ಕೊಡಗಿನಲ್ಲಿ ನಿಷೇಧಾಜ್ಞೆ: ಕೊಡಗು ಚಲೋ ಮುಂದೂಡಿದ ಕಾಂಗ್ರೆಸ್; ಏನಂತಾರೆ ಜಿಲ್ಲೆಯ ಜನ?

kodagu chalo
  • ನಾಲ್ಕು ದಿನಗಳ ಕಾಲ ಕೊಡಗಿನಲ್ಲಿ ನಿಷೇಧಾಜ್ಞೆ
  • 'ಕೊಡಗು ಚಲೋ' ಕಾರ್ಯಕ್ರಮ ಮುಂದೂಡಿದ ಕಾಂಗ್ರೆಸ್

ಕೊಡಗು ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಸೆಕ್ಷನ್‌ 144 ವಿಧಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆಗಸ್ಟ್‌ 26ಕ್ಕೆ ಹಮ್ಮಿಕೊಂಡಿದ್ದ ‘ಕೊಡಗು ಚಲೋ’ ಕಾರ್ಯಕ್ರಮವನ್ನು ಕಾಂಗ್ರೆಸ್‌ ಮುಂದೂಡಿದೆ. ಕಾಂಗ್ರೆಸ್‌ನ ಪ್ರತಿಭಟನೆ ಮುಂದೂಡಿಕೆ ಹಾಗೂ ನಿಷೇಧಾಜ್ಞೆ ಬಗ್ಗೆ ಕೊಡಗಿನ ಜನತೆ ಅಭಿಪ್ರಾಯವೇನು ಎಂಬುವ ಕುತೂಹಲ ಎಲ್ಲರಿಗೂ ಇರುತ್ತದೆ. ಈ ನಿಟ್ಟಿನಲ್ಲಿ ಜನರ ಅಭಿಪ್ರಾಯವನ್ನು ಈದಿನ. ಕಾಮ್‌ ಕೇಳಿದೆ.

ಈ ದಿನ.ಕಾಮ್‌ ಜೊತೆ ಮಾತನಾಡಿದ ದಸಂಸ ಕೊಡಗು ಜಿಲ್ಲಾ ಸಂಚಾಲಕ ಪರಶುರಾಮ್ “ಕೊಡಗಿನಲ್ಲಿ 144 ಸೆಕ್ಷನ್ ಜಾರಿ ಮಾಡಿರೋದನ್ನು ಮುಕ್ತವಾಗಿ ಸ್ವಾಗತ ಮಾಡುತ್ತೇನೆ. ಎರಡು ರಾಜಕೀಯ ಪಕ್ಷಗಳು(ಕಾಂಗ್ರೆಸ್‌ ಮತ್ತು ಬಿಜೆಪಿ) ಒಂದೆಡೆ ಸೇರಿ ಪ್ರತಿಭಟನೆ ಮಾಡುವುದರಿಂದ ಘರ್ಷಣೆ ,ಅಹಿತಕರ ಘಟನೆ ನಡೆಯುವ ಸಂಭವವಿದೆ .ಇದನ್ನ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ತೆಗೆದುಕೊಂಡ  ನಿಲುವನ್ನು ಸ್ವಾಗತಿಸುತ್ತೇನೆ” ಎಂದರು.

