
- ಸಿಬಿಲ್ ಸ್ಕೋರ್ ಕಾರಣಕ್ಕೆ ಸಾಲ ನಿರಾಕರಣೆ; ಆತ್ಮಹತ್ಯೆಗೆ ಯತ್ನಿಸಿದ್ದ ರೈತ
- ಆರ್ ಬಿಐ ನಿಯಮ ಇಲ್ಲದಿದ್ದರು ಬ್ಯಾಂಕ್ಗಳೇ ಅಲಿಖಿತ ನಿಯಮ ಮಾಡಿವೆ
"ಬಳ್ಳಾರಿ ಜಿಲ್ಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಮುದ್ರಾ ಯೋಜನೆ ಸಾಲ ಕೊಡಲು, ನಿಮಗೆ ಸಿಬಿಲ್ ಸ್ಕೋರ್ ಇಲ್ಲ. ಹಾಗಾಗಿ ಬೆಲೆಬಾಳುವ ನಿವೇಶನವನ್ನು ಜಾಮೀನು ನೀಡಿ ಎಂದು ಬ್ಯಾಂಕಿನವರು ಕೇಳುತ್ತಿದ್ದಾರೆ" ಎಂದು ರೈತ ಮಹಿಳೆ ಜಿ ವಿ ಲಕ್ಷ್ಮೀದೇವಿ ಬಂಡ್ರಿ ಆರೋಪಿಸಿದರೆ, "ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕೃಷಿ ಚಟುವಟಿಕೆಗೆ ಚಿನ್ನದ ಸಾಲ ಕೊಡಲು ಸಿಬಿಲ್ ಸ್ಕೋರಿಲ್ಲ ಎಂದು ಸತಾಯಿಸುತ್ತಿದ್ದಾರೆ" ಎಂದು ಸಮುದೇವನಪುರ ಎಸ್ ಜಿ ನಂಜುಂಡಸ್ವಾಮಿ ಎಂಬ ರೈತ ದೂರುತ್ತಿದ್ದಾರೆ.
ಇತ್ತಿಚೀನ ವರ್ಷಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಖಾಸಗಿ ಬ್ಯಾಂಕ್, ಫೈನಾನ್ಸ್ ಕಂಪನಿಗಳೆಲ್ಲ ಸಾಲ ನೀಡಲು ಸಿಬಿಲ್ ಸ್ಕೋರ್ ಕಡ್ಡಾಯ ಎಂದು ನಿಯಮ ಹೇಳುತ್ತಿವೆ. ನೂರಾರು ಸಮಸ್ಯೆಗಳ ಸುಳಿಯಲ್ಲಿರುವ ರೈತರಿಗೆ ಕೃಷಿ ಕೆಲಸ, ಮಕ್ಕಳ ವಿದ್ಯಾಭ್ಯಾಸದಂತಹ ಸಕಾರಣಗಳಿಗೂ ಸಿಬಿಲ್ ಸ್ಕೋರ್ ಮಾನದಂಡ ಮುಂದೊಡ್ಡಿ ಸಾಲ ನೀಡದೇ ಸತಾಯಿಸಲಾಗುತ್ತಿದೆ.
ಹಾಗಾಗಿ ರೈತರಿಗೆ ಮತ್ತು ಕೃಷಿ ಸಂಬಂಧಿತ ವ್ಯವಹಾರಗಳಿಗೆ ಈ ಸಿಬಿಲ್ ಸ್ಕೋರ್ ಕೇಳಬಾರದು. ಸಾಲ ಮನ್ನಾವನ್ನು ಕೂಡ ಸಿಬಿಲ್ ಸ್ಕೋರ್ಗೆ ಪರಿಗಣಿಸಿದರೆ ಬಹುತೇಕ ಯಾವ ರೈತರೂ ಮುಂದೆ ಸಾಲ ಪಡೆಯುವುದು ಸಾಧ್ಯವಿಲ್ಲ. ಅಲ್ಲದೆ, ಹೆಚ್ಚಾಗಿ ರೈತರು ಸಾಲ ಪಡೆಯುವುದು ಕೃಷಿ ಕಾರಣಕ್ಕೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ದರಿಂದ ಇಂತಹ ಸಿಬಿಲ್ ಸ್ಕೋರ್ ಅನ್ವಯಿಸಿ ಅವರಿಗೆ ಸಾಲ ನಿರಾಕರಿಸಿದರೆ ಅದು ಕೃಷಿ ಮತ್ತು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮಬೀರಲಿದೆ ಎಂದು ರೈತ ಮುಖಂಡರು ಕೂಡ ಈ ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸಿಬಿಲ್ ಸ್ಕೋರ್ ಇಲ್ಲದ್ದಕ್ಕೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿದ್ದರಿಂದ, ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎಚ್ ಡಿ ಕೋಟೆ ತಾಲೂಕಿನಲ್ಲಿ ಈ ಹಿಂದೆ ನಡೆದಿತ್ತು. ಹಾಗಾಗಿ ಸಿಬಿಲ್ ಸ್ಕೋರ್ ಎಂಬುದು ರೈತರನ್ನು ಪೆಡಂಭೂತವಾಗಿ ಕಾಡುತ್ತಿದ್ದು, ಅದರ ಬಗ್ಗೆ ಕೆಲ ಮಾಹಿತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಸಿಬಿಲ್ ಸ್ಕೋರ್ ಎಂದರೇನು?
