ಎಸಿಬಿ ರದ್ದು, ಲೋಕಾಯುಕ್ತಕ್ಕೆ ಬಲ: ರಾಜಕೀಯ ಪಕ್ಷಗಳ ಮೇಲಾಟಕ್ಕೆ ವಿರಾಮ ಹಾಕಿದ ಹೈಕೋರ್ಟ್‌ ತೀರ್ಪು

ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ, 'ತಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತ ಸಂಸ್ಥೆಗಿದ್ದ ಸ್ವತಂತ್ರ ಅಧಿಕಾರವನ್ನು ಮರುಸ್ಥಾಪಿಸುವುದಾಗಿ' ಘೋಷಣೆ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರದ ಮೇಲೆಯೇ ಸಾಲುಸಾಲು ಭ್ರಷ್ಟಾಚಾರದ ಗಂಭೀರ ಅರೋಪಗಳು ಕೇಳಿಬಂದಿವೆ. ಹಲವು ಹಗರಣಗಳಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರ ಲೋಕಾಯುಕ್ತದ ಬಗ್ಗೆ ಯಾವ ನಿರ್ಧಾರಗಳನ್ನೂ ಕೈಗೊಳ್ಳದೆ ಮೂರು ವರ್ಷದ ಅಧಿಕಾರವಧಿಯನ್ನು ಪೂರ್ಣಗೊಳಿಸಿದೆ.
ACB-Lokayukta

2016ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ರಚಿಸಿದ್ದ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರಾಜ್ಯ ಹೈಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಎಸ್ ಆರ್ ಹಿರೇಮಠ್ ಮತ್ತು ಇತರರು 2016ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸುದೀರ್ಘ ವಿಚಾರಣೆ ನಂತರ ಹೈಕೋರ್ಟ್ ಮಹತ್ವದ ತೀರ್ಪು (ಆ.12ರಂದು) ನೀಡಿದೆ. ಇದೊಂದು ಐತಿಹಾಸಿಕ ತೀರ್ಪು ಎಂದು ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. 

2008ರ ನಂತರ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಸ್ವಾಯುತ್ತ ಸಂಸ್ಥೆಯಾಗಿ ತನ್ನ ಕರ್ತವ್ಯವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸಿದ್ದ ಲೋಕಾಯುಕ್ತ, ಬಿಜೆಪಿ ಸರ್ಕಾರದಲ್ಲಿ ತಾಂಡವವಾಡುತ್ತಿದ್ದ ಲಂಚ, ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಯಲ್ಲಿ ದೇಶದ ಗಮನ ಸೆಳೆದಿತ್ತು.

ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಶಾಸಕರಾಗಿದ್ದ ಆನಂದ್ ಸಿಂಗ್, ವೈ ಸಂಪಂಗಿ ಸೇರಿದಂತೆ ಹಲವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಬೇಕಾಯಿತು. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋತು, ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾಗಲು ಲೋಕಾಯುಕ್ತ ಆಗ ನಡೆಸಿದ ಭ್ರಷ್ಟಾಚಾರ ವಿರುದ್ಧದ ನಿರಂತರ ಕಾರ್ಯಾಚರಣೆಯೂ ಪ್ರಮುಖ ಕಾರಣವಾಗಿತ್ತು. 

ಲೋಕಾಯುಕ್ತ ಸಂಸ್ಥೆ ನಡೆಸಿದ ತನಿಖೆಯಿಂದ ಅಂದಿನ ಹಾಲಿ ಮುಖ್ಯಮಂತ್ರಿಯೇ ಜೈಲು ಸೇರಬೇಕಾಗಿ ಬಂದಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಜತೆಗೆ, ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಅಷ್ಟರಲ್ಲಿ ಲೋಕಾಯುಕ್ತ ಹುದ್ದೆಯಿಂದ ಸಂತೋಷ್ ಹೆಗ್ಡೆ ಕೂಡಾ ನಿವೃತ್ತರಾಗಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, 2015ರಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು, ಹತ್ತು ವರ್ಷಗಳ ಕಾಲ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಯಾವುದೇ ವ್ಯಕ್ತಿಯನ್ನು ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರನ್ನಾಗಿ ನೇಮಿಸಬಹುದು. ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ, ವಿಧಾನ ಪರಿಷತ್ತಿನ ಸಭಾಪತಿ, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಅವರ ಸಲಹೆಯಂತೆ ಲೋಕಾಯುಕ್ತರನ್ನು ನೇಮಕ ಮಾಡುವಂತೆ ತಿದ್ದುಪಡಿ ತರಲಾಯಿತು.

