ರೈತರ ಬೆಳೆಗಳಿಗೆ ದುಪ್ಪಟ್ಟು ದರ ಎಲ್ಲಿದೆ? ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪ್ರಶ್ನೆ

D K Shivakumar
  • ಮಾಗಡಿ ರೈತರ ಜತೆ ಬುಧವಾರ ರಸಗೊಬ್ಬರ ಮತ್ತಿತರರ ಸಮಸ್ಯೆ ಆಲಿಸಿದ ಡಿಕೆಶಿ
  • ಕಣ್ಣಾರೆ ರೈತರ ಪರಿಸ್ಥಿತಿ ನೋಡಲು ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರು

ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಹಾಗಾದರೆ ರೈತರ ಬೆಳೆಗಳಿಗೆ ದುಪ್ಪಟ್ಟು ದರ ಸಿಗಬೇಕು ಅಲ್ವಾ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಪ್ರಶ್ನಿಸಿದರು.

ಮಾಗಡಿಯಲ್ಲಿ ಬುಧವಾರ ರೈತರೊಂದಿಗೆ ಸಂವಾದ ನಡೆಸಿ ರಸಗೊಬ್ಬರ ಮತ್ತಿತರರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಅವರು, “ರೈತರು ಕೃಷಿಗೆ ಬಳಸುವ ಪ್ರತಿ ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ. ಆದರೆ ಸರ್ಕಾರ ಬೆಳೆಗೆ ಸರಿಯಾದ ಬೆಂಬಲ ಬೆಲೆಯನ್ನು ಮಾತ್ರ ನೀಡುತ್ತಿಲ್ಲ. ಈ ಮಧ್ಯೆ ಎಪಿಎಂಸಿ ತೆಗೆಯಲು ಮುಂದಾಗಿದ್ದಾರೆ,” ಎಂದರು.

“ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ರಸಗೊಬ್ಬರ ವಿಚಾರವಾಗಿ ನನಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಕರೆ ಮಾಡಿ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ನನ್ನ ಕಣ್ಣಾರೆ ಪರಿಸ್ಥಿತಿ ನೋಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ಇಲ್ಲಿಯ ವಾಸ್ತವ ಸ್ಥಿತಿ ಅರಿತು ಅಧಿಕಾರಿಗಳ ಜತೆ ಮಾತನಾಡುವೆ,” ಎಂದು ತಿಳಿಸಿದರು.

“ಕಳೆದ ಆರೇಳು ವರ್ಷಗಳಿಂದ ರಸಗೊಬ್ಬರ ಬೆಲೆ ಶೇ.50ರಿಂದ 60ರಷ್ಟು ಏರಿಕೆಯಾಗಿದೆ. ರೈತರಿಗೆ ಸಬ್ಸಿಡಿಯನ್ನು ನೇರವಾಗಿ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ರೈತ ಮಾರುಕಟ್ಟೆಯಲ್ಲಿ ಹೆಚ್ಚುವರಿ ಹಣ ಕೊಟ್ಟು ರಸಗೊಬ್ಬರ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ,” ಎಂದರು.

“ರೈತನಿಗೆ ವೇತನ, ಬಡ್ತಿ, ಪಿಂಚಣಿ ಹಾಗೂ ಲಂಚ ಯಾವುದೂ ಇಲ್ಲ. ಕಾಳಸಂತೆ ಹೆಚ್ಚಾಗಿದ್ದು, ಇಲಾಖೆ ರೈತರತ್ತ ಗಮನ ಹರಿಸಬೇಕು. ನಾನು ತಾಲೂಕು ಎಪಿಎಂಸಿಗೂ ಭೇಟಿ ನೀಡಿದ್ದು ಇಲ್ಲಿರುವ ರಸಗೊಬ್ಬರ ವ್ಯಾಪಾರಿಗಳ ಭೇಟಿ ಮಾಡಿದ್ದೇನೆ. ಈ ವ್ಯಾಪಾರಿಗಳಿಗೆ ಸರಿಯಾದ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಸಮಯ ತಳ್ಳಲು ಬೇರೆ ಔಷಧಿ ನೀಡುತ್ತಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಬ್ಬಂದಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕೃಷಿ ಇಲಾಖೆ

ರೈತ ಈಗ ಬದುಕುವುದು ಕಷ್ಟವಾಗಿದೆ. ರೈತರಿಗೆ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹಾಲಿನ ಬೆಲೆ ಹೆಚ್ಚಿಸಿದರೆ ಸಮಸ್ಯೆ ಏನು? ಹಸುಗಳ ಮೇವಿನ ಬೆಲೆಗಳು ಹೆಚ್ಚಾಗಿದ್ದು, ರೈತನಿಗೆ ವೆಚ್ಚ ಹೆಚ್ಚಿದೆ. ರೈತರು ಹೈನುಗಾರಿಕೆ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಪ್ರೋತ್ಸಾಹ ನೀಡಬೇಕಾಗುತ್ತದೆ,” ಎಂದರು.

ಇದೇ ವೇಳೆ ಮುಂಗಾರು ಸಂದರ್ಭದಲ್ಲಿ ರಸಗೊಬ್ಬರ ಕೊರತೆ, ಕಾಳ ಸಂತೆಯಲ್ಲಿ ಮಾರಾಟ ಹಾಗೂ ರಸಗೊಬ್ಬರ ಕಲಬೆರಕೆ ಕುರಿತು ರೈತರ ಸಮಸ್ಯೆಗಳಿಗೆ ಡಿ ಕೆ ಶಿವಕುಮಾರ್‌ ಕಿವಿಗೊಟ್ಟರು. ರೈತರು ರಸಗೊಬ್ಬರ ವಿಚಾರವಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ರೈತರ ಜತೆ ಸಂವಾದ ಮುಗಿದ ಮೇಲೆ ತಾಲೂಕು ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್