ಮುಖ್ಯಮಂತ್ರಿಗಳೇ, ನೀವೇ ರಾಜೀನಾಮೆ ಕೊಡುವಿರೋ ಅಥವಾ ಗೃಹ ಸಚಿವರನ್ನು ಕೈಬಿಡುವಿರೋ?: ಕಾಂಗ್ರೆಸ್‌ ಪ್ರಶ್ನೆ

  • ಪಿಎಸ್ಐ ನೇಮಕಾತಿ ಹಗರಣ ಬಗ್ಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್
  • ‘ಪ್ರಾಮಾಣಿಕ ತನಿಖೆ ನಡೆದರೆ ಅರ್ಧ ಕ್ಯಾಬಿನೆಟ್ ಜೈಲಿನಲ್ಲಿರಬೇಕಾಗುತ್ತದೆ’

“ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿಯೇ ಬಂಧನವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನೀವೇ ರಾಜೀನಾಮೆ ಕೊಡುವಿರಾ? ಅಥವಾ ಗೃಹಸಚಿವರ ರಾಜೀನಾಮೆ ಪಡೆಯುವಿರಾ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ “ಪಿಎಸ್ಐ ನೇಮಕಾತಿ ಹಗರಣದ ಕಬಂಧ ಬಾಹುಗಳು ಸರ್ಕಾರದ ಪ್ರತಿ ಮೂಲೆಗೂ ಹಬ್ಬಿದೆ. ಎಡಿಜಿಪಿಯೇ ಬಂಧನವಾಗಿರುವ ಹಗರಣ ಪ್ರಶ್ನಿಸಿದಾಗ "ಹಗರಣವೇ ನಡೆದಿಲ್ಲ" ಎಂದು ಸುಳ್ಳು ಹೇಳಿ ಮುಚ್ಚಿಹಾಕಲು ಯತ್ನಿಸಿದ ಗೃಹ ಸಚಿವರು ಯಾವುದೇ ಕಾರಣಕ್ಕೂ ಹುದ್ದೆಯಲ್ಲಿ ಮುಂದುವರಿಯಬಾರದು" ಎಂದು ಆಗ್ರಹಿಸಿದೆ.

Eedina App

“ಪಿಎಸ್ಐಗಳ ನೇಮಕಾತಿ ವಿಷಯದಲ್ಲಿ, ಪೊಲೀಸರೇ ಪೊಲೀಸರಿಂದ ಅರೆಸ್ಟ್ ಆಗುತ್ತಿರುವುದು ಬಿಜೆಪಿ ಆಡಳಿತದ ಚೋದ್ಯ! ಬಿಜೆಪಿಯ ಭ್ರಷ್ಟಾಚಾರದ ಹಪಹಪಿಯಿಂದಾಗಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಡಿಜಿಪಿಯೊಬ್ಬರು ಬಂಧನಕ್ಕೊಳಗಾಗಿದ್ದಾರೆ. ಪಿಎಸ್ಐ ಹಗರಣ ಬೃಹದಾಕಾರವಾಗಿದೆ. ಪ್ರಾಮಾಣಿಕ ತನಿಖೆ ನಡೆದರೆ ಅರ್ಧ ಕ್ಯಾಬಿನೆಟ್ ಸಚಿವರು ಜೈಲಿನಲ್ಲಿರಬೇಕಾಗುತ್ತದೆ” ಎಂದು ಟೀಕಿಸಿದೆ.

AV Eye Hospital ad

“ಪಿಎಸ್ಐ ಹಗರಣದಲ್ಲಿ ಭ್ರಷ್ಟಾಚಾರದ ಮತ್ತಷ್ಟು ಪದರಗಳು ಬೆಳಕಿಗೆ ಬರುತ್ತಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇವಲ ಎರಡು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ; ಬಿಜೆಪಿಯ ರಾಜಕೀಯ ಗುರುಗಳ ಸಹಕಾರವಿಲ್ಲದೆ ಪಿಎಸ್ಐ ಹಗರಣ ನಡೆಯಬಹುದೇ? ಹಗರಣ ನಡೆಯುವ ಸಮಯದಲ್ಲಿ ಗೃಹ ಮಂತ್ರಿಯಾಗಿದ್ದವರು ಯಾರು?” ಎಂದು ಪ್ರಶ್ನಿಸಿದೆ.

