
- ಜಿಲ್ಲೆಯಲ್ಲಿ 63 ಬಾಲ್ಯವಿವಾಹ ಪ್ರಕರಣಗಳು ದಾಖಲು
- ಬೆಳಕಿಗೆ ಬಾರದೆ ಮುಚ್ಚಿಹೋಗಿರುವ ಪ್ರಕರಣಗಳೂ ಇವೆ
ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಸತಿ ಶಾಲೆಗಳು, ಮಠಗಳು, ಬಂಧುಗಳ ಮನೆಯಲ್ಲಿಯೇ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು, ಸಮಾಜದಲ್ಲಿ ಆತಂಕ ಸೃಷ್ಟಿಸಿದೆ. ಇದೆಲ್ಲದರ ಮಂಡ್ಯ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 56 ಪೋಕ್ಸೋ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.
ಪೊಲೀಸ್ ದಾಖಲೆಗಳ ಪ್ರಕಾರ, ಜನವರಿ 1 ರಿಂದ ಅಕ್ಟೋಬರ್ 20ರ ನಡುವೆ, ಜಿಲ್ಲೆಯಲ್ಲಿ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿಯಲ್ಲಿ 56 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಂದು ಕೊಲೆ ಹಾಗೂ ಐದು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಲ್ಲದೆ, ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 63 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ.
ಅಧಿಕಾರಿಗಳ ಪ್ರಕಾರ, 63 ಬಾಲ್ಯ ವಿವಾಹ ಪ್ರಕರಣಗಳಲ್ಲಿ 53 ಪ್ರಕರಣಗಳು ಪೋಕ್ಸೋ ಕಾಯ್ದೆಯಡಿ ದಾಖಲಾಗಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಹತ್ತು ಪ್ರಕರಣಗಳು ದಾಖಲಾಗಿವೆ.
ಜೊತೆಗೆ, 2022ರ ಮೊದಲ ಆರು ತಿಂಗಳಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ (ಐಪಿಸಿ ಸೆಕ್ಷನ್ 498ಎ) ಅಡಿಯಲ್ಲಿ 50 ಪ್ರಕರಣಗಳು ದಾಖಲಾಗಿವೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ 42 ಪ್ರಕರಣಗಳು ದಾಖಲಾಗಿವೆ.
"ಪೊಲೀಸರು ಮತ್ತು ಮಕ್ಕಳ ರಕ್ಷಣಾ ಸಮಿತಿಗೆ ಬಂದ ದೂರುಗಳ ಆಧಾರದ ಮೇಲೆ ಈ ಪ್ರಕರಣಗಳು ವರದಿಯಾಗುತ್ತವೆ. ಇದಲ್ಲದೆ, ಯಾವುದೇ ದೂರುಗಳಿಲ್ಲದ ಕಾರಣ ಅನೇಕ ಪ್ರಕರಣಗಳು ಬೆಳಕಿಗೆ ಬಾರದೆ, ಮುಚ್ಚಿಹೋಗುತ್ತವೆ" ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಮಂಡ್ಯ ಜಿಲ್ಲಾ ಪೊಲೀಸರು ಕಾವೇರಿ ಪಡೆ ರಚಿಸಿದ್ದಾರೆ. ಪಡೆಯು ಶಿಕ್ಷಣ ಸಂಸ್ಥೆಗಳಲ್ಲಿ ಬಾಲ್ಯವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಮಂಡ್ಯ ಎಸ್ಪಿ ಯತೀಶ್ ಎನ್. ತಿಳಿಸಿದ್ದಾರೆ.
"ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ದುರ್ಬಲವಾಗಿದೆ. ಇತ್ತೀಚೆಗೆ ಮಳವಳ್ಳಿಯಲ್ಲಿ ಬಾಲಕಿಯೊಬ್ಬಳನ್ನು ಟ್ಯೂಷನ್ ಶಿಕ್ಷಕ ಅತ್ಯಾಚಾರಗೈದು, ಕೊಲೆ ಮಾಡಿದ್ದಾನೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇಯಿವೆ. ಆದರೆ, ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆ ಎಡವಿದೆ" ಎಂದು ಮಹಿಳಾ ಮುನ್ನಡೆ ಮುಖಂಡೆ ಪೂರ್ಣಿಮಾ ಕಿಡಿಕಾರಿದ್ದಾರೆ.
“ಮಕ್ಕಳಿಗೆ ಧ್ವನಿ ಇಲ್ಲ. ಮಕ್ಕಳ ನ್ಯಾಯ ಮತ್ತು ರಕ್ಷಣೆ ಶೋಚನೀಯವಾಗಿದೆ. ಎಲ್ಲ ಮಕ್ಕಳೂ ನಮ್ಮ ಮಕ್ಕಳು ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಬೇಕು" ಎಂದು ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕ ವೆಂಕಟೇಶ್ ಹೇಳಿದ್ದಾರೆ.