
- ಮೂರು ದಿನಗಳ ಕಾಲ ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ
- ಗಮನ ಸೆಳೆದ ದಿವಂಗತ ಪುನೀತ್ ರಾಜ್‌ಕುಮಾರ್ ಮರಳು ಕಲಾಕೃತಿ
ಸಿರಿಧಾನ್ಯಗಳ ಮಹತ್ವ ಮತ್ತು ಬಳಕೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು. ಅಲ್ಲದೆ, ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಿರಿಧಾನ್ಯ ಮೇಳಗಳು ಪೂರಕವಾಗಿವೆ ಎಂದು ತೋಟಗಾರಿಕಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಕೋಲಾರ ಜಿಲ್ಲಾ ನ್ಯಾಯಾಲಯದ ಬಳಿಯ ನರ್ಸರಿಯಲ್ಲಿ ನಡೆಯುತ್ತಿರುವ ಸಾವಯವ ಮತ್ತು ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೂ ಮತ್ತು ತರಕಾರಿಗಳಿಂದ ಅಲಂಕರಿಸಲಾದ ಕಲಾಕೃತಿಗಳು, ದೇವರಾಧನೆ ಕುರಿತ ಮರಳಿನ ಕಲಾಕೃತಿ, ಹಳ್ಳಿ ಸೊಗಡಿನ ಮಾದರಿ ಮನೆಗಳು, ವಿದೇಶಿ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ಪುಷ್ಪ ಪ್ರದರ್ಶನ ಮೇಳದ ಗಮನ ಸೆಳೆದವು.
ರಂಗೋಲಿ, ಪುಷ್ಪಾಲಂಕೃತ ಗಣೇಶ, ಜಿರಾಫೆ ಹಾಗೂ ಸಂಗೀತ ವಾದ್ಯಗಳು, ಸಿರಿಧಾನ್ಯಗಳ ಮಳಿಗೆಗಳು, ಔಷಧಿಗಳ ಸಸ್ಯಗಳು, ಸುಗಂಧ ದ್ರವ್ಯ ಸಸಿಗಳು ಇನ್ನೂ ತರಹೇವಾರಿ ಸಸಿಗಳು ಮೇಳದಲ್ಲಿ ಪ್ರದರ್ಶನಕ್ಕಿದ್ದವು.
ಈ ಸುದ್ದಿ ಓದಿದ್ದೀರಾ? ಕೋಲಾರ | ಅಂಬೇಡ್ಕರ್ ಭವನ ನಿರ್ಮಾಣದ ವಿಚಾರದಲ್ಲಿ ರಾಜಕೀಯ ಬೇಡ: ಸಂಸದ ಮುನಿಸ್ವಾಮಿ
‘ಕಾಂತಾರ’ ಸಿನಿಮಾದಲ್ಲಿನ ದೈವಾರಾಧನೆ ಹಾಗೂ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಮರಳು ಕಲಾಕೃತಿ ಪ್ರದರ್ಶನ ಸಾರ್ವಜನಿಕರನ್ನು ಸೆಳೆದವು. ಕೃಷಿ ಸಂಬಂಧಿಸಿದ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ, ಕೃಷಿ ಪದ್ಧತಿ ಕುರಿತು ಮಾಹಿತಿ ನೀಡಲಾಯಿತು. 30 ವಸ್ತು ಪ್ರದರ್ಶನ ಮಳಿಗೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.