಸಾವಿರ ರೂ.ಗೆ ಹೆಚ್ಚಿಸುವಂತೆ ಬೇಡಿಕೆ
ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸಹಾಯಕರ ಕನಿಷ್ಠ ವೇತನವನ್ನು 21 ಸಾವಿರ ರೂ.ಗೆ ಹೆಚ್ಚಳ ಮಾಡುವಂತೆ ಮತ್ತು ನಾನಾ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ, ”ಪ್ರಸ್ತುತ ದಿನಮಾನಗಳಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಮನೆಯಲ್ಲಿರುವ ಹಿರಿಯರ ಪಾಲನೆ ಮತ್ತು ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಲೂ ಕಷ್ಟಪಡುವ ದುಸ್ಥಿತಿಗೆ ಬಂದು ತಲುಪಿದ್ದೇವೆ" ಎಂದು ಸಮಸ್ಯೆ ವಿವರಿಸಿದರು.
ಇದನ್ನು ಓದಿದ್ದೀರಾ? ಊರೇ ದ್ಯಾವ್ರು | 'ಬೆಳಕು' ಸಿಕ್ಕಿದ್ದೇ ತಡ ಶಾಲೆಯ ಜೊತೆಗೆ ಮಕ್ಕಳೂ ಹೊಳೆದರು
"ರಾಜ್ಯದಲ್ಲಿ ಒಟ್ಟು 10,450 ಗ್ರಾಮ ಸಹಾಯಕರಲ್ಲಿ 3 ಸಾವಿರದಷ್ಟು ಮಹಿಳೆಯರಿದ್ದು, ಅವರಿಗೆ ಹೆರಿಗೆ ರಜೆ ನೀಡಬೇಕು. ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ದಿನ ವೇತನ ಸಹಿತ ರಜೆ ನೀಡಬೇಕು" ಎಂದು ಒತ್ತಾಯಿಸಿದರು.
"ಗ್ರಾಮ ಸಹಾಯಕರು ಕೋವಿಡ್ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದಾರೆ. ಕೋವಿಡ್ನಿಂದ ಮೃತಪಟ್ಟ ಗ್ರಾಮಸಹಾಯಕರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಚುನಾವಣಾ ಸಮಯದಲ್ಲಿ ಕಾರ್ಯನಿರ್ವಹಿಸುವ ಗ್ರಾಮ ಸಹಾಯಕರಿಗೆ ಚುನಾವಣಾ ಭತ್ಯೆ ನೀಡಬೇಕು. ರಾತ್ರಿ ಪಾಳಿ ಕೆಲಸವನ್ನು ರದ್ದುಪಡಿಸಬೇಕು" ಎಂದು ಆಗ್ರಹಿಸಿದರು.
"2022-23ನೇ ಸಾಲಿನ ಬಜೆಟ್ನಲ್ಲಿ ಗ್ರಾಮ ಸಹಾಯಕರ ವೇತನವನ್ನು 10,000 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಈ ಕ್ರಮ ಅಭಿನಂದನೀಯ. ಆದರೆ ಈಗಿನ ಪರಿಸ್ಥಿತಿಗೆ ಇದು ಏನೂ ಸಾಲದು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು" ಎಂದರು.