ಮಂಡ್ಯ | ಬೆಕ್ಕಿಗೆ ದೇವಾಲಯ ಕಟ್ಟಿಸಿದ ಗ್ರಾಮಸ್ಥರು: ಪ್ರತಿ ಮಂಗಳವಾರ ವಿಶೇಷ ಪೂಜೆ

Mandya Temple
  • ಬೆಕ್ಕಿನ ಸಮಾಧಿಗೆ ದೇವಸ್ಥಾನ ಕಟ್ಟಿ, ಬೆಕ್ಕಿನ ಮಂಗಮ್ಮ ಎಂದು ಹೆಸರಿಟ್ಟ ಗ್ರಾಮಸ್ಥರು
  • ಬೆಕ್ಕಳಲೆ ಗ್ರಾಮವಲ್ಲದೆ ಸುತ್ತಲಿನ ಗ್ರಾಮದ ಜನರಿಗೂ ಕುಲ ದೇವತೆ

ಅಪಶಕುನದ ಸಂಕೇತ, ಅದು ದಾರಿಯಲ್ಲಿ ಹೋಗುವಾಗ ಅಡ್ಡ ಬಂದರೆ ಕೆಡುಕು ಗ್ಯಾರಂಟಿ, ಎನ್ನುವ ಮೌಢ್ಯಕ್ಕೆ ಗುರಿಯಾಗಿರುವ ಪ್ರಾಣಿ ಬೆಕ್ಕು. ಆದರೆ, ಇದೇ ಬೆಕ್ಕಿಗೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮಸ್ಥರು ದೇವಸ್ಥಾನ ಕಟ್ಟಿಸಿ, ನಿತ್ಯ ಪೂಜೆ ಮಾಡುತ್ತಾ ಬಂದಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಬೆಕ್ಕೆಳಲೆ ಗ್ರಾಮದಲ್ಲಿ ಬೆಕ್ಕಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು,  ಹಲವು ವರ್ಷಗಳ ಹಿಂದೆ ಸಮಾಧಿ ಮಾಡಲಾದ ಬೆಕ್ಕಿನ ಗದ್ದುಗೆಗೆ ದೇವಾಲಯ ನಿರ್ಮಿಸಿ ಬೆಕ್ಕಿನ ಮಂಗಮ್ಮ ಎಂದು ಹೆಸರಿಡಲಾಗಿದೆ. ದೇವಾಲಯಕ್ಕೆ ಪ್ರತಿ ಮಂಗಳವಾರ ವಿಶೇಷ ಪೂಜೆ ಸಹ ಸಲ್ಲಿಸಲಾಗುತ್ತಿದೆ. 

ಬೆಕ್ಕಿಗೆ ಪೂಜ್ಯ ಸ್ಥಾನ ನೀಡಿ ದೇವಸ್ಥಾನ ಕಟ್ಟಿದ್ದರಿಂದಾಗಿಯೇ ಗ್ರಾಮಕ್ಕೆ ಬೆಕ್ಕಳಲೆ ಎನ್ನುವ ಹೆಸರು ಬಂದಿದೆ. ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಯಿಟ್ಟು, ಅದನ್ನು ಪ್ರಸಾದವಾಗಿ ಸ್ವೀಕರಿಸುವ ಸಂಪ್ರದಾಯವನ್ನೂ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಬೆಕ್ಕಿನ ಮಂಗಮ್ಮನ ಜಾತ್ರೆಯನ್ನೂ ನಡೆಸುತ್ತಿದ್ದಾರೆ. 

ತಮ್ಮ ಪೂರ್ವಜರ ಕಾಲದಿಂದಲೂ ಗ್ರಾಮಸ್ಥರು ಈ ಸಂಪ್ರದಾಯ ಆಚರಿಸಿಕೊಂಡು ಬಂದಿದ್ದಾರೆ. ಮಂಗಮ್ಮ ದೇವಿ ಬೆಕ್ಕಿನ ರೂಪದಲ್ಲಿ ಬಂದಿದ್ದಳು ಅನ್ನುವ ನಂಬಿಕೆ ಜನರಿಗಿದೆ. ಬೆಕ್ಕನ್ನು ದೇವರೆಂದುಕೊಂಡಿರುವ ಜನರು ಪ್ರತಿದಿನ ಕೆಲಸಕ್ಕೆ ಹೋಗುವ ಮುನ್ನ ಬೆಕ್ಕಿನ ದರ್ಶನ ಪಡೆದು ತೆರಳುತ್ತಾರೆ.

ಈ ಸುದ್ದಿ ಓದಿದ್ದೀರಾ?; ಭಾರತಕ್ಕೆ ʼಬುಲ್ಡೋಜರ್ ಪ್ರಭುತ್ವʼ ವಿರೋಧಿಸದ ರಬ್ಬರ್‌ ಸ್ಟಾಂಪ್ ರಾಷ್ಟ್ರಪತಿ ಬೇಡ 

ಗ್ರಾಮದಲ್ಲಿ ಬೆಕ್ಕಿಗೆ ಹೊಡೆಯುವುದು, ಸಾಯಿಸುವುದು ನಿಷೇಧ. ಯಾರಾದರೂ ಬೆಕ್ಕನ್ನು ಹಿಂಸೆ ಮಾಡಿದರೆ, ಅವರು ತೊಂದರೆ ಅನುಭವಿಸುತ್ತಾರೆ ಅನ್ನುವ ನಂಬಿಕೆ ಇದೆ. ಅಂತವರನ್ನೂ ಗ್ರಾಮದಿಂದ ಬಹಿಷ್ಕಾರ ಹಾಕುತ್ತಾರೆ. ಗ್ರಾಮದ ಯಾರದ್ದೇ ಮನೆಯಲ್ಲಿ ಬೆಕ್ಕು ಸಾವನ್ನಪ್ಪಿದರೆ ಮನುಷ್ಯರಂತೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಬೆಕ್ಕಿನ ಮಂಗಮ್ಮ ಕೇವಲ ಬೆಕ್ಕಳಲೆ ಗ್ರಾಮದ ಜನರಿಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕೂಡ ಕುಲ ದೇವತೆಯಾಗಿದ್ದಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆರೋಗ್ಯ ಸಮಸ್ಯೆ, ವೈವಾಹಿಕ ಸಮಸ್ಯೆ ಹೀಗೆ ಯಾವುದೇ ಸಮಸ್ಯೆಯಿದ್ದರೆ ಹರಕೆ ಹೊತ್ತು ಭಕ್ತಿಯಿಂದ ಬೇಡಿದರೆ ಪರಿಹರಿಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ.

ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ, ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ದೂರದ ಊರುಗಳಿಂದ ಬೆಕ್ಕಳಲೆಗೆ ಭಕ್ತರು ಆಗಮಿಸುತ್ತಾರೆ. ಜಾತಿ ಧರ್ಮ ಯಾವುದೇ ಬೇಧವಿಲ್ಲದೆ ಎಲ್ಲಾರೂ ಒಟ್ಟಾಗಿ ಪೂಜೆ ಮಾಡುವ ವಿಶೇಷ ದೇವಸ್ಥಾನ ಇದಾಗಿದೆ.

ಮಾಸ್ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್