ಮಡಿಕೇರಿ | ‘ಮಾಣಿಕ್ಯ ಕೆರೆ’ ಅವೈಜ್ಞಾನಿಕ ಕಾಮಗಾರಿ: ಗ್ರಾಮ ಸಭೆಯಲ್ಲಿ ತಾರಕಕ್ಕೇರಿದ ವಾಗ್ವಾದ

kodagu
  • ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ
  • ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಸ್ಪಷ್ಟನೆ

ಕಡಗದಾಳು ಗ್ರಾಮದಲ್ಲಿರುವ ಮಾಣಿಕ್ಯ ಕೆರೆಯ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂಬ ವಿಚಾರದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರು ಹಾಗೂ ಗ್ರಾಮಸ್ಥರು ನಡುವೆ ವಾಗ್ವದ ನಡೆದಿದೆ.

ಗ್ರಾಮಗಳ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೇಂದ್ರದ 'ಅಮೃತ ಸರೋವರ ಯೋಜನೆ'ಯಡಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಮಾಣಿಕ್ಯ ಕೆರೆಯನ್ನು ಆಯ್ಕೆ ಮಾಡಲಾಗಿತ್ತು. ಕಾಮಗಾರಿ ಪ್ರಾರಂಭದಿಂದಲೂ ಗ್ರಾಮಸ್ಥರಿಂದ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. 

ಕಡದಾಳು ಗ್ರಾಮದ ‘ಮಾಣಿಕ್ಯ ಕೆರೆ’ಯ ಕಾಮಗಾರಿಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡುತ್ತಿಲ್ಲ. ಕಳಪೆ ಗುಣಮಟ್ಟದಲ್ಲಿ ಪುನಶ್ಚೇತನ ಕೆಲಸಗಳು ನಡೆಯುತ್ತಿವೆ ಎಂದು ಗ್ರಾಮಸ್ಥ ಮಾದೇಟಿರ ತಿಮ್ಮಯ್ಯ ಸೇರಿ ಕೆಲ ಗ್ರಾಮಸ್ಥರು ಆರೋಪಿಸಿದ್ದರು. 

ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾದೇಟಿರ ತಿಮ್ಮಯ್ಯ, "ಮಾಣಿಕ್ಯ ಕೆರೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದ್ದರು. ಆದರೂ, ಗ್ರಾಮ ಪಂಚಾಯತ್ ಕಾಮಗಾರಿಯನ್ನು ಮುಂದುವರಿಸಿದೆ. 

ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಮಾದೇಟಿಗರ ತಿಮ್ಮಯ್ಯ ಮಾಡಿದ ಆರೋಪಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಟಿ ಜಯಣ್ಣ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ. ಯೋಜನೆಯ ಬಗೆಗಿರುವ ಎಲ್ಲ ಅನುಮಾನಗಳನ್ನು ಪವರ್ ಪಾಯಿಂಟ್ ಪ್ರೆಸೆನ್ಟೇಷನ್ ಮೂಲಕ ಸ್ಪಷ್ಟವಾಗಿ ಹೇಳಲು ಯತ್ನಿಸಿದ್ದಾರೆ. ಈ ವೇಳೆ, ಬಿ.ಟಿ ಜಯಣ್ಣ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ.

ಈ ಸುದ್ದಿ ಓದಿದ್ದೀರಾ?: ಮಂಡ್ಯ | ಕೇಂದ್ರೀಯ ವಿದ್ಯಾಲಯಕ್ಕೆ ಖಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ ಭರವಸೆ

"ಸರ್ಕಾರದ ನಿಯಮಗಳಿಗೆ ಅನುಗುಣವಾಗಿಯೇನ ಕಾಮಗಾರಿ ನಡೆಸುತ್ತಿದ್ದೇವೆ. ಪ್ರವಾಸೋದ್ಯಮದ ಭಾಗವಾಗಿ ಈ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಗ್ರಾಮಕ್ಕೆ ತುಂಬಾ ಅನುಕೂಲವಿದೆ. ಎಲ್ಲರೂ ಗ್ರಾಮದ ಅಭ್ಯುದಯಕ್ಕೆ ಸಹಕರಿಸಬೇಕು" ಎಂದು ಬಿ.ಟಿ ಜಯಣ್ಣ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

"ಮಾಣಿಕ್ಯ ಕೆರೆ ಕಾಮಗಾರಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಿಲ್ಲ. ಕಾಮಗಾರಿ ನಡೆಸುವ ಮೊದಲು ಗ್ರಾಮ ಸಭೆ ಕರೆದು ಗ್ರಾಮಸ್ಥರಲ್ಲಿ ಚರ್ಚಿಸಬೇಕು. ವೈಜ್ಞಾನಿಕವಾಗಿ ಹೂಳು ತೆಗೆದು ನಂತರ ಕಾಮಗಾರಿ ನಡೆಸಬೇಕು. ಮಳೆಗಾಲದಲ್ಲಿ ಪೈಪ್ ಮೂಲಕ ನೀರು ಹೊರತೆಗೆದು ಕೆರೆಯ ಅರ್ಧದಿಂದ ಕಲ್ಲು ಕಟ್ಟಲಾಗುತ್ತಿದೆ. ಹೀಗೆ ಮಳೆಗಾಲದಲ್ಲಿ ತರಾತುರಿಯಾಗಿ ಕಾಮಗಾರಿ ನಡೆಸುವ ಅವಶ್ಯಕತೆ ಏನಿತ್ತು? ಇದನ್ನು ಅವೈಜ್ಞಾನಿಕ ಅನ್ನದೆ ಏನೆನ್ನುತ್ತಾರೆ?" ಎಂದು ಮಾದೇಟಿಗರ ತಿಮ್ಮಯ್ಯ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ತಿಮ್ಮಯ್ಯ ಅವರ ಮಾತಿಗೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್