ಕಂಪನಿ ಕೆಲಸಕ್ಕೆ ಗುಡ್ ಬೈ, ಕೃಷಿಗೆ ಹಾಯ್‌ ಹೇಳಿದ ಯುವಕ

Papaya

ನಗರದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವ ಬದಲು ಸರ್ಕಾರಿ ಯೋಜನೆಗಳ ಲಾಭ ಪಡೆದು ಸ್ವಂತ ಹೊಲದಲ್ಲಿ ಕೃಷಿ ಮಾಡುವುದೇ ಲೇಸು ಎನ್ನುವುದು ಯುವ ರೈತನ ಅಭಿಲಾಷೆ.

ಎಂಕಾಂ ಮುಗಿಸಿ, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೀದರ್‌ ಮೂಲದ ಸಂತೋಷ್ ರೆಡ್ಡಿ, ಎಸಿ ಕಚೇರಿಯ ಕೆಲಸಕ್ಕೆ ಗುಡ್ ಬೈ ಹೇಳಿ, ಕೃಷಿ ಜೀವನಕ್ಕೆ ಸೈ ಎಂದಿದ್ದಾರೆ. ಪಪ್ಪಾಯಿ ಬೆಳೆದು, ಹೈನುಗಾರಿಕೆ ಮಾಡಿ, ಕೈ ತುಂಬ ಸಂಪಾದಿಸಿ, ಜಬರ್‌ದಸ್ತ್‌ ಜೀವನ ನಡೆಸುವ ಉತ್ಸಾಹದಲ್ಲಿದ್ದಾರೆ.

ಹುಟ್ಟೂರು ಔರಾದ್‌ ತಾಲೂಕಿನ ನಾಗೂರ (ಬಿ) ಗ್ರಾಮದ ಸಂತೋಷ್‌, ಸುಧಾರಿತ ಕೃಷಿ ಕ್ರಮಗಳನ್ನು ಅನುಸರಿಸಿಕೊಂಡು, ಬಂಗಾರದ ಬೆಳೆ ತೆಗೆದು ಬಂಪರ್‌ ಲಾಭ ಗಳಿಸುವ ಕನಸು ಕಟ್ಟಿಕೊಂಡಿದ್ದಾರೆ. ಕೃಷಿ ಹೇಗೆ ಕೈ ಹಿಡಿಯಿತೆಂಬ ಬಗ್ಗೆ ಅವರ ಮಾತಲ್ಲೇ ತಿಳಿಯೋಣ ಬನ್ನಿ-

ಎಂ.ಕಾಂ. ಓದಿದ ನಾನು, ಎಲ್ಲರಂತೆ ಊರು ಬಿಟ್ಟು ದೂರದ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲ ವರ್ಷ ಕೆಲಸ ಮಾಡಿದೆ. ಅಲ್ಲಿ ಸಿಗುತ್ತಿದ್ದ 20-25 ಸಾವಿರ ರೂಪಾಯಿ ಸಂಬಳ ಸಾಲುತ್ತಿರಲಿಲ್ಲ. ಮಾಡುತ್ತಿದ್ದ ಕೆಲಸವೂ ಹಿಡಿಸಲಿಲ್ಲ. ಹೀಗಾಗಿ ಕೆಲಸ ಬಿಟ್ಟು ಊರಿಗೆ ಬಂದು ಸ್ವಂತ ಭೂಮಿಯಲ್ಲಿ ವಿಭಿನ್ನ ರೀತಿಯ ಕೃಷಿ ಮಾಡಲು ನಿರ್ಧರಿಸಿದೆ. ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯೊಂದಿಗೆ ಕೃಷಿ ಆರಂಭಿಸಿದ್ದೇನೆ.

ಆರಂಭದಲ್ಲಿ ಸಾಂಪ್ರಾದಾಯಿಕ ಕೃಷಿ ಪದ್ಧತಿ ಅವಲಂಭಿಸಿದ ಇತರ ಕೃಷಿಕರಂತೆ ಜೋಳ, ಸೋಯಾಬೀನ್, ತೊಗರಿ, ಹೆಸರು, ಉದ್ದು ಬೆಳೆದೆ. ಇವುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲು ಸಾಧ್ಯವಾಗಲಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನ ಪಡೆದು ಸುಧಾರಿತ ಕೃಷಿ ಅಳವಡಿಸಿಕೊಳ್ಳುವ ಮೂಲಕ ಮತ್ತೊಂದು ಕೃಷಿ ಕ್ಷೇತ್ರದ ಹೊಸ ಅಧ್ಯಾಯ ಆರಂಭಿಸಲು ಅಣಿಯಾದೆ.

