
- ʼಬಿಜೆಪಿ, ಕಾಂಗ್ರೆಸ್ ಪಕ್ಷಗಳು ಇದುವರೆಗೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲʼ
- ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣ: ಎಚ್ಡಿಕೆ
ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಹತ್ತು ದಿನಗಳ ಕಾಲ ಪಂಚರತ್ನ ಯಾತ್ರೆ ನಡೆಸಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿನ ಸೂಚನೆ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಂಚರತ್ನ ಯಾತ್ರೆಯ ಹಿನ್ನೆಲೆಯಲ್ಲಿ ತಾಲೂಕಿನ ನಂದಿಯಲ್ಲಿ ಗ್ರಾಮ ವಾಸ್ತವ್ಯದ ನಂತರ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಇದುವರೆಗೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ” ಎಂದು ಹರಿಹಾಯ್ದರು.
“ಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದು, ಆ ಮೂಲಕ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವ ರಾಜಕೀಯ ಪಕ್ಷಗಳಿಗೆ ಸಂದೇಶ ನೀಡಿದ್ದಾರೆ. ಯಾತ್ರೆ ಹೋದ ಕಡೆಯಲ್ಲಿ ಮಹಿಳೆಯರು, ರೈತರು, ಶಾಲಾ ಮಕ್ಕಳು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡಲಾಗುವುದು” ಎಂದು ಭರವಸೆ ನೀಡಿದರು.
"ಜಿಲ್ಲೆಯಲ್ಲಿ ದಲಿತ, ರೈತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿಲ್ಲ. ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವುದು ಒಬ್ಬರಾದರೆ, ದಾಖಲೆ ನೀಡುವುದು ಇನ್ನೊಬ್ಬರ ಹೆಸರಿಗೆ. ಈಗ ಸಚಿವರು ಗ್ರಾಮ ವಾಸ್ತವ್ಯ ಮಾಡಲು ಹೋಗಿದ್ದಾರೆ” ಎಂದು ಪರೋಕ್ಷವಾಗಿ ಸಚಿವ ಆರ್. ಅಶೋಕ್ ಅವರನ್ನು ಕುಟುಕಿದರು.
ಈ ಸುದ್ದಿ ಓದಿದ್ದೀರಾ? ಹರಿಯಾಣ ಪಂಚಾಯಿತಿ ಫಲಿತಾಂಶ; ಬಿಜೆಪಿಗೆ ಭಾರೀ ಹಿನ್ನೆಡೆ, 100 ಸ್ಥಾನಗಳ ಪೈಕಿ 22ಕ್ಕೆ ತೃಪ್ತಿ
“ಎತ್ತಿನಹೊಳೆ ಯೋಜನೆಯನ್ನು ಶೀಘ್ರದಲೇ ಜಾರಿಗೆ ತರಲಾಗುವುದು ಎಂದು ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಾಗಿದೆ. 15 ವರ್ಷ ಕಳೆದರೂ ಯೋಜನೆಯ ಸುಳಿವೇ ಇಲ್ಲ. ಮಾತು ಬಂದರೆ ಅನುದಾನದ ಕೊರತೆ ಹೇಳಿ ದಿನಗಳನ್ನು ತಳ್ಳುವ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿದೆ” ಎಂದು ಟೀಕಿಸಿದರು.