
- ಚಳವಳಿಗಳು ವ್ಯವಸ್ಥೆಯನ್ನು ಬಡಿದೆಚ್ಚರಿಸುವ ಶಕ್ತಿಶಾಲಿ ಮಾಧ್ಯಮ
- ಚುನಾವಣೆಯಲ್ಲಿ ಪುಟ್ಟಣ್ಣಯ್ಯರಂತಹ ರೈತಪರ ನಾಯಕನ ಆಯ್ಕೆಗೆ ಕರೆ
"ಇತಿಹಾಸದಲ್ಲಿ ರೈತ ಚಳವಳಿಗಳಿಗೆ ಘನವಾದ ಸ್ಥಾನವಿದ್ದು, ನಿಧಾನಗತಿಯಲ್ಲಾದರೂ ಮಂಡ್ಯ ಜನತೆ ಮತ್ತೆ ಚಳವಳಿ ಕಟ್ಟುವಲ್ಲಿ ಮನಸ್ಸು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ" ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಹೇಳಿದ್ದಾರೆ.
ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಗ್ರಾಮ ರೈತ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
"ಚಳವಳಿಗಳು ವ್ಯವಸ್ಥೆಯನ್ನು ಬಡಿದೆಚ್ಚರಿಸುವ ಶಕ್ತಿಶಾಲಿ ಮಾಧ್ಯಮವಾಗಿದ್ದು ಅದಕ್ಕೆ ನಿದರ್ಶನವೆಂಬಂತೆ, ಮಂಡ್ಯ ನಗರದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರೈತರು ಬೃಹತ್ ಬೈಕ್ ರ್ಯಾಲಿ ನಡೆಸಿದ್ದರಿಂದ ಪಿಡಬ್ಲ್ಯೂಡಿ ಇಲಾಖೆ ತಾತ್ಕಾಲಿಕವಾಗಿ ಗುಂಡಿ ಮುಚ್ಚಿದೆ. ಅದೇ ರೀತಿಯಲ್ಲಿ ರೈತರು ಕೃಷಿ ಸಮಸ್ಯೆಗಳ ಕುರಿತು ಪಟ್ಟು ಬಿಡದೆ ಹೋರಾಟ ನಡೆಸಿದರೆ ಮಾತ್ರ ಬೆಳೆಗಳಿಗೆ ಬೆಲೆ, ಕಬ್ಬಿಗೆ ನ್ಯಾಯೋಚಿತ ಮತ್ತು ಲಾಭದಾಯಕ ದರ ಪಡೆದುಕೊಳ್ಳಬಹುದು" ಎಂದು ಹುರಿದುಂಬಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎ ಎಲ್ ಕೆಂಪುಗೌಡ ಮಾತನಾಡಿ, "ರೈತ, ಕಾರ್ಮಿಕ, ವಿದ್ಯಾರ್ಥಿ ಚಳವಳಿಗಳು ನಡೆದರೆ ಸರ್ಕಾರ ಮತ್ತು ರಾಜಕೀಯ ನಾಯಕರು ನಡುಗುತ್ತಿದ್ದರು. ಆದರೆ, ಪ್ರಸ್ತುತದಲ್ಲಿ ಆಳುವ ಸರ್ಕಾರಗಳು ಹಾಗೂ ಹಲವು ರಾಜಕೀಯ ನಾಯಕರುಗಳ ಪಿತೂರಿಗೆ ಸಿಲುಕಿ ರೈತ ಸಂಘಗಳು ಒಡೆದಿವೆ. ಮಾತ್ರವಲ್ಲದೆ, ಎಲ್ಲ ಬಗೆಯ ಪ್ರಗತಿಪರ ಚಳವಳಿಗಳನ್ನು ದಯನೀಯವಾಗಿ ದಮನ ಮಾಡಲಾಗುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದರಲ್ಲದೆ, "ರೈತರು, ರೈತ ಸಂಘಟನೆಗಳು ಒಗ್ಗಟ್ಟಾಗಬೇಕು" ಎಂದು ಕರೆ ನೀಡಿದರು.
ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸದಸ್ಯರಾದ ಪ್ರಸನ್ನಗೌಡ, "ಜನರಿಂದ ಆಯ್ಕೆಯಾದ ಯಾವ ಶಾಸಕರೂ ಇದುವರೆಗೂ ಸದನದಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಗಳ ಹೆಸರಲ್ಲಿ ನಡೆಯುತ್ತಿರುವ ಸುಲಿಗೆ, ವಿದ್ಯುತ್ ಖಾಸಗೀಕರಣಕ್ಕೆ ವಿರೋಧ, ಕಬ್ಬಿಗೆ ಎಸ್ಎಪಿ, ಎಫ್ರ್ಪಿ ದರದ ಬಗ್ಗೆ ದನಿ ಎತ್ತುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಪುಟ್ಟಣ್ಣಯ್ಯ ರೀತಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೂರದೃಷ್ಟಿ ಇರುವ ನಾಯಕನನ್ನು ಆಯ್ಕೆ ಮಾಡಬೇಕು" ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ -2 | ಎಸ್ಎಪಿ, ಎಫ್ಆರ್ಪಿ ಎಂದರೇನು? ರೈತರಿಗೆ ಆಗುತ್ತಿರುವ ದ್ರೋಹವೇನು?
ಇದೇ ವೇಳೆ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು, ಯುವಕರು ಹಾಗೂ ಹಿರಿಯರು ರೈತ ಸಂಘಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಖಜಾಂಚಿಗಳಾದ ತಗ್ಗಳ್ಳಿ ಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಜಿಲ್ಲಾ ಖಜಾಂಚಿ ಶಟ್ಟಳ್ಳಿ ರವಿಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು ಹಾಗೂ ರೈತ ಮುಖಂಡರುಗಳಾದ ಕೆನಾಳು ವಿಜಯ್ ಕುಮಾರ್, ಮರಿಚೆನ್ನೇಗೌಡ, ರಾಮಕೃಷ್ಣ ಇತರರು ಉಪಸ್ಥಿತರಿದ್ದರು.