ಸಿಬಿಲ್ ಸ್ಕೋರ್ ಖಾತೆದಾರರ ಪಡೆದ ಸಾಲ ಮತ್ತು ಅದನ್ನು ಸಕಾಲದಲ್ಲಿ ತೀರಿಸಿದ್ದಾರೆಯೇ? ಇಲ್ಲವೇ ಎಂಬುದರ ಮೇಲೆ ನಿರ್ಧರಿಸುವ ಮೂರು-ಅಂಕಿಯ ಸಂಖ್ಯಾ ಸಾರಾಂಶ. ಖಾತೆದಾರ ಎಷ್ಟು ಸಾಲವನ್ನು ಪಡೆದಿದ್ದ. ಅದನ್ನು ಯಾವಾಗ ತೀರಿಸಿದ, ಸಕಾಲದಲ್ಲಿ ಕಂತು ಕಟ್ಟಿದ್ದಾನೆಯೇ? ಅಥವಾ ಸಾಲ ಬಾಕಿ ಉಳಿಸಿಕೊಂಡಿದ್ದಾನೆಯೇ? ಎಂಬುದರ ಆಧಾರದಲ್ಲಿ ಸ್ಕೋರ್ ನೀಡಲಾಗುತ್ತದೆ. ಹಾಗಾಗಿ ಇದನ್ನು ಸಿಐಆರ್ ಅಂದರೆ ಕ್ರೆಡಿಟ್ ಮಾಹಿತಿ ವರದಿ ಎಂದೂ ಕರೆಯುತ್ತಾರೆ. ಸಿಐಆರ್ ಎನ್ನುವುದು ಸಾಲದ ಪ್ರಕಾರಗಳು ಮತ್ತು ಕ್ರೆಡಿಟ್ ಸಂಸ್ಥೆಗಳಲ್ಲಿ ವ್ಯಕ್ತಿಯ ಕ್ರೆಡಿಟ್ ಪಾವತಿ ಇತಿಹಾಸ. ಆದರೆ, ಅದು ಖಾತೆದಾರರ ಉಳಿತಾಯ, ಹೂಡಿಕೆಗಳು ಅಥವಾ ಸ್ಥಿರ ಠೇವಣಿಗಳ ವಿವರಗಳನ್ನು ಒಳಗೊಂಡಿರುವುದಿಲ್ಲ.
ಸಾಲ ಪಡೆಯಲು ಸಿಬಿಲ್ ಸ್ಕೋರ್ ಎಷ್ಟಿರಬೇಕು?
ಸಿಐಆರ್ನ ‘ಖಾತೆಗಳು’ ಮತ್ತು ‘ವಿಚಾರಣೆ’ ವಿಭಾಗದಲ್ಲಿ ತೋರಿಸುವಂತೆ ಬ್ಯಾಂಕ್ ಖಾತೆದಾರರ ಸಾಲ ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ಲೆಕ್ಕಹಾಕಲಾದ ಸಿಬಿಲ್ ಸ್ಕೋರ್ 300-900ರ ನಡುವೆ ಇರುತ್ತದೆ. ಸಾಮಾನ್ಯವಾಗಿ 700ಕ್ಕಿಂತ ಹೆಚ್ಚಿನ ಸ್ಕೋರ್ ಇದ್ದರೆ ಉತ್ತಮವೆಂದು ಪರಿಗಣಿಸಲಾಗುತ್ತದೆ. 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿದ್ದರೆ ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಪಡೆಯಲು ಸಹಾಯವಾಗುತ್ತದೆ.
ಸಿಬಿಲ್ ಸ್ಕೋರ್ ನಿರ್ಧಾರ ಮಾಡುವವರು ಯಾರು?
ಸಿಬಿಲ್ ಸ್ಕೋರ್ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಆರ್ಬಿಐ ನಾಲ್ಕು ಏಜೆನ್ಸಿಗಳಿಗೆ ಅಧಿಕಾರ ನೀಡಿದೆ. ಸಿಬಿಲ್, ಎಕ್ಸ್ಪೀರಿಯಾ, ಅಕ್ವಿಫ್ಯಾಕ್ಸ್ ಮತ್ತು ಹಿಮಾರ್ಕ್ಸ್. ಈ ಕಂಪನಿಗಳು ಬ್ಯಾಂಕ್ಗಳು, ಎನ್ಬಿಎಫ್ಸಿಗಳು, ಫಿನ್ಟೆಕ್ ಕಂಪನಿಗಳು ಮುಂತಾದ ವಿವಿಧ ಮೂಲಗಳಿಂದ ಸಾಲ, ಅದರ ಮರುಪಾವತಿ ಸೇರಿದಂತೆ ಮಾಹಿತಿಯನ್ನು ಸಂಗ್ರಹಿಸುತ್ತವೆ. ಅದರ ಆಧಾರದ ಮೇಲೆ ಸಿಬಿಲ್ ಸ್ಕೋರ್ ತಯಾರಿಸಲಾಗುತ್ತದೆ.
