- ‘ಮುಖ್ಯಮಂತ್ರಿಗಳು ನೀಡಿದ ಭರವಸೆ ಹುಸಿಯಾಗಿದೆ’
- ‘ಪಶು ಆಹಾರದ ಬೆಲೆ ಏಕಾಏಕಿ ಹೆಚ್ಚಳ’
ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು, ಹಾಲಿನ ದರ ಹೆಚ್ಚಿಸಬೇಕು, ಭತ್ತಕ್ಕೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕರ್ನಾಟಕ ರಾಜ್ಯ ರೈತ ಸಂಘ ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದೆ.
ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪುಗೌಡ ಮಾತನಾಡಿ, “ಜುಲೈ 11ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಶೀಘ್ರದಲ್ಲಿಯೇ ಎಸ್ಎಪಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಇಲ್ಲಿಯವರೆಗೂ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ರೈತರಿಗೆ ಮುಖ್ಯಮಂತ್ರಿಗಳು ಹುಸಿ ಭರವಸೆ ನೀಡಿದ್ದಾರೆ” ಎಂದು ಕಿಡಿಕಾರಿದರು.
“ಅದೇ ಸಭೆಯಲ್ಲಿ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಳಕೆದಾರರ ಬಿಲ್ ಮನ್ನಾ ಮಾಡುವುದಾಗಿಯೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಬಿಲ್ ಪಾವತಿಸದೆ ಇರುವ ಮನೆಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಕಡಿತಗೊಳಿಸುತ್ತಿದೆ. ಬಡವರು ಕತ್ತಲೆಯಲ್ಲಿ ಜೀವನ ನಡೆಸಬೇಕಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ತುಮಕೂರು | ಅಲೆಮಾರಿ ಜನಾಂಗದ 19 ಕುಟುಂಬಗಳಿಗೆ ನಿವೇಶನ ಭಾಗ್ಯ; ತಹಶೀಲ್ದಾರ್ ನಹೀದಾ ಕೆಲಸಕ್ಕೆ ಮೆಚ್ಚುಗೆ
“ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ಟನ್ ಕಬ್ಬಿಗೆ 150 ರೂ. ಎಸ್ಎಪಿ ಘೋಷಣೆ ಮಾಡಿದ್ದರು. ಈಗ ಸಚಿವ ಸೋಮಶೇಖರ್ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿದ್ದು, ಆ ಭರವಸೆಯೂ ಹುಸಿಯಾಗಿದೆ. ಸರ್ಕಾರ ನೀಡಿದ ಯಾವ ಭರವಸೆಯೂ ಈಡೇರದೆ ಇದ್ದದ್ದರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ” ಎಂದರು.
“ಲೀಟರ್ ಹಾಲಿಗೆ ಕೇವಲ 1ರೂ. ಹೆಚ್ಚಳ ಮಾಡಿ, ಪಶು ಆಹಾರದ ಬೆಲೆಯನ್ನು ಏಕಾಏಕಿ 125 ರೂಪಾಯಿ ಏರಿಸಲಾಗಿದೆ. ಆ ಮೂಲಕ ಮುನ್ಮುಲ್ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್, ಸುನೀತಾ ಪುಟ್ಟಣ್ಣಯ್ಯ, ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಪ್ರಸನ್ನ, ಶಿವಳ್ಳಿ ಚಂದ್ರಶೇಖರ್, ರವಿಕುಮಾರ್, ಮುಟ್ಟನಹಳ್ಳೀ ವೆಂಕಟೇಶ್ ಮತ್ತಿತ್ತರು ಭಾಗವಹಿಸಿದ್ದಾರೆ.