'ಲೋಕಾಯುಕ್ತ' ದುರ್ಬಲಗೊಳಿಸಿ 'ಎಸಿಬಿ' ರಚಿಸಿದ್ಯಾಕೆ ಸಿದ್ದರಾಮಯ್ಯ?

ದೇಶದಲ್ಲೇ ಪ್ರಬಲ ತನಿಖಾ ಸಂಸ್ಥೆ ಎಂದು ಖ್ಯಾತಿ ಗಳಿಸಿದ್ದ ಕರ್ನಾಟಕ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸುವುದನ್ನು ಬಿಟ್ಟು, ದುರ್ಬಲ ಎಸಿಬಿ ರಚಿಸಿದ್ದು ಏಕೆ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಇದೇ ವಿಚಾರಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಜನಾಕ್ರೋಶ ವ್ಯಕ್ತವಾಗಿತ್ತು. ಎಸಿಬಿ ರಚನೆಯನ್ನು ಸಮರ್ಥಿಸಿಕೊಂಡಿದ್ದ ಸಿದ್ದರಾಮಯ್ಯ "ಲೋಕಾಯುಕ್ತದ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡುತ್ತಿದ್ದೇವೆ. ಎಸಿಬಿ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಮಟ್ಟ ಹಾಕುತ್ತೇವೆ" ಎಂದು ಹೇಳಿದ್ದರು.

ಎಸಿಬಿ ರಚನೆಯನ್ನು ಅಂದಿನ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿದ್ದವಾದರೂ, ಪ್ರತಿಪಕ್ಷಗಳ ಪ್ರಮುಖ ನಾಯಕರ ಮೇಲೆ ಲೋಕಾಯುಕ್ತದಲ್ಲಿ ಹಲವು ದೂರುಗಳು ದಾಖಲಾಗಿದ್ದರಿಂದ ಅವರೂ ಸುಮ್ಮನಾಗಿದ್ದರು. ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ಸಹ ದಾಖಲಾಗಿತ್ತು. 

ಜತೆಗೆ, ಸಿದ್ದರಾಮಯ್ಯ ಧರಿಸಿದ್ದ 50 ಲಕ್ಷ ರೂ. ಮೌಲ್ಯದ 'ಹ್ಯೂಬ್ಲೋಟ್' ವಾಚ್ ಬಗ್ಗೆಯೂ ವಿವಾದ ಭುಗಿಲೆದ್ದಿತ್ತು. ತಮ್ಮ ಮೇಲೆ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳಲ್ಲಿ ಮುಂದೆ ತೊಂದರೆಯಾಗಬಹುದು, ಬಿ ಎಸ್ ಯಡಿಯೂರಪ್ಪ ಅವರಂತೆ ತನ್ನ ಮೇಲೂ ಲೋಕಾಯುಕ್ತ ಪೊಲೀಸರ ಕಣ್ಣು ಬೀಳಬಾರದು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಗಿದ್ದ ಹಲವು ಅಧಿಕಾರಗಳನ್ನು ಎಸಿಬಿಗೆ ವರ್ಗಾಯಿಸಿ, ಲೋಕಾಯುಕ್ತ ಪೊಲೀಸ್ ಠಾಣೆಗಳನ್ನು ರದ್ದು ಮಾಡಿದ್ದರು ಎಂಬ ಆರೋಪ ಅವರ ಮೇಲಿದೆ. 