10 ಎಕರೆ ಜಮೀನಿನ ಪೈಕಿ ಪಾಳು ಬಿದ್ದ ಮೂರು ಎಕರೆಯಷ್ಟು ಜಮೀನನಲ್ಲಿ ಕಲ್ಲು, ಗಿಡ-ಗಂಟಿ ತೆಗೆದು ಉಳುಮೆಗೆ ಸಿದ್ಧಪಡಿಸಿಕೊಂಡೆ. ಈಗಾಗಲೇ ಇದ್ದ ಬಾವಿ, ಕೊಳವೆಬಾವಿಗಳು ಅಂತರ್ಜಲ ಮಟ್ಟ ಕುಸಿದು ಡಿಸೆಂಬರ್- ಜನವರಿ ತಿಂಗಳಲ್ಲೇ ಖಾಲಿಯಾಗುತ್ತಿದ್ದವು. ಇವನ್ನು ನಂಬಿ ತೋಟಗಾರಿಕೆ ಬೆಳೆ ಬೆಳೆಯುವುದು ಅಸಾಧ್ಯವೆಂಬುದನ್ನು ಅರಿತು, ಈ ಸಮಸ್ಯೆಯ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಸರ್ಕಾರದ ಯೋಜನೆಯಡಿ 'ಸಮುದಾಯ ಕೆರೆ' ನಿರ್ಮಿಸಿಕೊಳ್ಳಲು 4 ಲಕ್ಷ ರೂಪಾಯಿ ಸಹಾಯಧನ ನೀಡಿದರು. ಇದರೊಂದಿಗೆ ನನ್ನ ಹಣವೊಂದಷ್ಟು ಸೇರಿಸಿ ಸಮುದಾಯ ಕೆರೆ ನಿರ್ಮಿಸಿಕೊಂಡಿದ್ದೇನೆ.

Image
ಸಂತೋಷ್‌ ಜಮೀನಿನಲ್ಲಿರುವ ಸಮುದಾಯ ಕೆರೆ
ಸಂತೋಷ್‌ ಜಮೀನಿನಲ್ಲಿರುವ ಸಮುದಾಯ ಕೆರೆ

35 ಗುಂಟೆ ಜಾಗದಲ್ಲಿ 250X125 ಅಳತೆಯ, 23 ಅಡಿ ಆಳವಿರುವ ಸಮುದಾಯ ಕೆರೆ ನಿರ್ಮಿಸಿದ್ದು, ಇದರಲ್ಲಿ 1.25 ಕೋಟಿ ಲೀಟರ್‌ನಷ್ಟು ನೀರು ಶೇಖರಣೆ ಮಾಡಬಹುದಾಗಿದೆ. ಇದರಲ್ಲಿ ಹೊಲದಲ್ಲಿರುವ ಬಾವಿ, ಬೋರ್‌ವೆಲ್‌ನ ನೀರು, ಮಳೆಗಾಲದಲ್ಲಿ ಹಳ್ಳದ ನೀರು, ಮಳೆ ನೀರನ್ನೂ ಶೇಖರಿಸಬಹುದು. ಇದರಿಂದ ಬೇಸಿಗೆಯಲ್ಲಿ ಹಾಗೂ ಬೆಳೆಯ ಅನುಕೂಲತೆಗೆ ಅನುಗುಣವಾಗಿ ನೀರು ಬಳಸಬಹುದು. ಸದ್ಯ ಇದೇ ನೀರನ್ನು ಮೂರು ಎಕರೆ ಪಪ್ಪಾಯಿ ಗಿಡಗಳಿಗೆ ಬಳಸುತ್ತಿದ್ದೇನೆ. ಒಟ್ಟಿನಲ್ಲಿ ಕೃಷಿ ಹೊಂಡದಿಂದ ನೀರಿನ ಸಮಸ್ಯೆ ಎದುರಾಗುವುದಿಲ್ಲ.

ಬಸವಕಲ್ಯಾಣ ತಾಲೂಕಿನ ಜಾಮನಗರದಿಂದ ತಲಾ 15 ರೂಪಾಯಿ ದರದಲ್ಲಿ 2500 ಸಸಿಗಳನ್ನು ಖರೀದಿಸಿ, 3 ಎಕರೆಯಲ್ಲಿ ಜುಲೈ ಮೊದಲ ವಾರ ನಾಟಿ ಮಾಡಿದ್ದೇನೆ. ಬರುವ ಏಪ್ರಿಲ್‌ ವೇಳೆಗೆ ಹಣ್ಣು ಕಟಾವಿಗೆ ಬರುತ್ತದೆ. ಇಲ್ಲಿವರೆಗೆ ಎರಡೂವರೆ ಲಕ್ಷ ರೂಪಾಯಿ ಬೆಳೆಗೆ ವೆಚ್ಚ ಮಾಡಿದ್ದೇನೆ. ಪಪ್ಪಾಯಿ ಗಿಡಗಳು ಉತ್ತಮವಾಗಿ ಬೆಳೆದಿದ್ದು, ಸೋಂಪಾಗಿ ಕಾಯಿಗಟ್ಟಿವೆ. ಉತ್ತಮ ಇಳುವರಿಯ ನಿರೀಕ್ಷೆ ಇದ್ದು, ಅಧಿಕ ಆದಾಯ ಬರುವ ನಿರೀಕ್ಷೆ ಇದೆ. 

