
ಕಬ್ಬು, ಹಾಲು ಹಾಗೂ ಭತ್ತದ ಬೆಲೆ ಏರಿಕೆ ಮಾಡಬೇಕು ಹಾಗೂ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಮಂಡ್ಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕರ್ನಾಟಕ ಜನಶಕ್ತಿ ಸಂಘಟನೆ ಬೆಂಬಲ ನೀಡಿದೆ.
ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, "ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತ ವಿರೋಧಿಯಾಗಿವೆ. ಆಳುವವರು ದೇಶಕ್ಕೆ ಅನ್ನ ನೀಡುವ ಅನ್ನದಾತರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಅವರಿಗೆ ಹೋರಾಟದ ಮೂಲಕವೇ ಉತ್ತರ ನೀಡಬೇಕು" ಎಂದರು.
"ಚಾಯ್ವಾಲನೆಂದು ಹೇಳಿಕೊಳ್ಳುವ ಪ್ರಧಾನ ಮಂತ್ರಿಗಳು ಐಷಾರಾಮಿ ಬದುಕು ನಡೆಸುತ್ತಿದ್ದಾರೆ. ಅವರಿಗೆ ಸಾಮಾನ್ಯ ರೈತನ ಕಷ್ಟದ ಅರಿವಾಗುತ್ತಿಲ್ಲ. ಬಂಡವಾಳಿಗರ ಪರವಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ರೈತ ವಿರೋಧಿ ನೀತಿಗಳನ್ನು ರೂಪಿಸುತ್ತಿದೆ. ರಾಜ್ಯ ಸರ್ಕಾರ ಇನ್ನೂ ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿಲ್ಲ" ಎಂದು ಕಿಡಿಕಾರಿದರು.
ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, "ರೈತರು ತಾವು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು ನಿರಂತರ ನಡೆಸುತ್ತಿದ್ದಾರೆ. ಆದರೂ, ಯಾವ ಸರ್ಕಾರಗಳೂ ಕೂಡ ರೈತನ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಈ ಸರ್ಕಾರಗಳಿಂದ ರೈತರಷ್ಟೇ ಅಲ್ಲ, ಸಾಮಾನ್ಯ ಜನರು ಕೂಡ ತತ್ತರಿಸಿ ಹೋಗಿದ್ದಾರೆ" ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿಯ ಶಿಲ್ಪ, ಜ್ಯೋತಿ, ಸೌಮ್ಯ, ಅಂಜಲಿ, ನಾಗರಾಜು ಸೇರಿದಂತೆ ಹಲವು ಭಾಗಿಯಾಗಿ ಬೆಂಬಲ ನೀಡಿದ್ದಾರೆ.