2018ರ ವಿಧಾನಸಭಾ ಚುನಾವಣೆಯಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚಿಸಿದ ಸಿದ್ದರಾಮಯ್ಯ ನಡೆಯೇ ಚುನಾವಣಾ ವಿಷಯವಾಗಿತ್ತು. ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ, 'ತಾನು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತ ಸಂಸ್ಥೆಗಿದ್ದ ಸ್ವತಂತ್ರ ಅಧಿಕಾರವನ್ನು ಮರುಸ್ಥಾಪಿಸುವುದಾಗಿ' ಘೋಷಣೆ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರದ ಮೇಲೆಯೇ ಸಾಲುಸಾಲು ಭ್ರಷ್ಟಾಚಾರದ ಗಂಭೀರ ಅರೋಪಗಳು ಕೇಳಿಬಂದಿವೆ. ಹಲವು ಹಗರಣಗಳಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರ ಲೋಕಾಯುಕ್ತದ ಬಗ್ಗೆ ಯಾವ ನಿರ್ಧಾರಗಳನ್ನೂ ಕೈಗೊಳ್ಳದೆ ಮೂರು ವರ್ಷದ ಅಧಿಕಾರವಧಿಯನ್ನು ಪೂರ್ಣಗೊಳಿಸಿದೆ.

ಸಂತೋಷ್ ಹೆಗ್ಡೆ ನಿವೃತ್ತಿ ನಂತರ ದುರ್ಬಲವಾದ ಲೋಕಾಯುಕ್ತ

ಸಂತೋಷ್ ಹೆಗ್ಡೆ ನಿವೃತ್ತಿ ಮತ್ತು 2015ರ ತಿದ್ದುಪಡಿಯ ನಂತರ ಲೋಕಾಯುಕ್ತಕ್ಕೆ ಸಮರ್ಥ ಮುಖ್ಯಸ್ಥರೇ ಬರಲಿಲ್ಲ ಎನ್ನುವ ಆರೋಪಗಳು ಕೇಳಿಬಂದವು. ಲೋಕಾಯುಕ್ತರಾಗಿ ನೇಮಕವಾಗಿದ್ದ ಜಸ್ಟೀಸ್ ಭಾಸ್ಕರ್ ರಾವ್ ಅವರ ಮೇಲೆಯೇ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂತು. ಅಲ್ಲಿಯವರೆಗೆ ದಕ್ಷತೆ ಮತ್ತು ಪಾರದರ್ಶಕತೆಗೆ ಹೆಸರಾಗಿದ್ದ ಕರ್ನಾಟಕ ಲೋಕಾಯುಕ್ತ ಸಂಸ್ಥೆ ತನ್ನ ನಂಬಿಕೆ ಮತ್ತು ವಿಶ್ವಾಸಾರ್ಹತೆಗಳನ್ನು ಕಳೆದುಕೊಳ್ಳತೊಡಗಿತ್ತು. ಇದರ ಬೆನ್ನಲ್ಲೇ 2016ರಲ್ಲಿ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಗೆ ಬದಲಾಗಿ ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿ, ಲೋಕಾಯುಕ್ತ ಸಂಸ್ಥೆಗಿದ್ದ ಬಹುತೇಕ ಅಧಿಕಾರವನ್ನು ಎಸಿಬಿಗೆ ವರ್ಗಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಎಸಿಬಿ ರಚನೆ ಆದೇಶ ರದ್ದು | ಇದೊಂದು ಐತಿಹಾಸಿಕ ತೀರ್ಪು: ಹೋರಾಟಗಾರ ಎಸ್ ಆರ್ ಹಿರೇಮಠ್ ಸಂತಸ

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 

ಕರ್ನಾಟಕ ಲೋಕಾಯುಕ್ತ ಸಂಸ್ಥೆ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಆದರೆ, ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಿತಿಗಳಿವೆ. ಲೋಕಾಯುಕ್ತದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುತ್ತಿತ್ತು.

ಆದರೆ, ಎಸಿಬಿ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿಯನ್ನು (ಎಡಿಜಿಪಿ) ನೇಮಕ ಮಾಡಲಾಗುತ್ತದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಕ್ರಮಕೈಗೊಳ್ಳುವ ಮುನ್ನ ಇವರು ಸರ್ಕಾರದ (ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ) ಅನುಮತಿ ಪಡೆಯಲೇಬೇಕಿದೆ. 

