
- ಡಿ.1 ರಿಂದ 2023ರ ಫೆಬ್ರವರಿ 28ರವರೆಗೆ ಭತ್ತ ಖರೀದಿಗೆ ಸೂಚನೆ
- 5 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಕೇಂದ್ರ ಸರ್ಕಾರದ ಅನುಮತಿ
ಕರಾವಳಿ ಪ್ರದೇಶಕ್ಕೆ ಪಡಿತರದಲ್ಲಿ ಕುಚಲಕ್ಕಿ ವಿತರಿಸುವ ಸಂಬಂಧ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಭತ್ತ ಖರೀದಿಸಲು ಕೇಂದ್ರ ಸರ್ಕಾರ ದರ ನಿಗದಿ ಮಾಡಿ ಆದೇಶಿಸಿದೆ.
ರಾಜ್ಯ ಸರ್ಕಾರದ ಕೋರಿಕೆಯಂತೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಹಾಗೂ ಎಂಓ4 ತಳಿಗಳ ಭತ್ತವನ್ನು ಖರೀದಿ ಕೇಂದ್ರಗಳ ಮೂಲಕ ರೈತರಿಂದ ಖರೀದಿಸಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಸರ್ಕಾರ 5 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಲು ಅನುಮತಿ ನೀಡಿದ್ದು, ನಿಗದಿತ ಭತ್ತದ ತಳಿಗಳನ್ನು ಖರೀದಿಸುವ ಸಂಬಂಧ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ ದರ ₹2040 ಮತ್ತು ಗ್ರೇಡ್-ಎ ಭತ್ತಕ್ಕೆ ಪ್ರತಿ ಕ್ವಿಂಟಾಲ್ಗೆ ₹2060 ದರ ನಿಗದಿಯಾಗಿದೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನ.18ರೊಳಗೆ ಟಾಸ್ಕ್ಪೋರ್ಸ್ ಸಮಿತಿ ಸಭೆ ನಡೆಸಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿ ಮಾಡಿಸಬೇಕು. ಡಿ.1ರಿಂದ 2023ರ ಫೆ.28ರವರೆಗೆ ಖರೀದಿ ಕೇಂದ್ರಗಳಲ್ಲಿ ರೈತರಿಂದ ಅವರ ಉತ್ಪನ್ನಕ್ಕೆ ಅನುಗುಣವಾಗಿ ಸರ್ಕಾರ ಸೂಚಿಸಿರುವ ಮಿತಿಯನ್ನು ಮೀರದಂತೆ ಖರೀದಿ ಮಾಡಬೇಕು ಎಂದು ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಭತ್ತದ ತಳಿಗಳ ಭತ್ತ ಖರೀದಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಲ್ಲದೆ, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರನ್ನು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಕೇಂದ್ರವು ಹಲವು ಸೂಚನೆಗಳನ್ನು ನೀಡಿದೆ.
ಈ ಸುದ್ದಿ ಓದಿದ್ದೀರಾ? ಕರಾವಳಿ ಜಿಲ್ಲೆಗಳಿಗೆ ಕುಚಲಕ್ಕಿ ಹಂಚಿಕೆ ವಿಚಾರ | ₹2,540 ಬೆಂಬಲ ಬೆಲೆ ನೀಡಿ ಭತ್ತ ಖರೀದಿ; ಸಚಿವ ಕೋಟ
- ಪ್ರತಿ ಜಿಲ್ಲೆಯಯಲ್ಲಿ ಸುಮಾರು 15 ರಿಂದ 25 ಖರೀದಿ ಕೇಂದ್ರಗಳನ್ನು ತೆರೆಯಬೇಕು.
- ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯ ಗ್ರೇಡರ್ಗಳನ್ನು ನೇಮಿಸಬೇಕು. ಅಲ್ಲದೆ, ಖರೀದಿ ಏಜೆನ್ಸಿಯ ಹಿರಿಯ ಅಧಿಕಾರಿಗಳು ಆಗಿಂದಾಗ್ಗೆ ಮೇಲುಸ್ತುವಾರಿ ಮಾಡಬೇಕು.
- ಪ್ರತಿ ರೈತರ ಉತ್ಪಾದನೆಗೆ ಅನುಗುಣವಾಗಿ ಪ್ರತಿ ಎಕರೆಗೆ 16 ಕ್ವಿಂಟಾಲ್ನಂತೆ ಗರಿಷ್ಠ 40 ಕ್ವಿಂಟಾಲ್ ಮಿತಿ ಮೀರದಂತೆ ಭತ್ತ ಖರೀದಿಸುವುದು.
- ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸುವ ಭತ್ತವನ್ನು ಸಂಗ್ರಹಣಾ ಏಜೆನ್ಸಿಯವರು ನಿಗದಿತ ಗೋದಾಮುಗಳಲ್ಲಿ ಸಂಗ್ರಹಿಸುವುದು. ನಂತರ ಸಂಗ್ರಹಿಸಿರುವ ಭತ್ತವನ್ನು ಅಕ್ಕಿ ಗಿರಣಿಗಳಿಗೆ ಕ್ರಮವಾಗಿ ವರ್ಗಾಹಿಸಿ ಭತ್ತ ಪ್ರಮಾಣದ ಶೇ.68%ರಷ್ಟು ಕುಚಲಕ್ಕಿಯನ್ನು ಪಡೆಯತಕ್ಕದ್ದು.
- ಯಾವುದೇ ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳು ನೋಂದಾಯಿಸದಿದ್ದಲ್ಲಿ ಸದರಿ ಜಿಲ್ಲೆಯಲ್ಲಿ ಸಂಗ್ರಹಿಸಲಾದ ಭತ್ತವನ್ನು ಪಕ್ಕದ ಜಿಲ್ಲೆಯ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡಿ ಕೇಂದ್ರದ ಮಾರ್ಗಸೂಚಿಯಂತೆ ಹಲ್ಲಿಂಗ್ ಹಾಗೂ ಕುಚಲಕ್ಕಿಯಾಗಿ ಪರಿವರ್ತಿಸುವ ಕಾರ್ಯವನ್ನು ಕೈಗೊಳ್ಳಲು ಅಗತ್ಯ ಕ್ರಮವಹಿಸುವುದು.
- ಭತ್ತವನ್ನು ಮಾರಾಟ ಮಾಡಿದ ರೈತರಿಗೆ 15 ದಿನಗಳೊಳಗಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸುವುದು.