ಜೀವ ಬೆದರಿಕೆ| ಗೃಹ ಸಚಿವರೇ ಬೇಜವಾಬ್ದಾರಿ ಹೇಳಿಕೆ ನೀಡುವಾಗ ಬೆದರಿಕೆ ಸಹಜ ಎಂದ ಕುಂವೀ

“ಆ ಬೆದರಿಕೆ ಪತ್ರ ಬರೆದಿರುವವನಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ನಾನು ಕನ್ನಡ ಶಿಕ್ಷಕ. ನನ್ನ ಹತ್ತಿರ ಬಂದರೆ ಆತನಿಗೆ ಕನ್ನಡ ಕಲಿಸುತ್ತೇನೆ. ಆತ ಬೆದರಿಕೆ ಪತ್ರವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬರೆಯಬಹುದಿತ್ತು. ಆತನ ಬಗ್ಗೆ ನನಗೆ ಅನುಕಂಪವಿದೆ” ಎಂದು ಕುಂವೀ ಜೀವ ಬೆದರಿಕೆ ಹಾಕಿದವನ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು!
Kum Veerabhadrappa
  • ಸಾರ್ವಜನಿಕ ಜೀವನದಲ್ಲಿ ಇದೆಲ್ಲಾ ಸಹಜ: ದೂರು ನೀಡಲ್ಲ
  • ಹಿಂದೂ, ಜೈ ಶ್ರೀರಾಮ್ ಎನ್ನಬೇಕೆಂಬುದು ಫ್ಯಾಸಿಸಂ ಲಕ್ಷಣ
  • ಭಯಾನಕ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂದ ಕುಂವೀ

ʼಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ, ಗೃಹ ಸಚಿವರೇ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿರುವಾಗ ಬೆದರಿಕೆ, ಜೀವಬೆದರಿಕೆಗಳೆಲ್ಲಾ ಸಹಜವೇʼ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತಮಗೆ ಬಂದಿರುವ ಜೀವ ಬೆದರಿಕೆ ಕರೆಗೆ ಪ್ರತಿಕ್ರಿಯಿಸಿದ್ದಾರೆ.

ಕೋಮು ಸಾಮರಸ್ಯ ಕದಡುವ ಪ್ರಯತ್ನಗಳ ವಿರುದ್ಧ ಮುಖ್ಯಮಂತ್ರಿಗೆ ನಾಡಿನ ಸಾಹಿತಿಗಳು, ಕಲಾವಿದರು ಬರೆದ ಪತ್ರಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಕುಂವೀ(ಕುಂ ವೀರಭದ್ರಪ್ಪ) ಅವರಿಗೆ ಗುರುವಾರ ಹಿಂದುತ್ವವಾದಿ ಎಂದು ತನ್ನನ್ನು ತಾನು ಹೇಳಿಕೊಂಡ ವ್ಯಕ್ತಿಯೊಬ್ಬರು ಜೀವ ಬೆದರಿಕೆ ಹಾಕಿ ಪತ್ರ ಬರೆದಿದ್ದರು.

ಆ ಜೀವ ಬೆದರಿಕೆ ಪತ್ರದ ಕುರಿತು ʼಈದಿನ.ಕಾಂʼ ಕುಂವೀ ಅವರ ಪ್ರತಿಕ್ರಿಯೆ ಕೇಳಿದಾಗ, ಅವರು "ಗೃಹ ಸಚಿವರೇ ಹಿಂದೆ ಮುಂದೆ ನೋಡದೆ ಬೆಂಗಳೂರಿನ ಚಂದ್ರ ಕೊಲೆ ಪ್ರಕರಣಕ್ಕೂ ಉರ್ದು ಭಾಷೆಗೆ ನಂಟು ಹಚ್ಚಿ, ಉರ್ದು ಮಾತನಾಡಲಿಲ್ಲ ಎಂದು ಆತನ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇಂತಹ ಬೇಜವಾಬ್ದಾರಿಯ ಹೇಳಿಕೆ ನೀಡುವವರೇ ಗೃಹ ಇಲಾಖೆಯ ಹೊಣೆ ಹೊತ್ತಿರುವಾಗ ಇಂತಹ ಬೆದರಿಕೆಗಳು, ಜೀವ ಬೆದರಿಕೆ ಕರೆಗಳು ಬರುವುದು ಸಹಜವೇ ಅಲ್ಲವೇ?" ಎಂದು ಹೇಳಿದರು.

