ಸ್ವಾತಂತ್ರ್ಯದ ಅಮೃತ ಮಹೋತ್ಸವ | ಭಾರತದ ಧ್ವಜಸಂಹಿತೆಗೆ ಕೇಂದ್ರ ಸರ್ಕಾರ ತಂದ ತಿದ್ದುಪಡಿಗಳು ಯಾವುವು?

 • ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರ್ಕಾರದ ಅಭಿಯಾನ
 • ಭಾರತದ ಧ್ವಜಸಂಹಿತೆಗೆ ಹಲವು ತಿದ್ದುಪಡಿಗಳನ್ನು ತಂದಿರುವ ಕೇಂದ್ರ ಸರ್ಕಾರ

ಹಲವು ಮಹನೀಯರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಭಾರತ ದೇಶ ಈಗ 75ನೇ ವರ್ಷದ ಸ್ವಾಂತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಮನೆ ಮನೆಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಅಭಿಯಾನ ಆರಂಭಿಸಿದೆ. ಹಾಗೆಯೇ ಕೇಂದ್ರ ಸರ್ಕಾರವು ರಾಷ್ಟ್ರಧ್ವಜ ಸಂಹಿತೆಗೆ ಕೆಲವು ತಿದ್ದುಪಡಿಗಳನ್ನೂ ತಂದಿದೆ. 

2002ರ ಜನವರಿ 26ರಂದು ಜಾರಿಗೆ ಬಂದಿರುವ ಧ್ವಜ ಸಂಹಿತೆ ಭಾರತದ ರಾಷ್ಟ್ರಧ್ವಜದ ಬಳಕೆ, ಪ್ರದರ್ಶನ ಮತ್ತು ಆರೋಹಣದ ಕಾನೂನುಗಳು, ಸಂಪ್ರದಾಯಗಳು, ಅಭ್ಯಾಸಗಳು ಮತ್ತು ಸೂಚನೆಗಳನ್ನು ನೀಡುತ್ತದೆ. ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಸದಸ್ಯರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದನ್ನು ಹೇಗೆ ಪ್ರದರ್ಶಿಸಬೇಕು ಎಂಬುದನ್ನು ಧ್ವಜ ಸಂಹಿತೆ ಹೇಳುತ್ತದೆ. ತ್ರಿವರ್ಣ ಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ಎಲ್ಲ ದಿನಗಳು ಮತ್ತು ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಸಾರ್ವಜನಿಕ, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯ ಸದಸ್ಯರಿಗೆ ಅವಕಾಶವಿದೆ ಎಂದು ಧ್ವಜ ಸಂಹಿತೆ ಹೇಳುತ್ತದೆ.

ಲಾಂಛನ ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆ 1950 ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ 1971ರ ಪ್ರಕಾರ ಸಾರ್ವಜನಿಕರು, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಸದಸ್ಯರ ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಭಾರತದ ಧ್ವಜ ಸಂಹಿತೆ 2002, ರಾಷ್ಟ್ರೀಯ ಧ್ವಜ ಬಳಕೆ, ಪ್ರದರ್ಶನ ಮತ್ತು ಹಾರಾಟಕ್ಕಾಗಿ ಪಾಲಿಸಬೇಕಾದ ಮತ್ತು ಪಾಲಿಸಬಾರದ ನಿಯಮಗಳ ಪಟ್ಟಿಯನ್ನು ನೀಡಿದೆ. 

ತಿದ್ದುಪಡಿ ಏನು? 

ಕೇಂದ್ರ ಸರ್ಕಾರ 2021ರ ಡಿಸೆಂಬರ್ 30ರಂದು ಭಾರತ ಧ್ವಜ ಸಂಹಿತೆ 2002 ಅನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿಯು ಯಂತ್ರಗಳಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಬಟ್ಟೆಯ ಧ್ವಜಗಳ ತಯಾರಿಕೆ ಮತ್ತು ಬಳಕೆಗೆ ಅನುಮತಿ ನೀಡಿದೆ. ಈ ಹಿಂದೆ ಇದ್ದ ಧ್ವಜ ಸಂಹಿತೆಯಲ್ಲಿ ಇದಕ್ಕೆ ಅನುಮತಿ ಇರಲಿಲ್ಲ. ತಿದ್ದುಪಡಿ ಪ್ರಕಾರ ಕೈಯಿಂದ ನೇಯ್ದ ಅಥವಾ ಯಂತ್ರದಿಂದ ಮಾಡಿದ ಹತ್ತಿ, ಪಾಲಿಸ್ಟರ್, ಉಣ್ಣೆ, ರೇಷ್ಮ, ಖಾದಿಯಿಂದ ಮಾಡಿದ ರಾಷ್ಟ್ರ ಧ್ವಜಗಳನ್ನು ಸಹ ಬಳಸಬಹುದು.

2022ರ ಜುಲೈ 20ರಂದು ಕೇಂದ್ರ ಸರ್ಕಾರ ತಂದ ಮತ್ತೊಂದು ತಿದ್ದುಪಡಿಯ ಅನ್ವಯ ರಾಷ್ಟ್ರೀಯ ಧ್ವಜವನ್ನು ರಾತ್ರಿ ಮತ್ತು ಹಗಲು ವೇಳೆಯಲ್ಲಿಯೂ ಹಾರಿಸಬಹುದಾಗಿದೆ. ಹಿಂದಿನ ನಿಯಮದ ಪ್ರಕಾರ ತ್ರಿವರ್ಣ ಧ್ವಜವನ್ನು ಸೂರ್ಯೋದಯ ಮತ್ತು ಸೂರ್ಯಸ್ತದ ನಡುವೆ ಮಾತ್ರ ಹಾರಿಸಬಹುದಾಗಿತ್ತು.

