
- ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೀಡಿರುವ ಗಡುವು ಮುಗಿದ ನಂತರ ಸಿಹಿ ಸುದ್ದಿ ಹೇಳುವೆ: ಸಿಎಂ
- ಕೋಚನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ; ಕೆಐಎಡಿಬಿ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ರೈತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದಾರೆ.
ಟನ್ ಕಬ್ಬಿಗೆ ₹4500 ದರ ನಿಗದಿ ಮಾಡಬೇಕು ಎಂದು ಮಂಡ್ಯ ಜಿಲ್ಲೆಯಲ್ಲಿ ಕಳೆದ 22 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು ಸೇರಿದಂತೆ, ಮೂರು ಜಿಲ್ಲೆಗಳ ರೈತರು ಒಟ್ಟಾಗಿ ಸೋಮವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ) ಬಣದ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರ ಕಬ್ಬು ಬೆಳೆಗೆ ನ್ಯಾಯೋಚಿತ ಹಾಗೂ ಲಾಭದಾಯಕ ದರ ನಿಗದಿ (ಎಫ್ಆರ್ಪಿ) ಮಾಡಬೇಕು. ಹಾಲಿಗೆ ಕನಿಷ್ಠ ₹40 ದರ ಕೊಡಬೇಕು, ಭತ್ತದ ಬೆಳೆಗೆ ಸಂಬಂಧಿಸಿದಂತೆ ಎಲ್ಲೆಡೆ ಖರೀದಿ ಕೇಂದ್ರ ತೆರೆದು ಸೂಕ್ತ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಪ್ರತಿಭಟನಾಕಾರರ ಸಮಸ್ಯೆ ಆಲಿಸಲು ಬೊಮ್ಮಾಯಿ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದು, ಹಲವು ವಿಚಾರಗಳ ಕುರಿತು ಚರ್ಚಿಸಿದರು.
ಈ ವೇಳೆ ಮಾತನಾಡಿದ ರೈತರು, "22 ದಿನಗಳಿಂದ ಮಂಡ್ಯ ರೈತರೆಲ್ಲ ಪ್ರತಿಭಟನೆ ಮಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೂ ಜಿಲ್ಲೆಗೆ ಬಂದು ಸಮಸ್ಯೆ ಆಲಿಸಿಲ್ಲ. ಅವರು ಯಾಕಾಗಿ ಜಿಲ್ಲೆಯ ಜವಾಬ್ದಾರಿ ಹೊತ್ತಿದ್ದಾರೆ. ಸರ್ಕಾರ ಕಳೆದ ಹಲವು ತಿಂಗಳುಗಳಿಂದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಡುವುದಾಗಿ ನಂಬಿಸಿ ದ್ರೋಹವೆಸುಗುತ್ತಾ ಬಂದಿದೆ. ಸಿಹಿ ನೀಡುವಿರೋ ಕಹಿಯನ್ನೇ ಕೊಡುತ್ತಿರೋ ನೇರವಾಗಿ ಹೇಳಿ" ಎಂದು ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾನಿರತ ರೈತರ ಮನವೊಲಿಕೆಗೆ ಯತ್ನಿಸಿದ ಸಿಎಂ, "ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಸಭೆ ಕರೆದು ಸಕ್ಕರೆ ಮತ್ತು ಎಥೆನಾಲ್ ದರದ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದ್ದು, ಐದು ದಿನಗಳ ಗಡುವು ಕೇಳಿದ್ದರು. ಇನ್ನೆರಡು ದಿನಗಳಲ್ಲಿ ಅವರ ನಿರ್ಧಾರ ತಿಳಿಯಲಿದ್ದು, ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಸರ್ಕಾರವೇ ಮೊತ್ತ ಲೆಕ್ಕ ಹಾಕಿ ಎಫ್ಆರ್ಪಿ ದರ ಘೋಷಿಸಲಿದೆ. ರೈತರು ಕಬ್ಬು ಅರೆಯಲು ಅವಕಾಶ ನೀಡಬೇಕು" ಎಂದು ಭರವಸೆ ನೀಡಿದರು.
