ಯಾದಗಿರಿ | ಶಿವಮೊಗ್ಗ ಗಲಭೆ; ಬಜರಂಗದಳದ ಮೇಲೆ ಕ್ರಮಕ್ಕೆ ಬಿಎಸ್‌ಪಿ ಆಗ್ರಹ

BSP
  • "ಬೊಮ್ಮಾಯಿ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸಂಪೂರ್ಣ ಕುಸಿತ"
  • "ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾರ್ವರ್ಕರ್ ಫ್ಲೆಕ್ಸ್ ವಿವಾದ"

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿ ಗಲಭೆಗೆ ಕಾರಣರಾದ ಬಜರಂಗದಳದ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯ ಉಪಾಧ್ಯಕ್ಷರು ಕೆ.ಬಿ ವಾಸು ಆಗ್ರಹಿಸಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸಂಪೂರ್ಣ ಕುಸಿದಿದೆ. ಅದರ ಭಾಗವಾಗಿಯೇ ಬಜರಂಗದಳದ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ಶಿವಮೊಗ್ಗದಲ್ಲಿ ಸಾರ್ವರ್ಕರ್ ಫ್ಲೆಕ್ಸ್ ಹಾಕಿದ್ದಾರೆ. ವಿವಾದ ಸೃಷ್ಟಿಸಿದ್ದಾರೆ" ಎಂದು ಆರೋಪಿಸಿದ್ದಾರೆ. 

"ಗಲಬೆಯಲ್ಲಿ ಪ್ರೇಮ ಸಿಂಗ್ ಎನ್ನುವವರಿಗೆ ದುಷ್ಕರ್ಮಿಗಳು ಚೂರಿ ಹಾಕಿದ್ದು, ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವುದು ಸ್ವಾಗತರ್ಹ. ಆದರೆ, ಗಲಬೆಗೆ ಸೃಷ್ಠಿಸಲು ಉದ್ದೇಶದಿಂದ ಫ್ಲೆಕ್ಸ್‌ ಅಳವಡಿಸಿದ ಬಜರಂಗದಳದ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳದಿರುವುದು ಸರ್ಕಾರ ಮತ್ತು ಪೊಲೀಸ್‌ ಇಲಾಖೆಯ ಇಬ್ಬಂದಿ ನೀತಿಗೆ ಸಾಕ್ಷಿಯಾಗಿದೆ" ಎಂದು ಆರೋಪಿಸಿದ್ದಾರೆ. 

"ಈ ಹಿಂದೆ ಶಿವಮೊಗ್ಗದಲ್ಲಿ ಹರ್ಷನ ಕೊಲೆ, ಮಂಗಳೂರು ಸರಣಿ ಹತ್ಯೆಗಳು ರಾಜ್ಯಾದ್ಯಂತ ಅಶಾಂತಿ ಸೃಷ್ಟಿಸಿದ್ದವು. ಈಗ ಮತ್ತೆ ಉದ್ದೇಶಪೂರ್ವಕವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಸಂಚಿನಿಂದ ಶಿವಮೊಗ್ಗದಲ್ಲಿ ಫ್ಲೆಕ್ಸ್ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುವ ಬದಲು ವಿವಾದಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗುವ ಹುನ್ನಾರ ನಡೆಸಿದಂತೆ ಕಾಣುತ್ತಿದೆ" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?; ಬೀದರ್ | ದೇವನೂರರ 'ಆರ್‌ಎಸ್ಎಸ್ ಆಳ ಮತ್ತು ಅಗಲ' ಪುಸ್ತಕ ಬಿಡುಗಡೆ

"ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವ ಈಶ್ವರಪ್ಪ ತವರು ಜಿಲ್ಲೆಯಲ್ಲಿ ಫ್ಲೆಕ್ಸ್ ವಿವಾದ ಸೃಷ್ಟಿಯಾಗಿರುವುದು ಆಕಸ್ಮಿಕವಲ್ಲ. ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿದ ರೀತಿಯಲ್ಲಿ, ಫ್ಲೆಕ್ಸ್ ಅಳವಡಿಸಿ ಗಲಬೆಗೆ ಕಾರಣರಾದ ದುಷ್ಕರ್ಮಿಗಳನ್ನು ಸಹ ಕೂಡಲೇ ಬಂಧಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ. 

"ರಾಜಸ್ಥಾನದಲ್ಲಿ ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಮುಖ್ಯ ಶಿಕ್ಷಕನಿಂದ ಹಲ್ಲೆಗೊಳಗಾಗಿ ಪ್ರಾಣ ಕಳೆದುಕೊಂಡ ದಲಿತ ವಿದ್ಯಾರ್ಥಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಮಾತನಾಡದಿರುವುದು ದಲಿತರ ಮೇಲಿನ ನಿಷ್ಕಾಳಜಿಗೆ ಸಾಕ್ಷಿ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ತಮ್ಮದೇ ಕಾಂಗ್ರೆಸ್ ಸರ್ಕಾರವಿರುವ ರಾಜ್ಯದಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಮೌನವಾಗಿರುವುದು ಖಂಡನೀಯ" ಎಂದು ಅವರು ಹೇಳಿದ್ದಾರೆ. 

ಮಾಸ್‌ ಮೀಡಿಯಾ ಯಾದಗಿರಿ ಜಿಲ್ಲಾ ಸಂಯೋಜಕಿ ಗೀತಾ ಹೊಸಮನಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್