“ಪಿಎಸ್ಐ ಹಗರಣದ ಹೊಣೆಗಾರಿಕೆ ಆಗಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರದ್ದೇ. ಹೆಚ್ಚು, ಕಡಿಮೆ ಏನೂ ಇಲ್ಲ. ಎಡಿಜಿಪಿ ಬಂಧನ ಸಾಕಾಗುವುದಿಲ್ಲ. ಸಿಎಂ ಬೊಮ್ಮಾಯಿಯವರು ರಾಜೀನಾಮೆ ಕೊಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು! ಯುವಕರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ!” ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಈ ಸುದ್ದಿ ಓದಿದ್ದೀರಾ? ಪಿಎಸ್‌ಐ ಹಗರಣ | ಸಿಐಡಿಯಿಂದ ಎಡಿಜಿಪಿ ಅಮೃತ್‌ ಪೌಲ್‌ ಬಂಧನ

“ಭ್ರಷ್ಟಾಚಾರ ಆರೋಪಗಳಿಗೆ ಭಂಡತನವನ್ನೇ ಗುರಾಣಿ ಮಾಡಿಕೊಂಡಿದೆ ಬಿಜೆಪಿ. ಪಿಎಸ್ಐ ಹಗರಣಕ್ಕೆ ಮಲ್ಲೇಶ್ವರದ ಬಿಜೆಪಿ ಕಚೇರಿಯೇ 'ಕಂಟ್ರೋಲ್ ರೂಮ್' ಆಗಿದೆ. ಈ ಹಗರಣದ ಸಂಪೂರ್ಣ ಸತ್ಯ ಬಯಲಾಗಬೇಕೆಂದರೆ ಸಚಿವ ಅಶ್ವತ್ಥ ನಾರಾಯಣ ಮತ್ತು ಆರಗ ಜ್ಞಾನೇಂದ್ರ ಅವರನ್ನು ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳೇ, ನಿಮ್ಮಿಂದ ಈ ಕೆಲಸ ಸಾಧ್ಯವೇ?” ಎಂದು ಕಾಂಗ್ರೆಸ್ ಕುಟುಕಿದೆ.

“ʼಪಿಎಸ್ಐ ಹಗರಣ ಕಾಂಗ್ರೆಸ್ಸಿನ ಸುಳ್ಳು ಆರೋಪ, ಕಾಂಗ್ರೆಸ್ ಟೂಲ್ ಕಿಟ್ʼ ಎನ್ನುತ್ತಾ ಅಕ್ರಮ ನಡೆಸಿದವರಿಗೆ ಬೆಂಬಲಿಸುತ್ತಿದ್ದ ಬಿಜೆಪಿಯ ಐಟಿ ಸೆಲ್ ಈಗ ಏನು ಹೇಳುತ್ತದೆ? ಎಡಿಜಿಪಿ ಬಂಧನ ಯಾವ ಟೂಲ್ ಕಿಟ್? ಬಿಜೆಪಿ ಸರ್ಕಾರದ ಮಂತ್ರಿಗಳ ತಲೆ ಉಳಿಸುವ ಟೂಲ್ ಕಿಟ್ ಆಗಿದೆಯೇ? ರಾಜ್ಯ ಬಿಜೆಪಿ ಸರ್ಕಾರ ಉತ್ತರಿಸಲಿ. ಅಕ್ರಮವೇ ನಡೆದಿಲ್ಲ ಎಂದಾದರೆ ಈ ಬಂಧನ ಏಕೆ?” ಎಂದು ಪ್ರಶ್ನಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app