ಯಾದಗಿರಿ | ಪರಿಷ್ಕೃತ ಪಠ್ಯ ಹಿಂಪಡೆಯಲು ಡಿಎಸ್‌ಎಸ್‌ ಆಗ್ರಹ

  • ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವಕ್ಕೆ ಅಪಮಾನ
  • ಪಠ್ಯಪುಸ್ತಕದಲ್ಲಿ ನೂರಾರು ಸುಳ್ಳು ಸಂಗತಿಗಳ ಸೇರ್ಪಡೆ

ಅವೈಜ್ಞಾನಿಕ, ಅಸಂವಿಧಾನಿಕ ಪರಿಷ್ಕೃತ ಪಠ್ಯ ಹಿಂಪಡೆಯುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲೆಯ ಯಾದಗಿರಿ ಮತ್ತು ಶಹಪುರದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಪಠ್ಯ ಪುಸ್ತಕ ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಯಾದಗಿರಿ ಜಿಲ್ಲಾಧಿಕಾರಿ ಮತ್ತು ಶಹಪುರ ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. 

ಪರಿಷ್ಕೃತ ಪಠ್ಯ ಅಧಿಕೃತವಾಗಿ ಬಹಿರಂಗಗೊಂಡಿವೆ. ಶಾಲಾ ಶಿಕ್ಷಣವನ್ನು ಸಂಪೂರ್ಣವಾಗಿ ಅವೈಜ್ಞಾನಿಕ, ಅಸಂವಿಧಾನಿಕ, ಅನೈತಿಕಗೊಳಿಸಲು ಮುಂದಾದ ಸರ್ಕಾರದ ಕ್ರಮವನ್ನು ಪ್ರತಿಭಟನಾನಿರತರು ಖಂಡಿಸಿದರು.

ಪಠ್ಯಪುಸ್ತಕ ಸಮಿತಿ ರಚನೆ ಕ್ರಮ ಆಘಾತಕಾರಿಯಾಗಿದ್ದು, ಒಬ್ಬರ ಹೊರತಾಗಿ ಸಮಿತಿ ಸದಸ್ಯರೆಲ್ಲ ಬ್ರಾಹ್ಮಣರು. ಅಧ್ಯಕ್ಷರಿಗೆ ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ಪಾಠ ಮಾಡುವ ಅರ್ಹತೆ ಇರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ತಮ್ಮ  ಕೀಳು ಅಭಿರುಚಿ ವ್ಯಕ್ತಪಡಿಸುತ್ತಿದ್ದ ಸಮಿತಿ ಅಧ್ಯಕ್ಷರು ವಿಕೃತ ನಡವಳಿಕೆಯ ವ್ಯಕ್ತಿಯಾಗಿದ್ದಾರೆ. ಇಂತಹ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಆಯ್ಕೆ ಮಾಡಿದ್ದರ ಬಗ್ಗೆ ನಮಗೆ ಆಕ್ರೋಶವಿದೆ ಎಂದರು.

ಇಂಥ ವ್ಯಕ್ತಿ ಸಮ್ಮುಖದಲ್ಲಿ ಸಿದ್ಧವಾದ ಪಠ್ಯ ಪುಸ್ತಕ ಹೇಗಿರಲಿದೆ. ಪಠ್ಯದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ತತ್ವ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು ಹಿಯಾಳಿಸಲಾಗಿದೆ. ಪಠ್ಯ ಪುಸ್ತಕ ಅಸಂಬದ್ಧ, ಅವೈಜ್ಞಾನಿಕ, ಅಸಂವಿಧಾನಿಕ, ಅನೈತಿಕ ಸಂಗತಿಗಳಿಂದ ಕೂಡಿವೆ ಎಂದು ದೂರಿದರು.