Image
ಯುವ ರೈತ ಸಂತೋಷ್‌ ಜಮೀನಿನಲ್ಲಿ ಬೆಳೆದಿರುವ ಪಪ್ಪಾಯ ಬೆಳೆ
ಯುವ ರೈತ ಸಂತೋಷ್‌ ಜಮೀನಿನಲ್ಲಿ ಬೆಳೆದ ಪಪ್ಪಾಯಿ 

ಬೆಳೆಗಳಿಗೆ ಕೀಟಬಾಧೆ, ಹೆಚ್ಚಿನ ಇಳುವರಿಗಾಗಿ ಬಳಸುವ ಕೀಟನಾಶಕಗಳಿಂದ ಆಹಾರ ಪದಾರ್ಥಗಳೆಲ್ಲ ವಿಷಪೂರಿತವಾಗಿವೆ. ಈ ಕಾರಣಕ್ಕೆ  ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ಇದರಿಂದ ಆದಾಯವೂ ಹೆಚ್ಚಲಿದೆ. ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಆಗಾಗ್ಗೆ ತೋಟಕ್ಕೆ ಭೇಟಿ ನೀಡಿ ಬಂದು ಸಾವಯವ ಕೃಷಿ ಕುರಿತು ಸಲಹೆ ನೀಡುತ್ತಾರೆ.

ಸ್ನಾತಕೋತ್ತರ ಪದವೀಧರರಾಗಿ ನಗರ, ಪಟ್ಟಣಗಳಿಗೆ ವಲಸೆ ಹೋಗಿ, ಕಂಪನಿಯ ಮಾಲೀಕರು ಹೇಳಿದಂತೆ ದುಡಿಯುವ ಬದಲು ಸ್ವಂತ ಹೊಲದಲ್ಲಿ ಸರ್ಕಾರಿ ಯೋಜನೆಗಳ ಲಾಭ ಪಡೆದು ಕೃಷಿ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು. ಇನ್ನೊಬ್ಬರ ಹಂಗಿಲ್ಲದೆ ಬದುಕು ಕಟ್ಟಿಕೊಳ್ಳಬಹುದು. ಇದಕ್ಕಿಂತ ಸುಖಿ ಜೀವನ ಬೇರೇನಿದೆ ಎಂದು ಈ ದಿನ.ಕಾಮ್ನೊಂದಿಗೆ ಸಂತೋಷ ರೆಡ್ಡಿ ತಮ್ಮ ಕೃಷಿಕ ಜೀವನದ ಬಗ್ಗೆ ಹೆಮ್ಮೆ ಪಡುತ್ತಾರೆ.

ಸುಧಾರಿತ ಕೃಷಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಯ ಜೊತೆಗೆ ಹೈನುಗಾರಿಕೆ ಮಾಡಲು ಯೋಜನೆ ರೂಪಿಸಿದ್ದಾರೆ. ಕುರಿ, ಆಡು, ಕೋಳಿ ಸಾಕಾಣಿಕೆ, ಮೀನುಗಾರಿಕೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. 

ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಕೃಷಿ ಇಲಾಖೆ, ಸರಕಾರದ ಸೌಲಭ್ಯಗಳ ಬಳಕೆ ಕುರಿತು ಸೂಕ್ತ ಮಾಹಿತಿ ನೀಡುವುದು ಅವಶ್ಯಕ. ಯುವ ರೈತರಿಗೆ ಪ್ರೇರಣೆಯಾಗುವಂಥ ಯೋಜನೆಗಳನ್ನು ಸರ್ಕಾರ ಹೆಚ್ಚೆಚ್ಚು ಅನುಷ್ಠಾನಕ್ಕೆ ತಂದರೆ ಯುವಕರಿಗೆ ಕೃಷಿ ಮೇಲೆ ಆಸಕ್ತಿ ಮೂಡುತ್ತದೆ ಎಂದು ಸಂತೋಷ್ ರೆಡ್ಡಿ ಅಭಿಪ್ರಾಯಪಡುತ್ತಾರೆ.

ನಿಮಗೆ ಏನು ಅನ್ನಿಸ್ತು?
3 ವೋಟ್