ಚುನಾವಣೆ ನಂತರ ನಾನೇ ಮತ್ತೆ ಕನ್ನಡಿಗರ ಮುಖ್ಯಮಂತ್ರಿ : ಎಚ್.ಡಿ.ಕುಮಾರಸ್ವಾಮಿ ಅಚಲ ವಿಶ್ವಾಸ

  • ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ : ಎಚ್‌ಡಿಕೆ 
  • ನಗರದ ಗಲ್ಲಿಗಲ್ಲಿಗಳಲ್ಲೂ “ಗಲ್ಲಿ ಕ್ಲಿನಿಕ್‌"; ಜೆಡಿಎಸ್ 'ಜನತಾ ಮಿತ್ರ' ಕಾರ್ಯಕ್ರಮದಲ್ಲಿ ಘೋಷಣೆ

2023ರ ಚುನಾವಣೆಯಲ್ಲಿ ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರದ್ದೇ ಆದ ಸರ್ಕಾರ ಬರಬೇಕಿದೆ. ಈ ಸಲುವಾಗಿಯಾದರೂ ಕನ್ನಡಿಗರು ಪ್ರಾದೇಶಿಕ ಪಕ್ಷ ಬೆಂಬಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 'ಜನತಾ ಮಿತ್ರ' ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಈ ಬಾರಿ ಒಮ್ಮೆ ಅಧಿಕಾರ ಕೊಡಿ. ಪ್ರಾಮಾಣಿಕ ಆಡಳಿತ ಕೊಡುತ್ತೇನೆ. ನಿಮ್ಮ ನಿರೀಕ್ಷೆಗಳನ್ನು ಈಡೇರಿಸಿ ಬಲಿಷ್ಠ, ಸ್ವಚ್ಛ, ಸುಂದರ ಬೆಂಗಳೂರು ನಗರವನ್ನು ನಿರ್ಮಿಸುತ್ತೇನೆ" ಎಂದು ಕುಮಾರಸ್ವಾಮಿ ವಾಗ್ದಾನ ಮಾಡಿದರು.

ಈ ಸುದ್ದಿ ಓದಿದ್ದೀರಾ? : 2023ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌ಗಿಂತ ನಾವೇ ಹೆಚ್ಚಿನ ಸೀಟು ಗೆಲ್ಲುತ್ತೇವೆ : ಎಚ್‌ಡಿಕೆ ವಿಶ್ವಾಸ

"ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ಹತ್ತಿರ ಬಂದಾಗ ನಿದ್ದೆಯಿಂದ ಎದ್ದು ಕೂತಿವೆ. ಈ ಎರಡೂ ಪಕ್ಷಗಳು ವಿಧಾನಸೌಧ ಮತ್ತು ಬಿಬಿಎಂಪಿಯಲ್ಲಿ ಆಡಳಿತ ನಡೆಸಿವೆ. ಬಿಜೆಪಿಯಂತೂ ಹಿಂದುತ್ವ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದೆ. ನಾವೂ ಹಿಂದೂಗಳೇ. ಹಿಂದುತ್ವವನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ" ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

"ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಹೀಗಾಗಿ ಸರ್ಕಾರಿ ಶಾಳೆಗಳಿಗೆ ಮಕ್ಕಳನ್ನು ಪೋಷಕರು ಕಳಿಸುತ್ತಿಲ್ಲ, ಮತ್ತೊಂದು ಕಡೆ ಪಾಠ ಮಾಡಲು ಶಿಕ್ಷಕರೂ ಇಲ್ಲ. ಬಡವರಿಗೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವ ಶಕ್ತಿ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದರ ಜೊತೆಗೆ ಎಲ್‌ಕೆಜಿಯಿಂದ ಪಿಯುಸಿಯವರೆಗೂ ಉಚಿತ ಶಿಕ್ಷಣ ಕೊಡಲಾಗುವುದು" ಎಂದು ಕುಮಾರಸ್ವಾಮಿ ಹೇಳಿದರು. 

"ಹಾಗೆಯೇ ನಗರದಲ್ಲಿ ಬಡವರು, ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಗಗನ ಕುಸುಮವಾಗಿದೆ. ಇದಕ್ಕೆ ಪರಿಹಾರವಾಗಿ ಪ್ರತಿ ವಾರ್ಡ್‌ನಲ್ಲಿಯೂ ಗಲ್ಲಿ ಕ್ಲಿನಿಕ್ ತೆರೆಯಲಾಗುವುದು" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೇ ವೇಳೆ ಭರವಸೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್