ಧ್ವಜದ ಬಗ್ಗೆ ಒಂದಿಷ್ಟು ಮಾಹಿತಿ

ದೇಶ ಸ್ವತಂತ್ರವಾಗುವ ಕೆಲವು ದಿನಗಳ ಮೊದಲು, ಜುಲೈ 22, 1947 ರಂದು, ಸ್ವತಂತ್ರ ಭಾರತದ ಸಂವಿಧಾನದ ಬಗ್ಗೆ ಒಂದು ಸಭೆ ಆಯೋಜಿಸಲಾಯಿತು. ಅಲ್ಲಿ ಮೊದಲ ಬಾರಿಗೆ ಎಲ್ಲರ ಮುಂದೆ ಮೂರು ಬಣ್ಣಗಳ ರಾಷ್ಟ್ರೀಯ ಧ್ವಜವನ್ನು ಪ್ರಸ್ತುತಪಡಿಸಲಾಯಿತು. 1931ರಲ್ಲಿ ಕೆಲವು ಬದಲಾವಣೆಯೊಂದಿಗೆ ಇದನ್ನು ಅಳವಡಿಸಿಕೊಳ್ಳಲಾಯಿತು. ಅಶೋಕ ಚಕ್ರ ಮಧ್ಯದಲ್ಲಿ ಹಾಕಿ, ನೂಲುವ ಚಕ್ರವನ್ನು (ಚರಕ) ತೆಗೆಯಲಾಯಿತು. ಈ ಚಕ್ರ 24 ಗೆರೆಗಳನ್ನು ಹೊಂದಿದೆ.

ಆಗಸ್ಟ್ 15, 1947 ರಿಂದ 1950ರ ಜನವರಿ 26ರವರೆಗೆ ರಾಷ್ಟ್ರೀಯ ಧ್ವಜವನ್ನು ಭಾರತ ಪ್ರಭುತ್ವದ ಧ್ವಜವೆಂದು ಪ್ರಸ್ತುತಪಡಿಸಲಾಯಿತು. 1950 ರಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಅದನ್ನು ಭಾರತ ಗಣರಾಜ್ಯದ ರಾಷ್ಟ್ರೀಯ ಧ್ವಜವೆಂದು ಘೋಷಿಸಲಾಯಿತು. ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸ ಮಾಡಿದವರು ಆಂಧ್ರಪ್ರದೇಶದ ಪಿಂಗಳಿ ವೆಂಕಯ್ಯ.

ಬಣ್ಣಗಳ ವಿಶೇಷತೆ
ಭಾರತದ ರಾಷ್ಟ್ರ ಧ್ವಜವು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ 24 ಗೆರೆಗಳನ್ನು ಹೊಂದಿರುವ ಅಶೋಕ ಚಕ್ರ ಇದೆ. ಪ್ರತಿ ಬಣ್ಣಕ್ಕೂ ಅದರದ್ದೇ ಆದ ಮಹತ್ವ ಇದೆ.

ಕೇಸರಿ: ಧೈರ್ಯ, ತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆದ ಬಲಿದಾನಗಳ ಸಂಕೇತ
ಬಿಳಿ: ಪವಿತ್ರ ಮನಸ್ಸಿನೊಂದಿಗೆ ಸತ್ಯ ಶಾಂತಿಗಳೊಂದಿಗೆ ನಿತ್ಯವೂ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತ
ಹಸಿರು: ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯದ ಸಂಕೇತ.

ಈ ಸುದ್ದಿ ಓದಿದ್ದೀರಾ? ರಾಷ್ಟ್ರ ಧ್ವಜ ವಿವಾದ| ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಿ, ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

ಧ್ವಜಸಂಹಿತೆ  

 • ರಾಷ್ಟ್ರಧ್ವಜದ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಅದಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಎರಡನ್ನೂ ಶಿಕ್ಷೆಯಾಗಿ ವಿಧಿಸಬಹುದು.
 • ಧ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿಧಾನಗತಿಯಲ್ಲಿ ಇಳಿಸಬೇಕು. 
 • ಈ ಮೊದಲು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಧ್ವಜ ಹಾರಿಸಬೇಕು ಎಂಬ ನಿಯಮವಿತ್ತು. ಇದೀಗ ಅದನ್ನು ತಿದ್ದುಪಡಿ ಮಾಡಲಾಗಿದ್ದು, ಅದರ ಅನ್ವಯ ರಾತ್ರಿ ಮತ್ತು ಹಗಲು ವೇಳೆಯಲ್ಲಿಯೂ ಧ್ವಜ ಹಾರಿಸಬಹುದಾಗಿದೆ.
 • ರಾಷ್ಟ್ರ ಧ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
 • ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿ ಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜತೆಗೆ ಸರ್ಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಹುದು.
 • ಧ್ವಜ ಏರಿಸುವಾಗ ಧ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ, ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸಬೇಕು.
 • ರಾಷ್ಟ್ರ ಧ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಿನ ಅಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದುಕೊಳ್ಳುವುದಾಗಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ; ರಾಷ್ಟ್ರಧ್ವಜಕ್ಕೆ ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.
 • ಹವಾಮಾನ ವೈಪರೀತ್ಯದಿಂದ ಹಾಳಾಗದಂತೆ ಧ್ವಜವನ್ನು ಕಾಪಾಡಬೇಕು.
 • ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸಬೇಕು.
 • ಸಮ್ಮೇಳನಗಳು, ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಾಡಬೇಕು.
 • ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರಧ್ವಜ ಹಾರಿಸಬಹುದು.
ನಿಮಗೆ ಏನು ಅನ್ನಿಸ್ತು?
1 ವೋಟ್