ಮುಸ್ಲಿಂ ವರ್ತಕರಿಗೆ ನಿರ್ಬಂಧ | ಹಿಂದೂ ಧಾರ್ಮಿಕ ದತ್ತಿ ನಿಯಮದಲ್ಲಿ ಏನಿದೆ?

hindu-muslim
  • ರಾಜ್ಯದ ಹಲವೆಡೆ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ
  • ಹಿಂದೂ ಧಾರ್ಮಿಕ ದತ್ತಿ ನಿಯಮ ಈ ವಿಚಾರದಲ್ಲಿ ಹೇಳುವುದೇನು?
  • ಧಾರ್ಮಿಕ ದತ್ತಿ ನಿಯಮಗಳ ಸ್ಥೂಲ ಪರಿಚಯ ಇಲ್ಲಿದೆ

ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲಿನೊಂದಿಗೆ ಆರಂಭವಾದ ಹಿಂದೂ – ಮುಸ್ಲಿಂ ಸಂಘರ್ಷ ಈಗ ಜಾತ್ರೆಗಳ ವ್ಯಾಪಾರ ವಹಿವಾಟಿಗೂ ವಿಸ್ತರಿಸಿದೆ.

ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದ ವರ್ತಕರಿಗೆ ನಿರ್ಬಂಧ ಹೇರುತ್ತಿರುವ ಪ್ರಕರಣಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಉಡುಪಿ ಜಿಲ್ಲೆಯ ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ರಥೋತ್ಸವದಲ್ಲಿ ಹಿಂದೂಯೇತರರ ಅಂಗಡಿ-ಮುಂಗಟ್ಟಿಗೆ ಅವಕಾಶವಿಲ್ಲ ಎಂದು ಸೂಚನಾ ಫಲಕವನ್ನು ದೇವಸ್ಥಾನದ ಮುಂದೆ ಹಾಕುವುದರೊಂದಿಗೆ ಈ ವಿವಾದ ಆರಂಭವಾಗಿತ್ತು. 

Eedina App

ಪಡುಬಿದ್ರಿಯ ಬೆಳವಣಿಗೆ ಬೆನ್ನಲ್ಲೇ ರಾಜ್ಯದ ಕರಾವಳಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಿಗೂ ಇದು ವಿಸ್ತರಿಸಿದೆ. ಹಾಗೆಯೇ ಅನ್ಯ ಧರ್ಮೀಯರ ವ್ಯಾಪಾರ ನಿರ್ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪನಾಯಕ ಯು ಟಿ ಖಾದರ್ ಅಧಿವೇಶನದಲ್ಲಿ “ವ್ಯಾಪಾರಕ್ಕೂ ಧರ್ಮಕ್ಕೂ ತಳುಕು ಹಾಕುವುದು ಸೂಕ್ತವಲ್ಲ. ಹಿಂದೂ ಧಾರ್ಮಿಕ ದತ್ತಿ ಅಧಿನಿಯಮ ಉಲ್ಲೇಖಿಸಿ ಬ್ಯಾನರ್ ಅಳವಡಿಸಿದವರು ಹೇಡಿಗಳು” ಎಂದು ಹೇಳಿದ್ದರು. ಈ ಹೇಳಿಕೆ ಬಿಜೆಪಿ ನಾಯಕರನ್ನು ತೀವ್ರವಾಗಿ ಕೆರಳಿಸಿತ್ತು. ಸಚಿವ ಜೆ ಸಿ ಮಾಧುಸ್ವಾಮಿ ತಿರುಗೇಟು ನೀಡಿ, “ಈ ರೀತಿಯ ನಿರ್ಬಂಧ ವಿಧಿಸುವ ನಿಯಮವನ್ನು ಕಾಂಗ್ರೆಸ್ ಸರ್ಕಾರವೇ 2002ರಲ್ಲಿ ಜಾರಿ ಮಾಡಿತ್ತು,” ಎಂದು ತಿಳಿಸಿದರು. 