ಲೋಕಾಯುಕ್ತ ದುರ್ಬಲವಾಗಿ, ರಾಜ್ಯದಲ್ಲಿ ಎಸಿಬಿ ರಚನೆಯಾದ ನಂತರ ಹಲವು ಸರ್ಕಾರಿ ನೌಕರರ ಮೇಲೆ ದಾಳಿಗಳಾಗಿವೆ. ಆದರೆ, ಶಿಕ್ಷೆಯಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಇದೆಲ್ಲದರ ನಡುವೆ ಎಸಿಬಿ ಸಂಸ್ಥೆಯ ಮೇಲೆಯೇ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದೆ. ಎಸಿಬಿ ಅಧಿಕಾರಿಗಳೇ ಭ್ರಷ್ಟಾಚಾರದ ಪಾಲುದಾರರಾಗಿ, ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.

ಭ್ರಷ್ಟಾಚಾರ ನಿಗ್ರಹ ದಳವನ್ನು (ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016 ದಿನಾಂಕ 14.03.2016) ರಚನೆ ಮಾಡಲಾಗಿದೆ. ಈ ದಳವು ನೇರವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸಿಆಸುಇ-ಡಿ.ಪಿ.ಎ.ಆರ್)ಯ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯವರು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿಯವರಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕರಿಸಲು ಐಜಿಪಿ ಹುದ್ದೆಯ ಅಧಿಕಾರಿ ಇರುತ್ತಾರೆ.

ಕೇಂದ್ರ ಸ್ಥಾನದಲ್ಲಿ ಇಬ್ಬರು ಎಸ್.ಪಿ ದರ್ಜೆಯ ಅಧಿಕಾರಿಗಳಿದ್ದು ಕ್ರಮವಾಗಿ ಎಸ್.ಪಿ-ಕೇಂದ್ರ ಸ್ಥಾನ ಹಾಗೂ ಎಸ್.ಪಿ-ಆಡಳಿತ ಎಂಬ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ 7 ವಲಯಗಳಾಗಿ ವಿಭಾಗಿಸಲಾಗಿದೆ.

ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಸಂದರ್ಭದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಪ್ರಕರಣ ದಾಖಲಿಸಲು ಸಾಕಷ್ಟು ಸಾಕ್ಷಿಗಳಿವೆ ಎಂದು ಕಂಡುಬಂದಲ್ಲಿ ಎಫ್.ಐ.ಆರ್ ದಾಖಲಿಸಿ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿ, ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆಗಳ ಆಧಾರದ ಮೇಲೆ ಆರೋಪ ಪಟ್ಟಿಯನ್ನು ದಾಖಲಿಸಲಾಗುತ್ತದೆ. ಇಲ್ಲವೇ ಸಂಬಂಧಿಸಿದ ಇಲಾಖೆಗಳಿಗೆ ಆರೋಪಿತ ಅಧಿಕಾರಿಯ ಬಗ್ಗೆ ಇಲಾಖಾ ವಿಚಾರಣೆ ಮಾಡಲು ನಿರ್ದೇಶಿಸಲಾಗುತ್ತದೆ.

ನ್ಯಾಯಾಲಯದಲ್ಲಿ ಸಾರ್ವಜನಿಕ ನೌಕರನು ದೋಷಿ ಎಂದು ಸಾಬೀತಾದಲ್ಲಿ ಅಂತಹ ನೌಕರನನ್ನು ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ. ಇಲಾಖಾ ವಿಚಾರಣೆಯಲ್ಲಿ ನೌಕರನ ವಿರುದ್ಧ ದೊಡ್ಡ ಶಿಕ್ಷೆ ಅಥವಾ ಅಲ್ಪ ಶಿಕ್ಷೆಯನ್ನು ಪ್ರಕರಣದ ಆಳ ಮತ್ತು ವಿಸ್ತಾರಗಳನ್ನು ಆಧರಿಸಿ ನೀಡಲಾಗುತ್ತದೆ. ದೊಡ್ಡ ಶಿಕ್ಷೆಯಲ್ಲಿ ವಜಾ, ಪದೋನ್ನತಿಯಲ್ಲಿ ಹಿಂಬಡ್ತಿ, ಪದೋನ್ನತಿಯನ್ನು ತಡೆ ಹಿಡಿಯುವಿಕೆ, ವೇತನ ಹೆಚ್ಚಳಗಳನ್ನು ತಡೆಯುವುದು, ವಾಗ್ದಂಡನೆ, ಎಚ್ಚರಿಕೆ ಇತ್ಯಾದಿಗಳನ್ನು ನೀಡುವ ಕ್ರಮವಿರುತ್ತದೆ. ಸ್ವಾಯುತ್ತ ಸಂಸ್ಥೆಯಲ್ಲದ ಕಾರಣಕ್ಕೆ ಎಸಿಬಿ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. 

