ರಾಜ್ಯ ಪ್ರವಾಸ ಮೂಲಕ ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ಸಿನತ್ತ ಎಳೆದು ತರುವರೇ ಎಂ ಬಿ ಪಾಟೀಲ್‌?

ಸಿದ್ದರಾಮೋತ್ಸವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿ ಏನೆಂಬುದು ಕಾಂಗ್ರೆಸ್ಸಿಗೆ ಮತ್ತೊಮ್ಮೆ ಮನವರಿಕೆಯಾಗಿದೆ. ಡಿ ಕೆ ಶಿವಕುಮಾರ್‌ ಕೂಡ ʼಸ್ವಾತಂತ್ರ್ಯ ನಡಿಗೆʼ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇತ್ತ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ ಬಿ ಪಾಟೀಲ್‌ ಅವರು ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿದ್ದ ಲಿಂಗಾಯತರನ್ನು ಎಂ ಬಿ ಪಾಟೀಲ್ ಮತ್ತೆ ಕಾಂಗ್ರೆಸ್‌ನತ್ತ ಎಳೆದುತರುವರೇ ಎನ್ನುವ ಕುತೂಹಲ ಮೂಡಿದೆ.
M B Patil

ʼಸಿದ್ದರಾಮೋತ್ಸವʼ ಮತ್ತು ʼಸ್ವಾತಂತ್ರ್ಯ ನಡಿಗೆʼ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನಿಂದ ಜೀವಕಳೆ ಪಡೆದುಕೊಂಡಿರುವ ಕಾಂಗ್ರೆಸ್‌ ಪಕ್ಷವು ಚುನಾವಣಾ ಪ್ರಚಾರಕ್ಕೆ ಆಗಸ್ಟ್‌ 19ರಿಂದ ಅಧಿಕೃತವಾಗಿ ಧುಮುಕುತ್ತಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಹೊಂದಿದ 142 ದಿನಗಳ ನಂತರ ಎಂ ಬಿ ಪಾಟೀಲ್‌ ಅವರು ಪ್ರಥಮ ಹಂತದ ರಾಜ್ಯ ಚುನಾವಣೆ ಪ್ರವಾಸಕ್ಕೆ ಮುಂದಾಗಿದ್ದಾರೆ.

ಆಗಸ್ಟ್‌ 19ರಿಂದ ಸೆಪ್ಟೆಂಬರ್‌ 8ರವರೆಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಈ ಪ್ರವಾಸ ಹಮ್ಮಿಕೊಂಡಿರುವುದಾಗಿ ಎಂ ಬಿ ಪಾಟೀಲ್ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ 19ರಂದು ಕಲಬುರ್ಗಿಯಿಂದ ಎಂ ಬಿ ಪಾಟೀಲ್‌ ಅವರ ರಾಜ್ಯ ಪ್ರವಾಸ ಆರಂಭವಾಗುತ್ತಿದ್ದು, 20ರಂದು ಹುಬ್ಬಳ್ಳಿ ಮತ್ತು ಧಾರವಾಡ, 23ರಂದು ಚಿತ್ರದುರ್ಗ, 24ರಂದು ಶಿವಮೊಗ್ಗ, 26ರಂದು ಮೈಸೂರು, 27ರಂದು ಚಾಮರಾಜನಗರ, ಸೆ.1ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6 ಬಳ್ಳಾರಿ, ವಿಜಯನಗರ, 7ರಂದು ರಾಯಚೂರು ಹಾಗೂ 8ರಂದು ಯಾದಗಿರಿ ಮೂಲಕ ಸಾಗಿ ಕೊನೆಗೆ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೊನೆಗೊಳ್ಳಲಿದೆ.

ಗಮನಾರ್ಹ ಸಂಗತಿ ಎಂದರೆ “ಪ್ರಚಾರ ಸಮಿತಿ ಅಧ್ಯಕ್ಷನಾಗಿ ನನ್ನ ನೇತೃತ್ವದಲ್ಲೇ ಮೊದಲ ಹಂತದ ರಾಜ್ಯ ಚುನಾವಣಾ ಪ್ರವಾಸ ನಡೆಯುತ್ತದೆ. ನಾನು ಹೋದ ಕಡೆಗೆಲ್ಲ ಅಲ್ಲಿಯ ಸ್ಥಳೀಯ ನಾಯಕರು ಜೊತೆಗೂಡಲಿದ್ದಾರೆ” ಎಂದು ಎಂ ಬಿ ಪಾಟೀಲ್ ಹೇಳಿರುವುದು.   

ತಾವೂ ಕೂಡ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಆಗಾಗ ನೆನಪಿಸುವ ಎಂ ಬಿ ಪಾಟೀಲ್‌ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿರುವವರು. ಈ ಕಾರಣದಿಂದಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗುಟ್ಟಾದ ಸಂಗತಿಯಲ್ಲ.