ಭತ್ತ ಖರೀದಿ ಮತ್ತು ಪ್ರೋತ್ಸಾಹ ಧನ ವಿಚಾರ ಕುರಿತಂತೆ ಮಾತನಾಡಿದ ಅವರು, "ಕುಚಲಕ್ಕಿಯಷ್ಟೇ ಖರೀದಿ ಮಾಡುವ ಸಲುವಾಗಿ ಮೂರು ಜಿಲ್ಲೆಗಳಲ್ಲಿ ಕುಚಲಕ್ಕಿ ಬೆಳೆಯಲು ಪ್ರೋತ್ಸಾಹಧನ ನೀಡಿ ಭತ್ತ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಮತ್ತು ಖರೀದಿ ಕೇಂದ್ರ ತೆರೆಯಲಾಗಿದೆ. ಅಲ್ಲದೆ, ಈ ಮುಂಚಿನಂತೆ ಸರ್ಕಾರ ನೇರವಾಗಿ ಮಿಲ್ಗಳಿಂದ ಅಕ್ಕಿ ಖರೀದಿಸಿ ವಿತರಿಸುವಂತಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಆಹಾರ ನಿಗಮ ಮಧ್ಯವರ್ತಿಯಂತೆ ಕೆಲಸ ಮಾಡಲಿದ್ದು, ಅದರ ಮುಖೇನ ಅಕ್ಕಿ ಖರೀದಿಸಿ ಪಡಿತರ ವ್ಯವಸ್ಥೆಯಡಿ ವಿತರಿಸಬೇಕಿದೆ. ರಾಜ್ಯದ ಭತ್ತ ಬೆಳೆಯುವ ಜಿಲ್ಲೆಗಳಲ್ಲಿಯೂ ಶೀಘ್ರವಾಗಿ ಖರೀದಿ ಕೇಂದ್ರ ತೆರೆಯಲಾಗುವುದು ಮತ್ತು ಸೂಕ್ತ ಬೆಂಬಲ ಬೆಲೆ ಘೋಷಿಸಲಾಗುವುದು" ಎಂದರು.
ಚಾಮರಾಜನಗರ ಸೇರಿದಂತೆ ಹಲವೆಡೆ ವಿದ್ಯುಚ್ಛಕ್ತಿ ಕಂಪನಿಗಳು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರು, ರೈತರನ್ನು ಶೋಷಿಸುತ್ತಿದ್ದು, ಕರ ನಿರಾಕರಣೆಗೆ ರೈತರು ಕರೆ ಕೊಟ್ಟಿದ್ದರು. ಈ ಬಗ್ಗೆ ಪ್ರತಿಭಟನಾಕಾರರ ಜೊತೆ ಮಾತನಾಡಿದ ಸಿಎಂ, "ಶುಲ್ಕ ಮನ್ನಾ ಮಾಡಲು ಸೂಚನೆ ಕೊಟ್ಟರೆ ಅದರ ಹೊರೆ ಸರ್ಕಾರದ ಮೇಲೆ ಬೀಳುತ್ತದೆ. ಹಾಗಾಗಿ ಆ ಕುರಿತು ಚರ್ಚಿಸಿ ನಿರ್ಧರಿಸುತ್ತೇವೆ" ಎಂದು ಹೇಳಿದ್ದಾರೆ. ಅಲ್ಲದೆ, "ಚಾಗೇರಿ ಜನರ ಒಕ್ಕಲೆಬ್ಬಿಸುವಿಕೆ ಪ್ರಕರಣ ಹಾಗೂ ನಂಜನಗೂಡಿನ ಕೋಚನಹಳ್ಳಿಯಲ್ಲಿ ಕೆಐಎಡಿಬಿಯ ಭೂಸ್ವಾಧೀನ ಕುರಿತಂತೆ ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಿ ಆದೇಶ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್ಎಪಿ, ಎಫ್ಆರ್ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?
