ಮಂಡ್ಯ | ವಿದ್ಯುತ್‌ ಕಾಯ್ದೆ ರದ್ದಾಗದಿದ್ದರೆ, ದಸರಾ ವೇಳೆ ರಸ್ತೆ ತಡೆದು ಪ್ರತಿಭಟನೆ: ರೈತ ಸಂಘ ಎಚ್ಚರಿಕೆ

Mandya
  • ‘ಸರ್ಕಾರವನ್ನು ಕೆಳಗಿಳಿಸುವ ಶಕ್ತಿ ರೈತರಿಗಿದೆ’
  • ‘ವಿದ್ಯುತ್ ಖಾಸಗೀಕರಣ ಮಾಡುವ ನಿರ್ಧಾರ ಕೈಬಿಡಿ’

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ದಸರಾ ವೇಳೆ ಮೈಸೂರಿನ ನಾಲ್ಕು ದಿಕ್ಕುಗಳಲ್ಲಿಯೂ ರೈತರು ತಮ್ಮ ಕೃಷಿ ಪರಿಕರಗಳೊಂದಿಗೆ ರಸ್ತೆಗಿಳಿಯಲಿದ್ದಾರೆ. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಕರ್ನಾಟಕ ರೈತ ಸಂಘ ಆಯೋಜಿಸಿದ ಬೃಹತ್ ‘ರೈತ ಸಮಾವೇಶದಲ್ಲಿ’ ಭಾಗವಹಿಸಿ ಅವರು ಮಾತನಾಡಿದರು. ”1982ರಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿದ್ದ ಗುಂಡೂರಾವ್ ಸರ್ಕಾರವನ್ನು ಇದೇ ಪಾರ್ಕ್‌ನಲ್ಲಿ ಸಮಾವೇಶ ನಡೆಸಿ ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ರೈತರ ತಂಟೆಗೆ ಬಂದರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರವನ್ನು ಕೆಳಗಿಳಿಸುವ ಶಕ್ತಿ ರೈತರಿಗಿದೆ ಎನ್ನುವುದನ್ನು ಮರೆಯಬಾರದು” ಎಂದರು.

“ಜುಲೈ 11ರಂದು ನಡೆದ ಸಭೆಯಲ್ಲಿ ‘ಒಂದು ವಾರದೊಳಗೆ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸುವುದಾಗಿ’ ಮಾತುಕೊಟ್ಟಿದ್ದ ಮುಖ್ಯಮಂತ್ರಿಗಳು ತಮ್ಮ ಮಾತಿಗೆ ತಪ್ಪಿದ್ದಾರೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ 4,500 ರೂಪಾಯಿ ನಿಗದಿಪಡಿಸಿ, ರೈತರ ಹಳೆಯ ಬಾಕಿ ಪಾವತಿಸಬೇಕು” ಎಂದು ಆಗ್ರಹಿಸಿದರು.

"ಕೇಂದ್ರವು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ಉತ್ಪಾದನೆ, ಸರಬರಾಜು ಹಾಗೂ ಪ್ರಸರಣೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಆ ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿ 45 ಲಕ್ಷ ಪಂಪ್‌ ಸೆಟ್‌ಗಳಿದ್ದು, ಮಂಡ್ಯ ಜಿಲ್ಲೆಯೊಂದರಲ್ಲಿಯೇ ಸುಮಾರು ಒಂದು ಲಕ್ಷ ಪಂಪ್‌ ಸೆಟ್‌ಗಳಿವೆ. ಮೀಟರ್ ಅಳವಡಿಕೆಯಿಂದ ರೈತರು ತೊಂದರೆ ಅನುಭವಿಸುತ್ತಾರೆ. ಸರ್ಕಾರ ರೈತರಿಗೆ ಉಚಿತವಾಗಿ ವಿದ್ಯುತ್ ನೀಡಬೇಕು. ಮೀಟರ್ ಅಳವಡಿಕೆ ಮಾಡಲು ಮುಂದಾದರೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಪೊಲೀಸರ ಮೇಲೆ ಗಣೇಶೋತ್ಸವ ಸಂಘಟಕರಿಂದ ಹಲ್ಲೆ: ಐವರ ಬಂಧನ

“ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆಯಿಂದ ಬಡವರ ಜಮೀನು ಬಂಡವಾಳಶಾಹಿಗಳ ಪಾಲಾಗುತ್ತಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಸುಮಾರು 88 ಎಪಿಎಂಸಿಗಳು ಮುಚ್ಚಿ ಹೋಗಿವೆ. ಜಾನುವಾರು ಸಂರಕ್ಷಣಾ ಕಾಯ್ದೆಯಿಂದ ರೈತರು ಜಾನುವಾರುಗಳನ್ನು ಸಾಕಲು ಹಿಂಸೆ ಪಡುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕನ್ನಂಬಾಡಿ ಜಲಾಶಯ ಸುತ್ತುಮುತ್ತಾ ಸುಮಾರು 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧ ಮಾಡಬೇಕು. ಅಧಿಕಾರದ ಬಲದಿಂದ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಿದವರನ್ನು ಶಾಸಕ ಸಿ ಪುಟ್ಟರಾಜು ಬಂಧನ ಮುಕ್ತಗೊಳಿಸಿದ್ದಾರೆ. ಗೂಂಡಾಗಿರಿ ಮಾಡುವವರಿಗೆ, ಕಳ್ಳರಿಗೆ ಅಧಿಕಾರ ನೀಡುತ್ತಿರುವುದು ದುರಂತ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Image
Mandya

“ಬೆಲ್ಲ ಹಾಗೂ ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತಕ್ಷಣ ಹಿಂಪಡೆಯಬೇಕು. ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ, ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಆದ ನಷ್ಟಕ್ಕೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.

ಸಮಾವೇಶದಲ್ಲಿ ರೈತ ನಾಯಕ ವೀರಸಂಗಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೇಂಪೇಗೌಡ, ಚಾಮರಸ ಮಾಲಿ ಪಾಟೀಲ್‌, ಸುನೀತಾ ಪುಟ್ಟಣ್ಣಯ್ಯ, ಮಹೇಶ್ ಪ್ರಭು, ಗೋವಿಂದರಾಜು, ಆರ್‍‌ಟಿಐ ಕಾರ್ಯಕರ್ತ ರವೀಂದ್ರ ಮತ್ತಿತ್ತರು ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180