“ಸಾರ್ವಜನಿಕ ಜೀವನದಲ್ಲಿ ಇದೆಲ್ಲಾ ಸಹಜ. ನನಗೆ ಇಂತಹ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಹಿಂದೆ ಲಿಂಗಾಯತ ಧರ್ಮ ಚಳವಳಿ ಸಂದರ್ಭದಲ್ಲಿ ಹೇಳಿಕೆ ನೀಡಿದಾಗಲೂ ಸಹ ನನಗೆ ಇಂತಹ ಬೆದರಿಕೆ ಪತ್ರಗಳು ಬರುತ್ತಿದ್ದವು. ಆದರೆ ಕೆಲವು ತಿಂಗಳಿನಿಂದೀಚೆಗೆ ಇದೆಲ್ಲಾ ಹೆಚ್ಚಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿ, ಮಾತನಾಡದೇ ಇರುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ನನ್ನಂತಹ ಲೇಖಕ ಹೇಗಿರಬೇಕು ಎಂಬುದು ಮುಖ್ಯ” ಎಂದರು.

ಅಲ್ಲದೆ, “ಆ ಬೆದರಿಕೆ ಪತ್ರ ಬರೆದಿರುವವನಿಗೆ ಕನ್ನಡ ಸರಿಯಾಗಿ ಬರುವುದಿಲ್ಲ. ನಾನು ಕನ್ನಡ ಶಿಕ್ಷಕ. ನನ್ನ ಹತ್ತಿರ ಬಂದರೆ ಆತನಿಗೆ ಕನ್ನಡ ಕಲಿಸುತ್ತೇನೆ. ಆತ ಬೆದರಿಕೆ ಪತ್ರವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬರೆಯಬಹುದಿತ್ತು. ಆತನ ಬಗ್ಗೆ ನನಗೆ ಅನುಕಂಪವಿದೆ” ಎಂದರು.

“ಇಂದು ಯುವಕರನ್ನು ʼಅಸ್ತ್ರʼಗಳನ್ನಾಗಿ ಪರಿವರ್ತಿಸಿದ್ದಾರೆ. ಯುವಕರ ʼಬ್ರೇನ್ ವಾಷ್ʼ ಮಾಡಿರುವುದರಿಂದ ಅವರಿಗೆ ವಿವೇಕ, ವಿವೇಚನೆ ಎರಡೂ ಇಲ್ಲ. ಅಂತಹ ಮುಗ್ಧರು, ಅಮಾಯಕರು ಬೆದರಿಕೆ ಪತ್ರ ಬರೆಯುತ್ತಿದ್ದಾರೆ. ಯಾಕೆಂದರೆ ಅಂತಹ ʼಅಸ್ತ್ರʼಗಳಿಗೆ ಅಕ್ಷರ ಜ್ಞಾನ, ಪಂಚೇಂದ್ರಿಯಗಳು ಇರುವುದಿಲ್ಲ. ಆದ್ದರಿಂದ ಇಂತಹವುಗಳು ಸಂಭವಿಸುತ್ತವೆ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಸಾಹಿತಿ ಕುಂ. ವೀರಭದ್ರಪ್ಪರಿಗೆ ಹಿಂದುತ್ವವಾದಿಯಿಂದ ಕೊಲೆ ಬೆದರಿಕೆ

ಬೆದರಿಕೆ ಸಂಬಂಧ ದೂರು ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ದೂರು ಕೊಡುವ ಅಗತ್ಯವಿಲ್ಲ. ದೂರು ತೆಗೆದುಕೊಳ್ಳಬೇಕಾದ ಇಲಾಖೆಯ ಮಂತ್ರಿಯೇ ಚಂದ್ರು ಕೊಲೆ ಸಂಬಂಧ ʼಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಲಾಗಿದೆʼ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ, ಗೃಹಖಾತೆ ಸಚಿವರೇ ಅ ರೀತಿ ಹೇಳಿದ ಮೇಲೆ ನಾವು ದೂರು ಯಾರಿಗೆ ನೀಡುವುದು” ಎಂದು ಪ್ರಶ್ನಿಸಿದರು.

“ಬಹಳ ಅಸಹಾಯಕ ಮತ್ತು ಭಯಾನಕ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ. ಅಂದಿನ ಕಾರ್ಯಕ್ರಮದಲ್ಲಿ ʼನಾನು ಹಿಂದು ಅಲ್ಲ; ನಾನು ಲಿಂಗಾಯತ, ಭಾರತೀಯ, ದೇಶಪ್ರೇಮಿʼ ಎಂದು ಹೇಳಿದ್ದೆ. ಇದರಲ್ಲಿ ತಪ್ಪೇನಿದೆ? ನಾವು ಹಿಂದೂ ಎನ್ನಬೇಕು, ಜೈ ಶ್ರೀರಾಮ್ ಎನ್ನಬೇಕು ಎಂದು ಒತ್ತಾಯಿಸುವುದು ಫ್ಯಾಸಿಸಂ ಲಕ್ಷಣ ಅಲ್ಲವೆ?” ಎಂದು ಹೇಳಿದರು. 

ನಿಮಗೆ ಏನು ಅನ್ನಿಸ್ತು?
13 ವೋಟ್