ಈ ಬಾರಿಯಾದರೂ ಮಾತು ಉಳಿಸಿಕೊಳ್ಳುವರೆ ಸಿಎಂ?
ಸಿಎಂ ಭೇಟಿ, ರೈತರೊಂದಿಗಿನ ಮಾತುಕತೆಗೆ ಸಂಬಂಧಿಸಿದಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, "ನಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಸಿಎಂಗೆ ವಿವರಣೆ ನೀಡಿದ್ದೇವೆ. ಬೊಮ್ಮಾಯಿ ಅವರು ರೈತರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಚಾಗೇರಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಒಕ್ಕಲೆಬ್ಬಿಸಲ್ಪಡುತ್ತಿರುವ 12500 ಕುಟುಂಬಗಳ ಸಮಸ್ಯೆಯನ್ನು ವಿವರಿಸಿದ್ದು, ಆ ಕುರಿತು ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದಾರೆ. ಅವರ ಭರವಸೆಯ ಮಾತನ್ನು ನಂಬಿದ್ದೇವೆ, ಅದರಂತೆ ನಡೆದರೆ ಸಂತೋಷ, ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ" ಎಂದರು.
ಅದೇ ರಾಗ ಹಾಡಿದ ಸರ್ಕಾರ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭರವಸೆ ಕುರಿತಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ್ದು, "ಮೂರು ತಿಂಗಳ ಹಿಂದೆ ಸಿಎಂ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದಾಗಲೂ ಇದೇ ಭರವಸೆಯನ್ನು ನೀಡಿದ್ದರು. ರೈತರ ಭರವಸೆಯನ್ನು ಈಡೇರಿಸುತ್ತೇವೆ ಎಂಬುದು ಬೋಗಸ್ ಆಗಿದ್ದು, ಯಾವಾಗಲೂ ಅದೇ ರಾಗ, ಅದೇ ಹಾಡು ಹಾಡುತ್ತಾರಷ್ಟೇ. ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ, ನಮ್ಮ ಹೋರಾಟ ಮುಂದುವರೆಯುತ್ತದೆ" ಎಂದರು.

ದಿನವೆಲ್ಲ ದುಡಿ, ಸಂಜೆ ಕುಡಿ!
"ಸರ್ಕಾರದ ಎಜೆಂಟ್ ಆಗಿರುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಂಜನಗೂಡು ತಾಲೂಕಿನ ಕೋಚನಹಳ್ಳಿ ಗ್ರಾಮದ ರೈತರು, ದಲಿತರು, ಕೂಲಿ ಕಾರ್ಮಿಕರ ಭೂಮಿಗೆ ಕನ್ನ ಹಾಕಿದೆ. ಕಳೆದ 15 ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದರೂ ಮಾನಗೇಡಿ ಸರ್ಕಾರ ಸುಮ್ಮನಿದೆ" ಎಂದು ರೈತ ಸಂಘದ ಹಿರಿಯ ಮುಖಂಡ ಬೊಕ್ಕೆಹಳ್ಳಿ ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
"ಜಿಲ್ಲೆಯ ಹಲವು ಹಳ್ಳಿಗಳ ಪೆಟ್ಟಿಗೆ ಅಂಗಡಿಗಳ ತನಕ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಬಡವ, ದಲಿತ ಕೂಲಿ ಕಾರ್ಮಿಕರನ್ನು ದಿನವೆಲ್ಲ ದುಡಿ, ಸಂಜೆ ಬಂದು ಕುಡಿ ಎಂಬ ಪರಿಸ್ಥಿತಿಗೆ ದೂಡಿದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಹೆಂಡ ಹಂಚುವುದನ್ನು ನಿಲ್ಲಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿಬೇಕು" ಎಂದು ಅವರು ಆಗ್ರಹಿಸಿದರು.