ಈ ನಿಯಮವನ್ನೇ ಇಟ್ಟುಕೊಂಡು, ರಾಜ್ಯದ ಹಲವೆಡೆ ಮುಸ್ಲಿಂ ವರ್ತಕರ ಮೇಲೆ ಹೇರುತ್ತಿರುವ ನಿರ್ಬಂಧ ಜಿಲ್ಲೆ ಜಿಲ್ಲೆಗೂ ವಿಸ್ತರಿಸುತ್ತಿದೆ. ಇತಿಹಾಸದ ಪ್ರಕಾರ ಮುಸ್ಲಿಂ ವ್ಯಾಪಾರಿ ನಿರ್ಮಿಸಿದ ಬಪ್ಪನಾಡು ದೇವಾಲಯ ಜಾತ್ರೆಯಲ್ಲೂ ಮುಸ್ಲಿಂ ವರ್ತಕರಿಗೆ ನಿರ್ಬಂಧಿಸಲಾಗಿದೆ. ಅಲ್ಲದೇ, ಶಿರಸಿಯ ಇತಿಹಾಸ ಪ್ರಸಿದ್ದ ಮಾರಿಕಾಂಬ ಜಾತ್ರೆಯಲ್ಲೂ ಇದೇ ಬೆಳವಣಿಗೆ ನಡೆದಿದೆ. ನೆಲಮಂಗಲದಲ್ಲಿ ನಡೆಯುವ ಉತ್ಸವದ ವೇಳೆಯೂ ಹಿಂದೂಯೇತರರಿಗೆ ಅವಕಾಶ ನೀಡಬಾರದು ಎನ್ನುವ ಕೂಗು ಕೇಳಿ ಬಂದಿದೆ.

AV Eye Hospital ad

ಹಾಗಾದರೆ ಹಿಂದೂ ಧಾರ್ಮಿಕ ದತ್ತಿ ಅಧಿನಿಯಮ ಹೇಳುವುದೇನು?

Dharmika datti niyama

ಏನಿದು ಧಾರ್ಮಿಕ ದತ್ತಿ ಅಧಿನಿಯಮ?

ರಾಜ್ಯದೊಳಗಿನ ಎಲ್ಲ ಧರ್ಮಾದಾಯ ದತ್ತಿಗಳು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಕ್ರಮಬದ್ಧಗೊಳಿಸಲು ಉಪಬಂಧ ಕಲ್ಪಿಸುವುದಕ್ಕಾಗಿ ಒಂದು ಏಕರೂಪದ ಕಾನೂನನ್ನು ತರಬೇಕೆಂಬ ಬಗ್ಗೆ ಸಾರ್ವಜನಿಕರಿಂದ ರಾಜ್ಯ ಸರ್ಕಾರಕ್ಕೆ ಬೇಡಿಕೆ ಇತ್ತು.
ಆದ್ದರಿಂದ ವಿವಿಧ ಧರ್ಮಾದಾಯ ದತ್ತಿ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ವಿಶೇಷ ಕಾನೂನಿನ ಮೂಲಕ ಕ್ರಮಬದ್ಧಗೊಳಿಸಿ ಏಕರೂಪತೆ ತರುವುದಕ್ಕಾಗಿ ಹೊಸ ಕಾನೂನನ್ನು ರೂಪಿಸಲಾಯಿತು. ಅದುವೇ ʼಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997ʼ. ಜೆ ಎಚ್ ಪಟೇಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಅಧಿನಿಯಮ ರೂಪಿಸಲಾಗಿತ್ತು.

ಎಸ್ ಎಂ ಕೃಷ್ಣ ಅವಧಿಯಲ್ಲಿ ಏನಾಯಿತು? 