“ಕೊಡಗಿನಲ್ಲಿ ಬಿಜೆಪಿ ಸಮಾವೇಶ ಆಗಸ್ಟ್ 26ಕ್ಕೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಲು ಅನುವಾಗಿದ್ದರು. ನಿಷೇಧಾಜ್ಞೆಯಿಂದ ಕಾರ್ಯಕ್ರಮ ರದ್ದಾಗಿದೆ. ಬಲವಂತವಾಗಿ ಟಿಪ್ಪು ಜಯಂತಿ ಆಚರಿಸಿದವರು ಬಿಜೆಪಿಯ ಬಗ್ಗೆ ಏನು ಬೇಕಾದರೂ ಹೇಳುತ್ತಾರೆ. ಅದಕ್ಕೆಲ್ಲ ನಾವು ಉತ್ತರಿಸುವುದಿಲ್ಲ. ಕೊಡಗಿನ ಜನ ಬಿಜೆಪಿ ಜೊತೆ ಇದ್ದಾರೆ” ಎಂದು ಈದಿನ.ಕಾಮ್‌ ಜೊತೆ ಮಾತನಾಡಿದ ಸೋಮವಾರಪೇಟೆ ನಿವಾಸಿ ಮನು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಹೇಳಿಕೊಳ್ಳಲು ಸಾಧನೆ ಇಲ್ಲದ ಬಿಜೆಪಿ ಜನೋತ್ಸವ ಕೈಬಿಟ್ಟು ಸಾವರ್ಕರ್‌ ಉತ್ಸವ ಮಾಡುತ್ತಿದೆ: ಪ್ರಿಯಾಂಕ್‌ ಖರ್ಗೆ ಟೀಕೆ

“ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೊಡಗಿಗೆ ಬಂದು ಪಾದಯಾತ್ರೆ ಮಾಡಿದರೆ ಕಾಂಗ್ರೆಸ್ ಪಕ್ಷಕ್ಕೆ 'ಮೈಲೇಜ್' ಕೊಡುತ್ತದೆ. ರಾಜ್ಯ ರಾಜಕಾರಣದಲ್ಲಿ ಕೊಡಗಿನ ಪಾದಯಾತ್ರೆ ಪುನಃ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕಾರಣ ಆಗುತ್ತದೆ. ಇದನ್ನು ತಡೆಯಬೇಕು ಎನ್ನುವ ಕಾರಣಕ್ಕಾಗಿ ಬಿಜೆಪಿ ಹುನ್ನಾರ ನಡೆಸಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ” ಎನ್ನುತ್ತಾರೆ ಕುಶಾಲ ನಗರ ನಿವಾಸಿ ಮೊಹಮ್ಮದ್ ರಫಿ .

“ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳ ತೀರ್ಮಾನ ಸ್ವಾಗತಾರ್ಹ. ಜಿಲ್ಲೆಯಲ್ಲಿ ಯಾವುದೇ ಪ್ರಾಣಾಪಾಯ ಹಾಗೂ ಯಾವುದೇ ಗಲಾಟೆಗೆ ಆಸ್ಪದ ನೀಡದೆ ನಿಷೇಧಾಜ್ಞೆ ಹೊರಡಿಸಿದ್ದು ಸೂಕ್ತವಾದ ಕ್ರಮ. ಆದರೆ, ಕೊಡಗಿಗೆ ಬಂದ ರಾಜ್ಯದ ಪ್ರಮುಖ ನಾಯಕರಾದ ಸಿದ್ದರಾಮಯ್ಯ ಅವರ ಮೇಲೆ ನಡೆದಂಥ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಬೇಕು” ಎಂದು ಮಡಿಕೇರಿ ನಿವಾಸಿ ಅಬ್ದುಲ್ಲಾ ಈ ದಿನ.ಕಾಮ್‌ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ದಸಂಸ ಹಿರಿಯ ಮುಖಂಡ ಪೊನ್ನಂಪೇಟೆಯ ಕೃಷ್ಣಪ್ಪ ಮಾತನಾಡಿ, “ಕೊಡಗಿನಲ್ಲಿ ಬಿಜೆಪಿ ಕೋಮುವಾದ ಸೃಷ್ಟಿ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ-ಪಾದಯಾತ್ರೆ ಮಾಡಲು ಎಲ್ಲರಿಗೂ ಹಕ್ಕಿದೆ. ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನದ ಆಶಯ ಧಿಕ್ಕರಿಸುವ ಕೆಲಸ ನಡೆಯುತ್ತಿದೆ. ಬಲವಂತವಾಗಿ ಹೋರಾಟ ಹತ್ತಿಕ್ಕುವುದನ್ನು ಕೊಡಗು ದಸಂಸ ಸಹಿಸುವುದಿಲ್ಲ“ ಎಂದರು.

ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈ ನಿಲುವು ತೆಗೆದುಕೊಂಡಿದ್ದಾರಾದರೂ ಜನರ ಮಧ್ಯೆ ಇದು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್