
- ಸಮಿತಿ ತೀರ್ಮಾನ ಅವೈಜ್ಞಾನಿಕವೆಂದು ರೈತರಿಂದ ಆರೋಪ
- ವೇಳಾಪಟ್ಟಿ ಬದಲಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ
ರೈತರ ಕೃಷಿಗಾಗಿ ವಾರಬಂದಿ ನಿಯಮದಂತೆ ಕೃಷ್ಣಾ ಮೇಲ್ದಂಡೆ ನಾಲೆಗಳಿಗೆ ನೀರು ಹರಿಸುವ ತೀರ್ಮಾನದಲ್ಲಿ ಕೆಲ ಬದಲಾವಣೆ ಮಾಡಬೇಕು. ಸಕಾಲಕ್ಕೆ ಸರಿಯಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಯಾದಗಿರಿ ಜಿಲ್ಲೆಯ ರೈತರು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮತ್ತು ರೈತರು ಭೀಮಾರಾಯನ ಗುಡಿಯ ಮುಖ್ಯ ಇಂಜಿನಿಯರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. "ನ.23ರಂದು ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು" ಎಂದು ಆಗ್ರಹಿಸಿದ್ದಾರೆ.
"14 ದಿನ ನಾಲೆಗಳಿಗೆ ನೀರು ಹರಿಸಲು ಮತ್ತು 10 ದಿನ ಬಂದ್ ಮಾಡಲು ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ ಐದು ಪಾಳಿಯಲ್ಲಿ 69 ದಿನ ನೀರು ಪೂರೈಸಲು ಹಾಗೂ ಇನ್ನೈದು ಪಾಳಿಯಲ್ಲಿ ನೀರು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಇದು ಕೃಷಿ ಮೇಲೆ ಪರಿಣಾಮ ಬೀರುತ್ತದೆ" ಎಂದು ರೈತರು ಹೇಳಿದ್ದಾರೆ.
"ಸಭೆಯ ನಿರ್ಣಯದಂತೆ ಈಗ ಎಂಟು ದಿನ ನೀರು ಹರಿಸಿ, ಬಂದ್ ಮಾಡಲಾಗಿದೆ. ಮತ್ತೆ ನೀರು ಹರಿಸುವಷ್ಟರಲ್ಲಿ 15 ದಿನಕ್ಕಿಂತ ಹೆಚ್ಚಿನ ಅಂತರವಿದ್ದು, ಮೆಣಸಿನಕಾಯಿ, ಹತ್ತಿ, ತೊಗರಿಬೆಳೆ, ಶೇಂಗಾ, ಕಡಲೆ, ಸೂರ್ಯಕಾಂತಿಯಂತಹ ಹಲವಾರು ಪ್ರಮುಖ ಬೆಳೆಗಳಿಗೆ ನೀರು ಪೂರೈಕೆ ಮಾಡಲು ಕಷ್ಟವಾಗುತ್ತದೆ. ಬೆಳೆಗಳು ನಾಶವಾಗುತ್ತದೆ. ಹಾಗಾಗಿ, ಸಭೆಯಲ್ಲಿ ತೀರ್ಮಾನಿಸಿದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕು. ಕೃಷಿಗೆ ಪೂರಕವಾಗಿ ವಾರಬಂದಿ ಮುಂದುವರೆಸಬೇಕು" ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ್ದು, "ಸಮಿತಿ ತೀರ್ಮಾನ ಅವೈಜ್ಞಾನಿಕವಾದದ್ದು. ಜಿಲ್ಲೆಯಲ್ಲಿ ಈಗಾಗಲೇ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಸಾಲ ತೀರಿಸಲಾಗದೇ ರೈತರು ಕಂಗಾಲಾಗಿದ್ದಾರೆ. ನೀರು ಸಿಗದೆ ಹಿಂಗಾರು ಬೆಳೆ ಹಾಳಾಗಿ ರೈತ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ. ಹಾಗಾಗಿ ಈ ಬಗ್ಗೆ ಕೂಡಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆ ಸಂಘಟಿಸುತ್ತೇವೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೃಷ್ಣಾ ಮೇಲ್ದಂಡೆ ಯೋಜನೆ | ಹಿಂಗಾರು ಹಂಗಾಮು ಬೆಳೆಗೆ ನೀರು ಪೂರೈಕೆ: ಸಚಿವ ಸಿ ಸಿ ಪಾಟೀಲ್
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣು ವಿ ಮಂದರವಾಡ, ಮುದ್ದಣ್ಣ ಅಮ್ಮಾಪೂರ, ಮಲ್ಕಣ್ಣ ಎಸ್, ಪ್ರಭು ಕೊಂಗಂಡಿ ಚನ್ನಪ್ಪ ಆನೆಗುಂದಿ ಸೇರಿದಂತೆ ಹಲವರಿದ್ದರು.