ಪಿಎಫ್‌ಐಗೆ ನಿಷೇಧ | ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಚೇರಿಗಳಿಗೆ ಸೀಲ್

PFI BAN
  • ಪಿಎಫ್‌ಐ ಹಾಗೂ ಸಂಬಂಧಿಸಿದ 12 ಕಚೇರಿಗಳಿಗೆ ಬೀಗ
  • ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ

ಪಿಎಫ್‌ಐ ಮತ್ತು ಅದರ ಅಂಗ ಸಂಘಟನೆಗಳನ್ನು ಕೇಂದ್ರ ಸರ್ಕಾರವು ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ದೇಶನದ ಮೇಲೆ ಪಿಎಫ್‌ಐ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪಿಎಫ್‌ಐ ಹಾಗೂ ಸಂಬಂಧಿಸಿದ 12 ಕಚೇರಿಗಳಿಗೆ ಬೀಗ ಹಾಕಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ನಗರದ ನೆಲ್ಲಿಕಾಯಿ ರಸ್ತೆ ಸೇರಿದಂತೆ ನಗರದ 12 ಕಡೆಗಳಲ್ಲಿನ ಪಿಎಫ್‌ಐ ಮತ್ತು ಅದರ ಅಂಗ ಕಚೇರಿಗಳನ್ನು ಮಂಗಳೂರು ಪೊಲೀಸರು ಸುಪರ್ದಿಗೆ ತಗೊಂಡು ಪರಿಶೀಲನೆ ನಡೆಸಿ, ಸೀಲ್‌ಡೌನ್ ಮಾಡಿದ್ದಾರೆ.

ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಛೇರಿ ಸುತ್ತ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಇಲ್ಲಿನ ಪಿಎಫ್‌ಐ ಕಚೇರಿಗೆ ಬೀಗ ಹಾಕಲಾಗಿತ್ತು. ಬೀಗ ಒಡೆದ ಪೊಲೀಸರು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತಪಾಸಣೆ ನಡೆಸಿ ಬಳಿಕ ಬೀಗ ಜಡಿದು ಸೀಲ್ ಹಾಕಿ ಸೀಝ್ ಮಾಡಿದ್ದಾರೆ.

Image
pfi ban mangalore
ಸೀಲ್ ಮಾಡಿದ ಕಚೇರಿಗಳ ವಿವರ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಅಯುಕ್ತ ಶಶಿಕುಮಾರ್, ಇಂದು ಮುಂಜಾನೆಯೇ ಇಲಾಖೆಗೆ ಸರ್ಕಾರದಿಂದ ಸೂಚನೆ ಬಂದಿತ್ತು. ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ಯಾನ್ ಮಾಡಿರುವ ಸಂಘಟನೆಗಳ ಕಛೇರಿಗಳನ್ನು ಸೀಝ್ ಮಾಡಲು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಪಣಂಬೂರು, ಸುರತ್ಕಲ್, ಬಜಪೆ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮೀಣ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಡಿಯಲ್ಲಿ ಒಟ್ಟು 10 ಪಿಎಫ್ಐ ಕಚೇರಿ, ಒಂದು ಸಿಎಫ್‌ಐ ಕಚೇರಿ ಹಾಗೂ ಇನ್‌ಫಾರ್ಮೇಶನ್ ಮತ್ತು ಎಂಪರ್‌ಮೆಂಟ್ ಸಂಸ್ಥೆಯ ಒಂದು ಕಚೇರಿ ಸೇರಿ ಒಟ್ಟು 12 ಕಚೇರಿಗಳನ್ನು ಸೀಲ್ ಮಾಡಲಾಗಿದೆ ಎಂದು ಕಮಿಷನರ್ ಕಚೇರಿ ಮಾಹಿತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್