ಯಾದಗಿರಿ | ದಲಿತ ಮಹಿಳೆಯರ ಪ್ರವೇಶದ ಬಳಿಕ ದೇಗುಲಕ್ಕೆ ಬೀಗ ಜಡಿದ ಅಮಲಿಹಾಳ ಗ್ರಾಮಸ್ಥರು

  • ಪೊಲೀಸರು ದಲಿತರನ್ನು ದೇವಸ್ಥಾನಕ್ಕೆ ಕರೆತರುವ ವೇಳೆ ದಾಳಿಗೆ ಸಂಚು
  • ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ- ಮತ್ತೊಂದು ದೇಗುಲ ನಿರ್ಮಾಣಕ್ಕೆ ಸಿದ್ಧತೆ

ಜಾತಿ ತಾರತಮ್ಯಕ್ಕೆ ಬಗ್ಗದೇ ಪೊಲೀಸ್ ಭದ್ರತೆಯೊಂದಿಗೆ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರ ಪ್ರಕರಣವೀಗ ಬೇರೊಂದು ತಿರುವು ಪಡೆದಿದೆ. ಘಟನೆ ಬೆನ್ನಲ್ಲೇ ಅಮಲಿಹಾಳ ಗ್ರಾಮಸ್ಥರು ದೇಗುಲಕ್ಕೆ ಬೀಗ ಹಾಕಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯ ದಲಿತ ಮಹಿಳೆಯರು ಅಮಲಿಹಾಳ ಗ್ರಾಮದ ದೇಗುಲಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಮೇ 28ರಿಂದ ಆಂಜನೇಯ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇಲ್ಲಿವರೆಗೆ ದೇಗುಲದಲ್ಲಿ ಪೂಜೆ ನಡೆದಿಲ್ಲ.  ದೇಗುಲದ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ದಿನನಿತ್ಯದ ಪೂಜೆ ಸೇರಿದಂತೆ ಸೋಮವಾರದ ಅಮಾವಾಸ್ಯೆಯಂದೂ ಸ್ವಚ್ಛತೆ ಮತ್ತು ಪೂಜೆ ಇತರ ಆಚರಣೆಗಳು ನಡೆದಿಲ್ಲ.

ದಲಿತರು ದೇವಸ್ಥಾನ ಪ್ರವೇಶಿಸಿದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳಲ್ಲಿ ಉದ್ವಿಗ್ನ ವಾತಾವರಣವಿದೆ. ಗಲಾಟೆ ನಡೆಯುವ ಸಾಧ್ಯತೆ ಇರುವುದರಿಂದ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗ್ರಾಮಗಳಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? : ಯಾದಗಿರಿ | ಪೋಲಿಸ್ ಭದ್ರತೆಯಲ್ಲಿ ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಯರು

ಪೊಲೀಸರ ಮೇಲೆ ದಾಳಿಗೆ ಸಂಚು

ದಲಿತ ಮಹಿಳೆಯರನ್ನು ದೇವಸ್ಥಾನಕ್ಕೆ ಕರೆ ತಂದರೆ ಪೊಲೀಸರನ್ನೊಳಗೊಂಡಂತೆ ದಾಳಿ ನಡೆಸಲು ಗ್ರಾಮದ ಪ್ರಬಲ ಜಾತಿಯ ಗ್ರಾಮಸ್ಥರು ಸಂಚು ರೂಪಿಸಿದ್ದರು. ಬಡಿಗೆ, ಕಾರದ ಪುಡಿ, ಕಲ್ಲು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. 

"ಹೊಲ ಹೋಗಲಿ, ಮನೆ ಹೋಗಲಿ, ಕೇಸ್‌ ಆದ್ರೂ ಸರಿ, ಜೈಲಿಗೂ ಹಾಕಲಿ, ಏನ್ ಆಗುತ್ತೆ ನೋಡೋಣ, ಪೊಲೀಸರನ್ನೂ ಹೊಡೆದು ಬಿಡುವ" ಎಂದು ಮಾತನಾಡಿಕೊಂಡಿದ್ದರು ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿ ವ್ಯತ್ಯಾಸವಾಗಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಲಕ್ಷಣಗಳಿದ್ದವು.

ಮೇ 27ರಂದು ಯಾದಗಿರಿ ಎಸ್ಪಿ ಡಾ ವೇದಮೂರ್ತಿ ನೇತೃತ್ವದಲ್ಲಿ ಶಾಂತಿ ಸಭೆ ನಡೆದಿತ್ತು. ಆದರೆ ಸಭೆಯಲ್ಲಿ ಒಂದು ಒಪ್ಪಂದಕ್ಕೆ ಬಾರದೇ ಗ್ರಾಮದ ಕೆಲವರು ಏನಾಗತ್ತೋ ನೋಡೋಣವೆಂಬ ಉಡಾಫೆಯ ಧೋರಣೆ ವ್ಯಕ್ತಪಡಿಸಿದ್ದರು. 

ಇದಾದ ನಂತರ 28ರಂದು ಹೂವಿನಹಳ್ಳಿಯ ದಲಿತ ಮಹಿಳೆಯರು ದೇಗುಲಕ್ಕೆ ಕರೆತರುವ ಮಾರ್ಗದ ಇಕ್ಕೆಲಗಳಲ್ಲಿ ಕಲ್ಲು-ಬಡಿಗೆ, ಖಾರದಪುಡಿ ಸಂಗ್ರಹಿಸಿ ಗೌಪ್ಯ ಸ್ಥಳಗಳಲ್ಲಿ ಗ್ರಾಮಸ್ಥರು ನಿಂತದ್ದನ್ನು ಕಂಡ ಪೊಲೀಸರು ಗ್ರಾಮಸ್ಥರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಹೀಗಾಗಿ ಸಂಭವನೀಯ ಅನಾಹುತ ತಪ್ಪಿದೆ ಎನ್ನಲಾಗಿದೆ. 

ಸಂವಿಧಾನದ ಆಶಯಗಳ ಬಗ್ಗೆ ಪೊಲೀಸರು ಗ್ರಾಮಸ್ಥರಿಗೆ ತಿಳಿವಳಿಕೆ ಮಾಡಿಕೊಟ್ಟರೂ ದಲಿತರ ದೇಗುಲ ಪ್ರವೇಶ ವಿಚಾರವಾಗಿ ಗ್ರಾಮದ ಒಂದು ಗುಂಪು ತಕರಾರು ತೆಗೆದಿತ್ತು ಎಂದು ಯಾದಗಿರಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಎಲ್ಲ ಬೆಳವಣಿಗೆ ಬಳಿಕ ಪ್ರಬಲ ಜಾತಿಯ ಜನರ ಗುಂಪು ಚಂದಾ ವಸೂಲಿ ಮಾಡಿ, ನೂತನ ದೇಗಲು ಕಟ್ಟುವ ಕುರಿತು ಚರ್ಚೆ ನಡೆಸಿದೆ.

ದೇಗುಲ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಮಧ್ಯೆ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಬೂದಿ ಮುಚ್ಚಿದ ಕೆಂಡದಂತ ಸ್ಥಿತಿ ಇದೆ. ಆದರೂ ದೇಗುಲದ ಬೀಗ ತೆಗೆಯದಿರುವುದು ಗೊಂದಲವನ್ನು ಮೂಡಿಸಿದೆ.  

ನಿಮಗೆ ಏನು ಅನ್ನಿಸ್ತು?
3 ವೋಟ್