ಭ್ರಷ್ಟರ ವಿರುದ್ಧ ಕ್ರಮಕ್ಕೆ ಎಸಿಬಿಗೆ ಕಾನೂನು ಮಾನ್ಯತೆ ಇದೆಯಾ?

ಸರ್ಕಾರದ ಆದೇಶದ ಮೇರೆಗೆ ರಚನೆಯಾದ ಎಸಿಬಿಗೆ ಶಾಸನಾತ್ಮಕ ಮಾನ್ಯತೆಯಿಲ್ಲ. ಹಾಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಪ್ರಕಾರ ಪ್ರಕರಣ ದಾಖಲಿಸುವ ಅಧಿಕಾರ ಎಸಿಬಿಗೆ ಇಲ್ಲ. ಆದ್ದರಿಂದ ರಾಜ್ಯ ಹೈಕೋರ್ಟ್‌ನಲ್ಲಿ ಎಸಿಬಿ ದಾಖಲಿಸಿರುವ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. 

ಆದರೆ, ಲೋಕಾಯುಕ್ತ ಸ್ವಾಯುತ್ತ ಸಂಸ್ಥೆಯಾಗಿರುವುದರಿಂದ ಪ್ರತ್ಯೇಕ ವಿಚಾರಣಾ ನ್ಯಾಯಾಲಯವನ್ನು ಹೊಂದಿದೆ. ಆರೋಪ ಸಾಬೀತಾದಲ್ಲಿ ಸರ್ಕಾರದ ಅನುಮತಿವರೆಗೂ ಕಾಯದೆ ಶಿಕ್ಷೆ ಪ್ರಮಾಣ ಪ್ರಕಟಿಸಬಹುದು. ಕಾರ್ಯಾಂಗ ಮತ್ತು ಶಾಸಕಾಂಗದದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಬಂಧಿಸುವ ಸ್ವಾತಂತ್ರ್ಯ ಈ ಸಂಸ್ಥೆಗಿದೆ. ಶಾಸಕರು, ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳನ್ನು ಬಂಧಿಸುವ ಸಂದರ್ಭದಲ್ಲಿ ವಿಧಾನಸಭೆ ಸ್ಪೀಕರ್ ಗಮನಕ್ಕೆ ಮಾತ್ರ ತರಬೇಕಾಗುತ್ತದೆ. 

ಎಸಿಬಿ ಕಾರ್ಯವೈಖರಿ ವಿರುದ್ಧ ಹೈಕೋರ್ಟ್ ನ್ಯಾಯಾಧೀಶ ಸಂದೇಶ್ ಕಿಡಿ!

"ಎಸಿಬಿಯನ್ನು ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸ್ಥಾಪಿಸಲಾಗಿದೆಯೇ ಅಥವಾ ಭ್ರಷ್ಟಾಚಾರ ಎಸಗುವವರ ರಕ್ಷಣೆ ಮಾಡಲೆಂದು ಸ್ಥಾಪಿಸಲಾಗಿದೆಯೇ? ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ" ಎಂದು ಕರ್ನಾಟಕ ಹೈಕೋರ್ಟ್‌ ನ್ಯಾ. ಎಚ್‌ ಪಿ ಸಂದೇಶ್‌ ಎಸಿಬಿ ವಿರುದ್ಧ ಹರಿಹಾಯ್ದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ನ್ಯಾಯಮೂರ್ತಿ ಸಂದೇಶ್, “ಎಸಿಬಿ ರಚಿಸಿರುವ ಉದ್ದೇಶವೇನು? ಭ್ರಷ್ಟಾಚಾರ ನಿಯಂತ್ರಣ ಮಾಡಲೋ? ಅಥವಾ ಭ್ರಷ್ಟಾಚಾರ ಎಸಗುವವರಿಗೆ ಬೆಂಬಲ ನೀಡಲೋ? ನಿಮಗೆ (ಎಸಿಬಿ) ನಾಚಿಕೆಯಾಗಬೇಕು” ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. 