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ನಂತರದ ಶಕ್ತಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕಾಣುತ್ತಿದ್ದರೆ, ಎಂ ಬಿ ಪಾಟೀಲ್‌ ಕೂಡ ಅದೇ ಸ್ಪರ್ಧೆಯಲ್ಲಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ಸಿನಲ್ಲಿ ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರಾಗಿ ಎಂ ಬಿ ಪಾಟೀಲ್‌ ಗುರುತಿಸಿಕೊಂಡಿರುವುದು. 

ಎಂ ಬಿ ಪಾಟೀಲ್‌ ಮುಂದಾಳತ್ವದ ಹಿಂದಿನ ತರ್ಕ

ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ನಂತರದ ಜನನಾಯಕರಾಗಿ (ಮಾಸ್‌ ಲೀಡರ್‌) ಗುರುತಿಸಿಕೊಂಡವರು. ಅದರಲ್ಲೂ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಯಡಿಯೂರಪ್ಪ ಅವರನ್ನು ಪ್ರತಿ ಹಂತದಲ್ಲೂ ತೆರೆಗೆ ಸರಿಸುವ ಪ್ರಯತ್ನಗಳು ಬಿಜೆಪಿಯೊಳಗೆ ಬಹಿರಂಗವಾಗಿಯೇ ನಡೆಯುತ್ತಿವೆ.   

ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಲಿಂಗಾಯತರ ನಾಯಕನನ್ನಾಗಿ ಬೆಳೆಸಲು ಒಳಗೊಳಗೇ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಯಡಿಯೂರಪ್ಪ ಅವರಿಗೆ ಸಿಕ್ಕ ಜನಮನ್ನಣೆ ವಿಜಯೇಂದ್ರ ಅವರಿಗೂ ಸಿಗುತ್ತಾ ಎನ್ನುವುದು ಕಾಲಕ್ಕೆ ಬಿಟ್ಟ ಪ್ರಶ್ನೆಯಾಗಿದೆ. ಲಿಂಗಾಯತ ಜಾತಿ ರಾಜಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರು ಎಂ ಬಿ ಪಾಟೀಲ್‌ ಅವರನ್ನು ಕೆಪಿಸಿಸಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುನ್ನೆಲೆಗೆ ತಂದಿರುವುದು.

ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಅವರನ್ನು ಮತ್ತೆ ರಾಜ್ಯ ರಾಜಕಾರಣದ ಕೇಂದ್ರಕ್ಕೆ ತಂದು ನಿಲ್ಲಿಸಿದ ಜನಾಭಿಮಾನ!

ಆ ಮೂಲಕ ರಾಜ್ಯದಲ್ಲಿ ಯಡಿಯೂರಪ್ಪ ನಂತರದ ಲಿಂಗಾಯತ ಸಮುದಾಯದ ನಾಯಕರನ್ನಾಗಿ ಎಂ ಬಿ ಪಾಟೀಲ್‌ ಅವರನ್ನು ಮತ್ತಷ್ಟು ಮುಂಚೂಣಿಗೆ ತರಬೇಕು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲೂ ಕೂಡ ಸಿದ್ದರಾಮಯ್ಯ ಅವರು ಎಂ ಬಿ ಪಾಟೀಲ್‌ ಅವರ ಹೆಸರನ್ನು ಮುನ್ನೆಲೆಗೆ ತಂದಿದ್ದರು. ಆದರೆ, ಕಾಂಗ್ರೆಸ್ಸಿನ ಹೈಕಮಾಂಡ್ ಒಕ್ಕಲಿಗ ಸಮುದಾಯದ ನಾಯಕನಾಗಿ ಹೊರಹೊಮ್ಮಿರುವ ಡಿ ಕೆ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಪಟ್ಟ ನೀಡಿತು. 