ಪಠ್ಯ ಪುಸ್ತಕದಲ್ಲಿ ಜಾತಿ ಶ್ರೇಷ್ಠತೆ ಮೆರೆಯಲಾಗಿದೆ. ನೂರಾರು ಸುಳ್ಳುಗಳನ್ನು ಇತಿಹಾಸವೆಂಬಂತೆ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ.

Image

ಪಠ್ಯ ಪುಸ್ತಕದಲ್ಲಿದ್ದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌ ವಾಕ್ಯವನ್ನು ಕೈಬಿಡಲಾಗಿದೆ. ಬಿ ಎಸ್ ರಾವ್ ಸಂವಿಧಾನದ ಕರಡು ಬರೆದವರೆಂದು ಬಿಂಬಿಸಲಾಗಿದೆ. ಕೆಲ ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿಯನ್ನು ಪಠ್ಯದೊಳಗೆ ತೂರಿಸಲಾಗಿದೆ. ಇಂಥ ಹಲವು  ಅಂಶಗಳು ಈಗಾಗಲೇ ಸಾರ್ವಜನಿಕವಾಗಿ ಚರ್ಚೆಯಾಗುತ್ತಿವೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಹಳೇ ಪಠ್ಯವನ್ನು ಮುಂದುವರಿಸಲು ದಸಂಸ ಒಕ್ಕೂಟ ಆಗ್ರಹ

ದಸಂಸ ಹಕ್ಕೊತ್ತಾಯಗಳು

  1. ಅನರ್ಹ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮರು ಪರಿಷ್ಕರಿಸಿದ ಎಲ್ಲ ಪಠ್ಯ ಹಿಂಪಡೆಯಬೇಕು
  2. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ಪಿಯುಸಿ ಪಠ್ಯಪುಸ್ತಕ ಮರು ಪರಿಷ್ಕರಣೆಗೆ  ನೀಡುವ ನಿರ್ಧಾರ ಕೈ ಬಿಡಬೇಕು
  3. ಅನಗತ್ಯ ಗೊಂದಲಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಮುಖ್ಯಮಂತ್ರಿಗಳು ವಜಾಗೊಳಿಸಬೇಕು
  4. ಈ ಹಿಂದಿನ ಪಠ್ಯಪುಸ್ತಕವನ್ನು ಮಕ್ಕಳಿಗೆ ಶೀಘ್ರ ತಲುಪಿಸಲು ಕ್ರಮ ಕೈಗೊಳ್ಳಬೇಕು

"ಈ ವಿಚಾರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕಾಗಿ ಮೇಲಿನ ಹಕ್ಕೊತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಭಾರತದ ಪ್ರಜಾತಂತ್ರ ಸಂವಿಧಾನ ಮತ್ತು ಈ ನೆಲದ ನೈತಿಕಶಕ್ತಿ ಉಳಿವಿಗೆ ನಿರಂತರ ತೀವ್ರ ಹೋರಾಟ ಮುಂದುವರಿಸಲಾಗುತ್ತದೆ" ಎಂದು ದಸಂಸ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಸರ್ಕಾರವನ್ನು ಎಚ್ಚರಿಸಿದರು. 

ದಸಂಸ ಮುಖಂಡರಾದ ಶರಣರೆಡ್ಡಿ ಹತ್ತಿಗೂಡೂರ, ಮಲ್ಲಿನಾಥ, ಬಸವರಾಜ ಗುಡಿಮನಿ, ರಾಘವೇಂದ್ರ ಹಾರಣಗೇರಾ, .ಮಾರಪ್ಪ ಬಿ, ನಿಂಗಣ್ಣ ನಾಟೀಕಾರ ಇತರರು ಉಪಸ್ಥಿತರಿದ್ದರು.

ಮಾಸ್‌ ಮೀಡಿಯಾ ಯಾದಗಿರಿ ಜಿಲ್ಲಾ ಮಾಧ್ಯಮ ಸಂಯೋಜಕಿ ಗೀತಾ ಹೊಸಮನಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180