ಪಟೇಲರ ಅವಧಿಯಲ್ಲಿ ರೂಪಿಸಲಾಗಿದ್ದ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997’ ವಿಧೇಯಕಕ್ಕೆ ಅವರ ಬಳಿಕ ಮುಖ್ಯಮಂತ್ರಿಯಾದ ಎಸ್‌.ಎಂ. ಕೃಷ್ಣ ಅವಧಿಯಲ್ಲಿ ಕೆಲವು ತಿದ್ದುಪಡಿ ತರಲಾಯಿತು. ಆ ತಿದ್ದುಪಡಿ ಅಧಿನಿಯಮವನ್ನು ʼಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮ- 2002ʼ ಎಂದು ಕರೆಯಲಾಯಿತು. ಈ ನಿಯಮದಲ್ಲಿ ದೇವಸ್ಥಾನದ ಸ್ಥಿರಾಸ್ತಿ ಗುತ್ತಿಗೆಗೆ ಸಂಬಂಧಪಟ್ಟ ಕಾರ್ಯಸೂಚಿಗಳನ್ನು ರೂಪಿಸಲಾಗಿದೆ. 2003ರ ಮೇ 1ರಿಂದ ಈ ನಿಯಮಗಳು ಜಾರಿಗೆ ಬಂದಿವೆ.

ಗುತ್ತಿಗೆಗೆ ಸಂಬಂಧಪಟ್ಟಂತೆ ನಿಯಮ ಹೇಳುವುದೇನು?

  1. ಧಾರ್ಮಿಕ ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳು ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ. 
  2. ಗುತ್ತಿಗೆದಾರನು, ದೇವಸ್ಥಾನದ ಭಕ್ತ ಸಮೂಹದ ಭಾವನೆಗಳಿಗೆ ಧಕ್ಕೆ ಮಾಡಬಹುದಾದ ಅಥವಾ ಆವರಣದ ಪಾವಿತ್ರ್ಯತೆಗೆ ಚ್ಯುತಿ ತರುವ ಯಾವುದೇ ವ್ಯವಹಾರ ನಡೆಸಲು ಅವಕಾಶವಿಲ್ಲ. 
  3. ಗುತ್ತಿಗೆ ನೀಡಿದ ಜಾಗದಲ್ಲಿ ಮದ್ಯಪಾನ ಮಾರಾಟ, ಮಾಂಸಾಹಾರದ ಹೋಟೆಲ್ ಹಾಗೂ ಲೈವ್ ಬ್ಯಾಂಡ್ಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
  4. ಗುತ್ತಿಗೆಗೆ ಹಿಡಿದ ಸ್ವತ್ತನ್ನು ಗುತ್ತಿಗೆಗೆ ನೀಡಲಾಗಿರುವ ಉದ್ದೇಶಕ್ಕಾಗಿ ಮಾತ್ರವೇ ಬಳಸತಕ್ಕದ್ದು.
  5. ಗುತ್ತಿಗೆ ಅವಧಿಯಲ್ಲಿ ಒಳಗೇಣಿಗೆಗೆ ಅವಕಾಶವಿರುವುದಿಲ್ಲ.

ಹೊರಗೆ ಗುತ್ತಿಗೆ ನೀಡಲು ಅವಕಾಶವಿದೆಯೇ? 

ಮುಜರಾಯಿ ಇಲಾಖೆಗೆ ಸೇರಿದ ಸ್ವತ್ತು, ದೇವಸ್ಥಾನದ ಆವರಣದ ಹೊರಗೆ; ಅಂದರೆ ಜಾತ್ರೆ–ಉತ್ಸವ ನಡೆಯುವ ಜಾಗದಲ್ಲಿ ಯಾವುದೇ ಸಮುದಾಯಕ್ಕೆ ನಿರ್ಬಂಧ ವಿಧಿಸುವ ಪ್ರಸ್ತಾಪ ಧಾರ್ಮಿಕ ದತ್ತಿ ನಿಯಮದಲ್ಲಿ ಇಲ್ಲ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app