ಮಂಡ್ಯ | ರೈತರು ರೊಚ್ಚಿಗೇಳುವ ಮುನ್ನ ಕಬ್ಬಿಗೆ ದರ ನಿಗದಿ ಮಾಡಿ; ದಿನೇಶ್‌ ಗೂಳಿಗೌಡ

ಮಂಡ್ಯರೈತರಪ್ರತಿಭಟನೆ
  • ರೈತರ ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನೀಡುವಂತೆ ಎಂಎಲ್‌ಸಿ ಆಗ್ರಹ
  • ರೈತರ ಮನವೊಲಿಸಲು ಯತ್ನಿಸಿದ ಜಿಲ್ಲಾಧಿಕಾರಿ ಎಚ್‌ ಎನ್‌ ಗೋಪಾಲಕೃಷ್ಣ

ರಾಜ್ಯದಲ್ಲಿ ಕಬ್ಬು ಬೆಳೆಗಾರರು ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ನೀಡುವಂತೆ ಆಗ್ರಹಿಸುತ್ತಿರುವ ಪ್ರತಿಭಟನೆಗೆ ಮಂಡ್ಯ ಜಿಲ್ಲಾ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ಮಂಡ್ಯ ಜಿಲ್ಲೆಯ ರೈತರ ಪ್ರತಿಭಟನೆ 4ನೇ ದಿನದ ಹೋರಾಟ ಮುಂದುವರೆದಿದೆ.

Eedina App

ಈ ಕುರಿತು ದಿನೇಶ್‌ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಪತ್ರ ಬರೆದಿದ್ದು, "ರೈತರು ರೊಚ್ಚಿಗೆದ್ದು ಬೀದಿಗೆ ಬರುವ ಮುನ್ನ ಪ್ರತಿ ಕ್ವಿಂಟಾಲ್‌ ಕಬ್ಬಿಗೆ ₹500 ಪ್ರೋತ್ಸಾಹ ಧನ ನೀಡುವ ಹಾಗೂ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ" ಎಂದು ಎಚ್ಚರಿಕೆ ನೀಡಿದ್ದಾರೆ.

"ಮಂಡ್ಯ ಜಿಲ್ಲೆಯಲ್ಲಿ ಚಾಮುಂಡೇಶ್ವರಿ, ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ವಾರ್ಷಿಕವಾಗಿ ಸುಮಾರು 9 ಲಕ್ಷ ಟನ್‌ ಕಬ್ಬು ಅರೆಯಲಾಗುತ್ತದೆ. ಮಂಡ್ಯ, ಮೈಸೂರು ಜಿಲ್ಲೆಗಳ ಸಕ್ಕರೆ ಕಾರ್ಖಾನೆ ಇತ್ತಿಚೀಗಷ್ಟೇ ಆರಂಭವಾಗಿವೆ. ಕಳೆದ ಬಜೆಟ್‌ನಲ್ಲಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ₹50 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರ ಇದುವರೆಗೂ ಕೇವಲ ₹30 ಕೋಟಿ ಹಣ ಬಿಡುಗಡೆ ಮಾಡಿದೆ. ಉಳಿದ ಹಣ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ" ಎಂದವರು ಆರೋಪಿಸಿದ್ದಾರೆ.

AV Eye Hospital ad

"ಸರ್ಕಾರ ಪ್ರಸ್ತುತ ಕಬ್ಬಿಗೆ ನೀಡುವ ದರದಿಂದ ಬೆಳೆಗಾರರಿಗೆ ಯಾವುದೇ ಲಾಭಾಂಶವಿಲ್ಲ. ಇದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಉತ್ಪಾದನೆ, ಗೊಬ್ಬರ, ಬಿತ್ತನೆ ಬೀಜ, ಕಟಾವು, ಸಾಗಾಣಿಕೆ ವೆಚ್ಚಗಳು ಪ್ರತಿವರ್ಷ ಏರಿಕೆಯಾಗುತ್ತಿದ್ದು, ರೈತರ ಆದಾಯ ಮಟ್ಟ ಕುಸಿದಿದೆ. ರೈತರು ಬದುಕು ಬಹಳ ದುಸ್ತರವಾಗಿದ್ದು, ಹತಾಶರಾಗಿದ್ದಾರೆ. ಹಾಗಾಗಿ ಕೂಡಲೇ ಕಬ್ಬಿಗೆ ಸರಿಯಾದ ಎಫ್‌ಆರ್‌ಪಿ ದರ ಘೋಷಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು" ಎಂದು ದಿನೇಶ್‌ ಗೂಳಿಗೌಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗೂಳಿಗೌಡ
ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಪತ್ರ

"ರೈತರಿಗೆ ಸಾಲ ಒದಗಿಸಲು ಸಿಬಿಲ್ ಸ್ಕೋರ್ ಪದ್ಧತಿಯನ್ನು ಅನ್ವಯಿಸಬಾರದು. ರೈತರಿಗೆ ನೀಡುವ ಬೆಳೆ ಪರಿಹಾರ ಮತ್ತು ಬೆಳೆ ವಿಮೆಯ ಮೊತ್ತವನ್ನು ರೈತರ ಸಾಲಕ್ಕೆ ಜಮಾ ಮಾಡಬಾರದು. ಪರಿಹಾರದ ಹೆಸರಲ್ಲಿ ಸಿಗುವ ಕನಿಷ್ಠ ಮೊತ್ತದಿಂದ ರೈತ ಸುಧಾರಿಸಿಕೊಳ್ಳಲು ಬಿಡಬೇಕು. ವಾಸ್ತವವಾಗಿ ರೈತರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ" ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಎಚ್‌ ಎನ್‌ ಗೋಪಾಲಕೃಷ್ಣ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಮುಖ್ಯಮಂತ್ರಿಯವರಿಗೆ ತಲುಪಿಸಲಾಗುವುದು. ಹೋರಾಟ ಕೈ ಬಿಡಿ ಎಂದು ಮನವೊಲಿಸಲು ಯತ್ನಿಸಿದರು.

ಈ ಸುದ್ದಿ ಓದಿದ್ದೀರಾ? ಅಡಿಕೆ ಆತಂಕ| ಎಲೆಚುಕ್ಕೆ ರೋಗಕ್ಕೆ ತೋಟ ನಾಶ: ರೈತರ ಮೂಗಿಗೆ ಅನುದಾನದ ತುಪ್ಪ ಸವರಿತೇ ಸರ್ಕಾರ?

ಆದರೆ "ಸರ್ಕಾರ ಪದೇಪದೆ ಈ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿರುವುದರಿಂದ ಮತ್ತು ಯಾವೊಬ್ಬ ಜನಪ್ರತಿನಿಧಿಯೂ ಪ್ರತಿಭಟನಾನಿರತರ ಬಳಿ ಬಂದು ಸಮಸ್ಯೆ ಆಲಿಸಿಲ್ಲ. ಹಾಗಾಗಿ ಬೇಡಿಕೆ ಈಡೇರದ ಹೊರತು ಹೋರಾಟ ನಿಲ್ಲುವುದಿಲ್ಲ" ಎಂದು ಬಡಗಲಪುರ ನಾಗೇಂದ್ರ ಅವರು ಸ್ಪಷ್ಟವಾಗಿ ಜಿಲ್ಲಾಧಿಕಾರಿಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
4 ವೋಟ್
eedina app