ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ: ಕಾಂಗ್ರೆಸ್‌ ವಿರುದ್ಧ ಮುಖ್ಯಮಂತ್ರಿ ಬೊಮ್ಮಾಯಿ ಲೇವಡಿ

ಬಸವರಾಜ ಬೊಮ್ಮಾಯಿ
  • ʼ75 ವರ್ಷದಲ್ಲಿ ಕಾಂಗ್ರೆಸ್ ಕೇವಲ 25 ಲಕ್ಷ ಮನೆಗಳಿಗೆ ನೀರು ನೀಡಿದೆʼ
  • ʼನಾವು ಒಂದೇ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನೀರು ಪೂರೈಸಿದ್ದೇವೆʼ

ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಪ್ರಧಾನಿ ಮೋದಿ ಅವರು ಅಕ್ಕಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿ, “75 ವರ್ಷದಲ್ಲಿ ಕಾಂಗ್ರೆಸ್ ಕೇವಲ 25 ಲಕ್ಷ ಮನೆಗಳಿಗೆ ನೀರು ನೀಡಿದೆ. ಕನಿಷ್ಟ ಕುಡಿಯುವ ನೀರು ಕೊಡಲಾಗದವರು ನಮ್ಮನ್ನು ಆಳಿದ್ದರು. ಜನಪರ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದರೂ ಏನೂ ಕೆಲಸ ಮಾಡಲಿಲ್ಲ. ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಹಲವು ಕೇಸ್ ಮುಚ್ಚಿಹಾಕಿದ್ದಾರೆ. 50 ಕೇಸ್ ಗಳಿಗೆ ಬಿ-ರಿಪೋರ್ಟ್ ಹಾಕಿಸಿದ್ದಾರೆ. ಇದು ಕಾಂಗ್ರೆಸ್ ಆಡಳಿತದ ವೈಖರಿ” ಎಂದು ಹರಿಹಾಯ್ದರು.

Eedina App

“ಚಿಕ್ಕಮಗಳೂರಿನಲ್ಲಿ‌ ಮೆಡಿಕಲ್ ಕಾಲೇಜ್ ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ? ಭ್ರಷ್ಟ ಕಾಂಗ್ರೆಸನ್ನು ಬೇರು ಸಮೇತ ಕಿತ್ತು ಹಾಕಲು ಶೃಂಗೇರಿ ಶಾರದಾಂಬೆಯ ಪುಣ್ಯ ಸ್ಥಳದಿಂದ ಸಂಕಲ್ಪ ಮಾಡೋಣ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವ ಸಂಕಲ್ಪ ಮಾಡೋಣ” ಎಂದು ಕರೆ ನೀಡಿದರು.

8,000 ವಿವೇಕ ಶಾಲಾ ಕೊಠಡಿಗಳ ನಿರ್ಮಾಣ

AV Eye Hospital ad

“ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ ನಮ್ಮದು. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನಾರಾಯಣ ಗುರು ಅವರ ಹೆಸರಿನಲ್ಲಿ ವಸತಿ ಶಾಲೆ, ಎಸ್ ಸಿ ಎಸ್ ಟಿ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ, 50 ಕನಕದಾಸ ಹಾಸ್ಟೆಲ್ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಲಾಗುತ್ತಿದೆ” ಎಂದರು.

“ರಾಜ್ಯದಲ್ಲಿ 6000 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ಬಂದರುಗಳ ನಿರ್ಮಾಣ, ಜಲಜೀವನ ಮಿಷನ್ ಯೋಜನೆಗಳು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಕುಡಿಯುವ ನೀರಿನ ಯೋಜನೆಯಡಿ ಕೇವಲ ಒಂದೇ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಪೂರೈಸಲಾಗಿದೆ. ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಗಿದೆ. ರೈತರಿಗೆ 5 ಎಚ್ ಪಿವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರೈತಮಕ್ಕಳಿಗೆ ಮತ್ತು 6 ಲಕ್ಷ ರೈತ ಕೂಲಿಕಾರ್ಮಿಕರಿಗೆ ವಿದ್ಯಾನಿಧಿ ನೀಡಲಾಗುತ್ತಿದೆ” ಎಂದರು.

ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ 

“ಶೃಂಗೇರಿಯಲ್ಲಿ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು” ಎಂದು ತಿಳಿಸಿದರು.

ಕಾಫಿ ಬೆಳೆಗಾರರ ಒತ್ತುವರಿ ಸಮಸ್ಯೆಗೆ ಪರಿಹಾರ

“ಮಲೆನಾಡು ಭಾಗದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಮಸ್ಯೆ ಇದೆ‌. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ನಿವಾರಿಸಲು ಕಂದಾಯ ಇಲಾಖೆಯವರು ಶೀಘ್ರ ಪರಿಹಾರ ಕಂಡುಕೊಳ್ಳಲಿದ್ದಾರೆ‌. ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಂದಿದೆ. ಔಷಧಿ ಸಿಂಪಡಣೆ ಹಾಗೂ ರೋಗ ಹರಡದಂತೆ ಪರಿಹಾರ ಕಂಡುಕೊಳ್ಳಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ. ಈ ಭಾಗದ ಪ್ರವಾಹ ಬಂದು ಹಾಳಾಗಿರುವ ರಸ್ತೆಗಳ ದುರಸ್ತಿಗೆ 5.80 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ಹೆಚ್ಚಿನ ಅನುದಾನವನ್ನು ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಡಿಸೆಂಬರ್ ಅಂತ್ಯದೊಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಮುಖ್ಯಮಂತ್ರಿ ಬೊಮ್ಮಾಯಿ

ಮುಳ್ಳಯ್ಯನಗಿರಿ, ದತ್ತ ಪೀಠದ ನಡುವೆ ರೋಪ್ ವೇ

“ದತ್ತ ಪೀಠ ಈ ಭಾಗದ ಭಾವನೆಗಳ ದೇವಸ್ಥಾನ. ಮುಳ್ಳಯ್ಯನಗಿರಿ ಮತ್ತು ದತ್ತ ಪೀಠದ ನಡುವೆ ರೋಪ್ ವೇ ನಿರ್ಮಿಸಲು ಆಯವ್ಯಯದಲ್ಲಿ ಅನುದಾನ ಮೀಸಲಿರಿಸಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.

ಆನೆ ದಾಳಿಗೆ 15 ಲಕ್ಷ ಪರಿಹಾರ

“ಈ ಭಾಗದಲ್ಲಿ ಆನೆ ಹಾವಳಿ. ಹೆಚ್ಚಿದೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ‌. ಆನೆ ದಾಳಿಯಿಂದ ಜೀವ ಹಾನಿಯಾದರೆ 15 ಲಕ್ಷ ಪರಿಹಾರ ನೀಡಲಾಗುತ್ತಿದೆ. ಆನೆ ದಾಳಿಯನ್ನು ತಡೆಯಲು ಪ್ರತಿ ಜಿಲ್ಲೆಗೆ ಸ್ಕ್ವಾಡ್ ರಚಿಸಲಾಗಿದೆ” ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ ಎನ್ ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app