ಈ ಸುದ್ದಿ ಓದಿದ್ದೀರಾ?: ಎಸಿಬಿ ರದ್ದು ಆದೇಶ | ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಛ ಮಾಡಿ; ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ಸಾರ್ವಜನಿಕ ವಲಯದಿಂದಲೂ ಎಸಿಬಿ ಬಗ್ಗೆ ಅಪಸ್ವರ

ಎಸಿಬಿ ರದ್ದಾಗಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವರಲ್ಲಿ ಒಬ್ಬರಾಗಿರುವ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಮತ್ತು ಇನ್ನೂ ಹಲವು ಜನಪರ ಸಂಘಟನೆಗಳು ಎಸಿಬಿ ಬಗ್ಗೆ ಅಪಸ್ವರ ಎತ್ತಿದ್ದವು. ಬಹುತೇಕ ಸಂದರ್ಭಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ನೆರವಾಗುತ್ತಿದೆ ಎಂದು ಆರೋಪ ಮಾಡಿದ್ದರು.

ಇತ್ತೀಚೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದರೂ ಎಸಿಬಿ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕೆ ಜನ ಸಿಟ್ಟಾಗಿದ್ದರು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ, ಎಸಿಬಿಯನ್ನು ರದ್ದುಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ರಾಜ್ಯ ಹೈಕೋರ್ಟ್ ಎಸಿಬಿಯನ್ನು ರದ್ದು ಮಾಡಿರುವ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ. ಲೋಕಾಯುಕ್ತ ಮೊದಲಿನಂತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಒತ್ತಾಯಿಸಿದ್ದಾರೆ.

ಎಸಿಬಿ ರಚನೆ ಆದೇಶ ರದ್ದು; ಹೈಕೋರ್ಟ್ ಹೇಳಿದ್ದೇನು?

2016ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಎಸಿಬಿ ರಚನೆ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ನೀಡಿದೆ. ನ್ಯಾ. ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ನೀಡಿದ್ದು, ಲೋಕಾಯುಕ್ತ ಬಲವರ್ಧನೆಗೆ ಸೂಚಿಸಿದೆ. ಎಸಿಬಿಯಲ್ಲಿ ಬಾಕಿ ಇರುವ ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ನೀಡಲು ವಿಭಾಗೀಯ ಪೀಠ ಆದೇಶ ಮಾಡಿದೆ.

ಎಸಿಬಿ ಈವರೆಗೂ ನಡೆಸಿರುವ ತನಿಖೆ, ವಿಚಾರಣೆ ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿದೆ. ಎಲ್ಲ ಲೋಕಾಯುಕ್ತ ಪೊಲೀಸ್ ಠಾಣೆಗಳು ಪುನರ್ ಸ್ಥಾಪನೆಯಾಗಲಿದ್ದು, ಎಸಿಬಿಯಲ್ಲಿರುವ ಪೊಲೀಸರು ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ ಎಂದು ತನ್ನ ಆದೇಶದಲ್ಲಿ ಹೇಳಿದೆ.

ಎಸಿಬಿ ರದ್ದು ಆದೇಶದ ಪ್ರಮುಖ ಅಂಶಗಳು

ಎಸಿಬಿ ರದ್ದು ಆದೇಶದಲ್ಲಿ ಹಲವು ಪ್ರಮುಖ ಅಂಶಗಳನ್ನು ಹೈಕೋರ್ಟ್ ಪ್ರಸ್ತಾಪ ಮಾಡಿದೆ. ಪ್ರಮುಖವಾಗಿ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದೆ. ಅಂದರೆ, ಈ ಹಿಂದೆ ಲೋಕಾಯುಕ್ತರ ಹುದ್ದೆಗೆ ನೇಮಕ ಮಾಡಲು ಇದ್ದ ಅರ್ಹತೆಗಳನ್ನೇ ಮುಂದುವರಿಸುವಂತೆ ಸೂಚಿಸಿದೆ. 

ಹಿಂದೆ ಇದ್ದ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪನೆಗೆ ಆದೇಶ ನೀಡಿದೆ.

ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ರದ್ದು ಮಾಡಿರುವುದರಿಂದ ಭ್ರಷ್ಟಾಚಾರ ಆರೋಪ ಹೊತ್ತವರು ನಿರಾಳರಾಗುವಂತಿಲ್ಲ. ಏಕೆಂದರೆ, ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸುತ್ತಾರೆ. ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು. ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್