ಅಲ್ಲಿಗೆ ಸುಮ್ಮನಾಗದ ಸಿದ್ದರಾಮಯ್ಯ ಅವರು ಕೊನೆಗೂ ಎಂ ಬಿ ಪಾಟೀಲ್‌ ಅವರನ್ನು ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆಯಾಗುವಲ್ಲಿ ಪಟ್ಟು ಹಿಡಿದು ಕಳೆದ ಮಾರ್ಚ್‌ 28ಕ್ಕೆ ತಮ್ಮ ಹಠವನ್ನು ಸಾಧಿಸಿಯೇ ಬಿಟ್ಟರು.  ಅಲ್ಲಿಗೆ ಕಾಂಗ್ರೆಸ್ಸಿನ ರಥವನ್ನು ಮುಖ್ಯವಾಗಿ ಎಳೆಯುವ ನಾಯಕರಾಗಿ ಕುರುಬ ಮತ್ತು ಹಿಂದುಳಿದ ಸಮುದಾಯದ ನಾಯಕರಾಗಿ ಸಿದ್ದರಾಮಯ್ಯ, ಒಕ್ಕಲಿಗ ಸಮುದಾಯದಿಂದ ಡಿ ಕೆ ಶಿವಕುಮಾರ್‌ ಹಾಗೂ ಲಿಂಗಾಯತ ಸಮುದಾಯದಿಂದ ಎಂ ಬಿ ಪಾಟೀಲ್‌ ಕಾಣುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ತೆವಳುತ್ತಿದ್ದ ಕಾಂಗ್ರೆಸ್ಸಿಗೆ ʼಬೂಸ್ಟರ್ ಡೋಸ್ʼ ಕೊಟ್ಟ ʼಸಿದ್ದರಾಮೋತ್ಸವʼ: ಅಸಲಿ ಆಟ ಈಗ ಶುರು!

ಎಂ ಬಿ ಪಾಟೀಲ್‌ ಶಕ್ತಿ ಪ್ರದರ್ಶನವೇ?

ಈಗಾಗಲೇ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮೂಲಕ ಸಿದ್ದರಾಮಯ್ಯ ಅವರ ಶಕ್ತಿ ಏನೆಂಬುದು ಕಾಂಗ್ರೆಸ್ಸಿಗೆ ಮತ್ತೊಮ್ಮೆ ಮನವರಿಕೆಯಾಗಿದೆ. ಇತ್ತ ಡಿ ಕೆ ಶಿವಕುಮಾರ್‌ ಕೂಡ ʼಸ್ವಾತಂತ್ರ್ಯ ನಡಿಗೆʼ ಮೂಲಕ ಆಗಸ್ಟ್‌ 15ರಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಗ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ ಬಿ ಪಾಟೀಲ್‌ ಅವರು ತಮ್ಮ ಶಕ್ತಿ ಪ್ರದರ್ಶನವನ್ನು ರಾಜ್ಯ ಪ್ರವಾಸದ ಮೂಲಕ ಮಾಡಲಿದ್ದಾರೆಯೇ ಎಂಬುದು ರಾಜಕೀಯ ವಿಶ್ಲೇಷಣೆಗೊಳಪಡುತ್ತಿರುವ ಸಂಗತಿ.

ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಮುನ್ನೆಲೆಗೆ ತಂದಿದ್ದವರು ಇದೇ ಎಂ ಬಿ ಪಾಟೀಲ್. ಆದರೆ, ಅದು ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೆಟ್ಟು ನೀಡಿತ್ತು ಎನ್ನುವ ವಿಶ್ಲೇಷಣೆಗಳು ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಕೇಳಿಬಂದಿದ್ದವು. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ಎಂ ಬಿ ಪಾಟೀಲ್ ಈಗ ರಾಜ್ಯ ಪ್ರವಾಸದ ಮೂಲಕ ಮತ್ತೆ ಕಾಂಗ್ರೆಸ್‌ನತ್ತ ಎಳೆದು ತರುವರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. 

ಕನ್ಯಾಕುಮಾರಿಯಿಂದ ಸೆಪ್ಟೆಂಬರ್‌ 7ರಂದು ಭಾರತ್ ಜೋಡೋ ಕಾರ್ಯಕ್ರಮ ಆರಂಭವಾಗಲಿದ್ದು, ಕಾಶ್ಮೀರದವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 3500 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಸೆ.27ರ ನಂತರ ರಾಜ್ಯದಲ್ಲಿ 21 ದಿನಗಳ ಕಾಲ ರಾಹುಲ್ ಗಾಂಧಿ ಅವರು ಪ್ರವಾಸ ಮಾಡಲಿದ್ದಾರೆ. ರಾಹುಲ್‌ ಕಾರ್ಯಕ್ರಮ ಆರಂಭವಾಗುವುದರೊಳಗೆ ಎಂ ಬಿ ಪಾಟೀಲ್‌ ಅವರು ಮೊದಲ ಹಂತದ ರಾಜ್ಯ ಪ್ರವಾಸ ಮುಗಿಸಿ ಕಾಂಗ್ರೆಸ್ಸಿಗೆ ಶಕ್ತಿ ತುಂಬುವ ಪ್ರಯತ್ನದೊಂದಿಗೆ ಲಿಂಗಾಯತ ಸಮುದಾಯದ ಪ್ರಬಲ ನಾಯಕನಾಗಿ ಹೊರಹೊಮ್ಮಲು ತಳಮಟ್ಟದಲ್ಲಿ ಪ್ರಯತ್ನಿಸುವ ಸಾಧ್ಯತೆಗಳು ಹೆಚ್ಚಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್