ಕೊಡಗು | ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ರದ್ದತಿಗೆ ಒತ್ತಾಯಿಸಿ ದಸಂಸ ಪ್ರತಿಭಟನೆ

  • "ಜಿಎಸ್‌ಟಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಹಾಕಿದೆ"
  • "ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಗಳನ್ನು ರೂಪಿಸುತ್ತಿದೆ"

ಮೊಸರು, ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ 5% ಜಿಎಸ್‌ಟಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಪ್ರತಿಭಟನೆ ನಡೆಸಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿರುವ ದಸಂಸ ಕಾರ್ಯಕರ್ತರು, ಕೇಂದ್ರ ಸರ್ಕಾರಕ್ಕೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್‌ ಪ್ರಶಾಂತ್ ಅವರಿಗೆ ಸಲ್ಲಿಸಿದ್ದಾರೆ.

"ಮೊಸರು, ಮಜ್ಜಿಗೆ, ಪನ್ನೀರು, ಅಕ್ಕಿ, ಗೋದಿ, ಬಾರ್ಲಿ, ಓಟ್ಸ್, ,ಬೆಲ್ಲ ಜೇನುತುಪ್ಪ, ಆಸ್ಪತ್ರೆ ಕೊಠಡಿ ಶುಲ್ಕ, ಹೋಟೆಲ್ ಕೊಠಡಿ, ಎಲ್‌ಇ ಡಿ ಬಲ್ಬ್, ಬ್ಯಾಂಕ್ ಚೆಕ್ ಬುಕ್‌ಗಳು, ಹಣ್ಣು, ತರಕಾರಿ, ವಿದ್ಯಾರ್ಥಿಗಳು ಬಳಸುವ ಇಂಕ್, ಮುದ್ರಣದ ಇಂಕು, ಶಿಕ್ಷಣಕ್ಕಾಗಿ ಮಕ್ಕಳು ಬಳಸುವ ಭೂಪಟ ಹೀಗೆ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದು ಜನ ಸಾಮಾನ್ಯನ ಬದುಕಿನ ಮೇಲೆ ಬರೆ ಹಾಕಿದಂತಾಗಿದೆ" ಎಂದು ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಆರ್ ಪರಶುರಾಮ್ ಆರೋಪಿಸಿದ್ದಾರೆ. 

"ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹೇರಿರುವುದು ದುರಾದೃಷ್ಟಕರ ಸಂಗತಿ. ಜಿಎಸ್‌ಟಿ ಹೆಸರಿನಲ್ಲಿ ಸರ್ಕಾರ ಜನ ಸಾಮಾನ್ಯರನ್ನು ಲೂಟಿ ಮಾಡುತ್ತಿದೆ. ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಬಿಜೆಪಿ ಸರ್ವಾಧಿಕಾರಿ ಧೋರಣೆಯೊಂದಿಗೆ ಜನ ವಿರೋಧಿ ನೀತಿಗಳನ್ನು ರೂಪಿಸುತ್ತಿದೆ. ಜನರ ಹೊಟ್ಟೆ ಮೇಲೆ ಬರೆ ಹಾಕುವ ಕೆಲಸಕ್ಕೆ ಮುಂದಾಗಿದೆ" ಎಂದು ಅವರು ಕಿಡಿಕಾರಿದ್ದಾರೆ.

"ಕೊಡಗಿನಲ್ಲಿ ಬಹುಸಂಖ್ಯಾತ ಬಡಜನರು 'ಸಾಲು ಮನೆ'ಗಳಲ್ಲಿ ಜೀತ ಮಾಡುತ್ತಿದ್ದಾರೆ. ಆದಿವಾಸಿಗಳು, ದಲಿತರು, ಯಳವ ಸಮುದಾಯ ಹೆಚ್ಚಿನ ಜನರು ಕಾಫಿ ತೋಟಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಿಗುವ ದುಡಿಮೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿರುವಾಗ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿದರೆ, ಅವರೆಲ್ಲರೂ ಬದುಕುವುದಾದರೂ ಹೇಗೆ?" ಎಂದು ದಸಂಸ ಹಿರಿಯ ಮುಖಂಡ ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಜಿಎಸ್‌ಟಿ| ಮಂಡಕ್ಕಿ ಭಟ್ಟಿಗಳಲ್ಲಿ ಆತಂಕದ ಕರಿಛಾಯೆ

"ಬಡ ಜನರನ್ನು ಕೇಂದ್ರ ನಿರ್ಲಕ್ಷಿಸಿದೆ. ಅವೈಜ್ಞಾನಿಕವಾಗಿ ಜಿಎಸ್‌ಟಿ ಹೇರುವ ಮೂಲಕ ಜನಜೀವನ ದುಸ್ತರ ಮಾಡಲು ಹೊರಟಿದೆ. ಆರ್ಥಿಕವಾಗಿ ಬಲಾಡ್ಯರನ್ನು ನಿಯಂತ್ರಿಸುವ ಶಕ್ತಿಯಿಲ್ಲದ ಸರ್ಕಾರ, ಬಡವರು, ಅಶಕ್ತರ ಮೇಲೆ ಸವಾರಿ ಮಾಡುತ್ತಿದೆ. ಕೇಂದ್ರ ಸರ್ಕಾರವು ಬಡವ, ದಲಿತ, ಶೋಷಿತ ಸಮುದಾಯಗಳ ವಿರೋಧಿಯಾಗಿದೆ" ಎಂದು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ರಜನಿಕಾಂತ್, ಹೆಚ್ ಇ ಶಿವಕುಮಾರ್, ಸುಬ್ರಮಣಿ, ಗಿರೀಶ್, ಸತೀಶ್, ಕುಮಾರ್ ಮಹಾದೇವ, ಟಿ ಏನ್ ಗೋವಿಂದಪ್ಪ, ಹೆಚ್ ಆರ್ ಮುರುಗ, ಮರಿಸ್ವಾಮಿ, ರಂಗರಾಜು, ಮಂಜು ಸೇರಿದಂತೆ ಹಲವರು ಇದ್ದರು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್