ಕುಶಾಲನಗರ | ಸರ್ಕಾರಿ ಲೋನ್ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ; ಮಹಿಳೆಯರಿಬ್ಬರ ಬಂಧನ

kodagu
  • ಸುಮಾರು 12 ಲಕ್ಷ ಹಣ ಸಂಗ್ರಹಿಸಿರುವ ಬಗ್ಗೆ ಆರೋಪ
  • ವಾದಾ ಪಟ್ಟಣದಲ್ಲಿ ಹಣ ವಸೂಲಿ ಮಾಡುವಾಗ ಸಿಕ್ಕಿಬಿದ್ದ ಮಹಿಳೆಯರು

ಕೊಡಗು ಜಿಲ್ಲೆಯ ಕುಶಾಲನಗರ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಡ್ಡಿ ರಹಿತ ಲೋನ್ ಕೊಡಿಸುವುದಾಗಿ ಜನರನ್ನು ವಂಚಿಸಿ ಹಣ ಪಡೆಯುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರು ನೀಡಿದ ದೂರಿನನ್ವಯ ಪೊಲೀಸರು ಬಂಧಿಸಿದ್ದಾರೆ.

ಗೋಣಿಕೊಪ್ಪದ ಕುಸುಮಾವತಿ ಹಾಗೂ ಕೂಡ್ಲೂರಿನ ಜಮುನಾ ಬಂಧಿತ ಮಹಿಳೆಯರು. 'ಸರ್ಕಾರದಿಂದ ಬಡ್ಡಿ ರಹಿತವಾಗಿ ಸಾಲ ಕೊಡಿಸುತ್ತೇವೆ' ಎಂದು ಹೇಳಿಕೊಂಡು ಕೊಡಗು ಜಿಲ್ಲಾದ್ಯಂತ ತಿರುಗಿ ತಲಾ ಒಬ್ಬೊಬ್ಬರಿಂದ ಒಂದೊಂದು ಸಾವಿರ ಹಣ ವಸೂಲಿ ಮಾಡಿ ವಂಚಿಸುತ್ತಿದ್ದರು.

ಮೂವತ್ತು ಮಹಿಳೆಯರ ಒಂದೊಂದು ಗುಂಪು ಮಾಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಸಂಗ್ರಹವಾದ ಹಣವನ್ನು ಕುಶಾಲನಗರದ ಕೆನರಾ ಬ್ಯಾಂಕ್‌ನಲ್ಲಿ ಜಮಾ ಮಾಡುವುದಾಗಿ ಮಹಿಳೆಯರನ್ನು ನಂಬಿಸುತ್ತಿದ್ದರು. ಅಲ್ಪಸಂಖ್ಯಾತರಿಗೆ ಅಲ್ಪಸಂಖ್ಯಾತರ ಘಟಕದಿಂದ ಸಾಲ ಕೊಡಿಸುವುದಾಗಿ, ಹಿಂದುಳಿದ ವರ್ಗದವರಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಆಯಾಯ ಸಮುದಾಯಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಬಡ್ಡಿ ರಹಿತ ಸಾಲ ಕೊಡಿಸುತ್ತೇವೆ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದರು. 

ಈ ಸುದ್ದಿ ಓದಿದ್ದೀರಾ?: ಬೆಳಗಾವಿ | ಎರಡೂವರೆ ವರ್ಷದಲ್ಲಿ 41 ಬಾಲ್ಯವಿವಾಹ ಪ್ರಕರಣ ದಾಖಲು

ಕುಸುಮಾವತಿ ತಾನು ಪೊಲೀಸ್ ಇಲಾಖೆಯಲ್ಲಿ ರಾತ್ರಿ ಪಾಳಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಒಂದೊಂದು ಗ್ರಾಮದಲ್ಲಿ ಒಂದೊಂದು ಹುದ್ದೆ ಹಾಗೂ ಹೆಸರು ಹೇಳುತ್ತಿದ್ದಳು ಎಂದು ತಿಳಿದುಬಂದಿದೆ. ಎಲ್ಲ ಗ್ರಾಮಗಳಲ್ಲಿ ತೆರಳಿ ಕುಸುಮಾವತಿ ಹಣ ವಸೂಲಿ ಮಾಡಿದರೆ ಜಮುನಾ ಬಂದ ಹಣವನ್ನು ಸಂಗ್ರಹಿಸುತ್ತಿದ್ದಳು. ಮಂಗಳೂರಿನ ನಾಗರಾಜ್ ಶೆಟ್ಟಿ ಎಂಬವನು ಈ ದಂಧೆಯ ಹಿಂದಿನ ರೂವಾರಿಯಾಗಿದ್ದಾನೆ. ನಾಗರಾಜ್ ಶೆಟ್ಟಿ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಸಾಲ ಕೊಡಿಸುವುದಾಗಿ ಕುಸುಮಾವತಿ ಮಹಿಳೆಯರನ್ನು ನಂಬಿಸುತ್ತಿದ್ದಳು.  

“ಹಿಂದುಳಿಗೆ ವರ್ಗದವರಿಗೆ ಒಂದು ಲಕ್ಷ ರೂಪಾಯಿ ಸಬ್ಸಿಡಿ, ಅಲ್ಪಸಂಖ್ಯಾತರಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಒಂದೂವರೆ ಲಕ್ಷ ರೂಪಾಯಿ ಸಬ್ಸಿಡಿ ಸಿಗುತ್ತದೆ. ಒಟ್ಟು ಎಲ್ಲರಿಗೂ ತಲಾ ಮೂರು ಲಕ್ಷ ರೂಪಾಯಿ ಲೋನ್ ಸಿಗುತ್ತದೆ. ನಾಲ್ಕು ವರ್ಷಗಳಲ್ಲಿ  ಸಾಲ ತೀರಿಸಬಹುದು ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದಳು” ಎಂದು ಮೋಸ ಹೋದ ಮಹಿಳೆಯರು ಆರೋಪಿಸಿದ್ದಾರೆ. 

ಕೊಡಗಿನ ವಾದಾಪಟ್ಟಣದಲ್ಲಿ 57 ಸಾವಿರ ರೂಪಾಯಿ, ಗೊಂದಿಬಸವನಹಳ್ಳಿಯಲ್ಲಿ ಒಂದು ಲಕ್ಷ ರೂಪಾಯಿ, ಕೊಡಗರಹಳ್ಳಿಯಲ್ಲಿ 69 ಸಾವಿರ ರೂಪಾಯಿ ಹಾಗೂ ಕುಶಾಲನಗರದಲ್ಲಿ ಸುಮಾರು 12 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಂಗಳವಾರ ವಾದಾಪಟ್ಟಣದಲ್ಲಿ ಹಣ ವಸೂಲಿ ಮಾಡುತ್ತಿರುವಾಗ ಅಲ್ಲಿಗೆ ಬಂದ ಮಹಿಳೆಯರು ಕುಸುಮಾವತಿ ಹಾಗೂ ಜಮುನಾಳನ್ನು ಹಿಡಿದು ದಿಗ್ಭಂಧನ ಹೇರಿದ್ದಾರೆ. ನಂತರ ಕುಶಾಲನಗರ ಪೊಲೀಸ್ ಠಾಣೆಗೆ ಹೋಗಿ ಮಹಿಳೆಯರನ್ನು ಬಂಧಿಸುವಂತೆ ದೂರು ನೀಡಿದ್ದಾರೆ. ಮಹಿಳೆಯರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180