ಯಾವುದಕ್ಕೆಲ್ಲ ಸಿಬಿಲ್ ಸ್ಕೋರ್ ಕಡ್ಡಾಯವಲ್ಲ?
ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ, ಯಾವುದೇ ಕೃಷಿ ಸಂಬಂಧಿತ ಸಾಲಗಳಿಗೆ ಮತ್ತು ಚಿನ್ನ ಅಡವಿಟ್ಟು ಪಡೆಯುವ ಸಾಲಕ್ಕೆ ಸಿಬಿಲ್ ಸ್ಕೋರ್ ಮಾನದಂಡವಲ್ಲ. ಇನ್ನುಳಿದಂತೆ ವೈಯಕ್ತಿಕ ಅಥವಾ ವ್ಯಾಪಾರ ಉದ್ದೇಶ, ಮನೆ ಸಾಲ, ವಾಹನ ಸಾಲ, ಶಿಕ್ಷಣ ಸಾಲ ಮಂಜೂರಾತಿಗೆ ಸಿಬಿಲ್ ಸ್ಕೋರ್ ಕಡ್ಡಾಯವಾಗಿದೆ.
ಸಿಬಿಲ್ ಸ್ಕೋರ್ ಕಡಿಮೆಯಾಗಲು ಕಾರಣ?
ಏಕ ಕಾಲಕ್ಕೆ ಬೇರೆ ಬೇರೆ ಸಾಲಗಳನ್ನು ಪಡೆದಿದ್ದರೆ, ಸಕಾಲಕ್ಕೆ ಸಾಲ ಮರು ಪಾವತಿ ಮಾಡದಿದ್ದಲ್ಲಿ, ಕ್ರೆಡಿಟ್ ಕಾರ್ಡ್ಗಳ ಬಿಲ್ ಮೊತ್ತ ಸೂಕ್ತ ಸಮಯದಲ್ಲಿ ಪಾವತಿಯಾಗದಿದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ. ಅಲ್ಲದೆ, ಬ್ಯಾಂಕಿನಲ್ಲಿ ಪದೇಪದೆ ಸಿಬಿಲ್ ಸ್ಕೋರ್ ಪರಿಶೀಲಿಸುವುದರಿಂದಲೂ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.
ಸಿಬಿಲ್ ಸ್ಕೋರ್ ಬಗ್ಗೆ ಜ್ಞಾನವಿಲ್ಲದವರು ಸಾಲಕ್ಕಾಗಿ ಸಿಕ್ಕ ಬ್ಯಾಂಕ್ಗಳಲ್ಲೆಲ್ಲ ವಿಚಾರಿಸಿ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಿಸುತ್ತಾರೆ. ವರ್ಷಕ್ಕೆ 10 ರಿಂದ 12 ಬಾರಿ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಿದರೆ ಸ್ಕೋರ್ ಕಡಿಮೆಯಾಗುತ್ತದೆ.
ರೈತ ಸಾಲಕ್ಕೆ ಸಿಬಿಲ್ ಕಡ್ಡಾಯ ಎಂಬ ನಿರ್ದೇಶನ ಇದೆಯಾ?
ಬೆಳೆ ಸಾಲ ನೀಡಲು ಸಿಬಿಲ್ ಸ್ಕೋರ್ ಕಡ್ಡಾಯ ಎಂಬ ನಿಯಮ ಆರ್ಬಿಐ ಸೂಚನೆಯಲ್ಲಿಲ್ಲ. ಕೃಷಿ ಸಾಲ ಮಾತ್ರವಲ್ಲ; ಯಾವುದೇ ಬಗೆಯ ಸಾಲಕ್ಕೂ ಸಿಬಿಲ್ ಸ್ಕೋರ್ ಕಡ್ಡಾಯವಾಗಿ ಪರಿಗಣಿಸುವಂತೆ ಕೂಡ ಆರ್ ಬಿಐ ಸೂಚನೆ ನೀಡಿಲ್ಲ. ಆದರೆ ಆಯಾ ಬ್ಯಾಂಕ್ ವ್ಯವಸ್ಥಾಪಕರು ಸಾಲ ಪಡೆಯುವ ವ್ಯಕ್ತಿ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿದ್ದಾನೆಯೇ? ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸಿಬಿಲ್ ಸ್ಕೋರ್ ಪರಿಶೀಲಿಸುವುದು ವಾಡಿಕೆ. ಹಾಗಾಗಿ ಸಾಲ ನೀಡಲಾಗದ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ನೆಪ ಹೇಳುವುದು ಸಾಮಾನ್ಯ. ಸಾಮಾನ್ಯವಾಗಿ ಆದಾಯದ ಶೇ.30ಕ್ಕಿಂತ ಹೆಚ್ಚಿನ ಸಾಲ ಮಾಡಿದರೆ ಸಿಬಿಲ್ ಸ್ಕೋರ್ ಕಡಿಮೆ ತೋರಿಸುತ್ತದೆ.