
- ‘ವಾತಾವರಣ ವೈಪರೀತ್ಯ ಸೋಂಕು ಹೆಚ್ಚಳಕ್ಕೆ ಕಾರಣ’
- ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳಿಗೂ ಸುತ್ತೋಲೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಗಣ್ಣು ರೋಗದ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಇದೂವರೆಗೂ ದಾಖಲಾಗಿರುವ ಪ್ರಕರಣಗಳಲ್ಲಿ ಶೇ.40ರಷ್ಟು ಸೋಂಕಿತರು ಶಾಲಾ ಮಕ್ಕಳೇ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕಿತ ಮಕ್ಕಳಿಗೆ ವಿಶೇಷ ಕಾಳಜಿ ವಹಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದೆ.
ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದೆ. ಸೋಂಕು ಹರಡದಂತೆ ತಡೆಯಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.
“ಶಾಲೆಯಲ್ಲಿ ಹಲವು ಮಕ್ಕಳಿಗೆ ಸೋಂಕು ತಗುಲಿದ್ದು, ಸೋಂಕಿನಿಂದ ಚೇತರಿಸಿಕೊಳ್ಳುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಿದ್ದೇವೆ. ರೋಗ ಲಕ್ಷಣಗಳು ಕಂಡು ಬಂದರೆ, ಅಂತಹ ಮಕ್ಕಳನ್ನು ಶಾಲೆಗೆ ಕಳುಹಿಸಿದಂತೆ ತಿಳಿಸಿದ್ದೇವೆ” ಎಂದು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.
“ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೆಂಗಣ್ಣು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹವಾಮಾನ ವೈಪರೀತ್ಯವೂ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಸೋಂಕು ಕಡಿಮೆಯಾಗುವ ಸಾಧ್ಯಗಳಿವೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಎಂ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉಡುಪಿ | ಕೆಲಸಕ್ಕೆ ಬಾರದ ಅಧಿಕಾರಿಗಳು; ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡಿದ ಶಾಲಾ ಮಕ್ಕಳು
“ಮಂಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಮಂಗಳೂರು ನಗರ ಪ್ರದೇಶದಲ್ಲಿ 560 ಪ್ರಕರಣಗಳು ದಾಖಲಾಗಿವೆ. ಬಂಟ್ವಾಳದಲ್ಲಿ 760, ಪುತ್ತೂರಿನಲ್ಲಿ 200 ಪ್ರಕರಣಗಳು ದಾಖಲಾಗಿವೆ. ಸೋಂಕಿತರಲ್ಲಿ ಹೆಚ್ಚಿನವರು ಶಾಲೆಗೆ ಹೋಗುವ ಮಕ್ಕಳಾಗಿದ್ದಾರೆ” ಎಂದರು.
“ಶಾಲೆಗಳಲ್ಲಿ ಸೋಂಕಿತ ಮಕ್ಕಳು ಕಂಡು ಬಂದರೆ ಅಂತಹ ಮಕ್ಕಳನ್ನು ಪ್ರತ್ಯೇಕಿಸಲು ಹಾಗೂ ಸಂಪೂರ್ಣ ಚೇತರಿಸಿಕೊಂಡ ನಂತರವೇ ತರಗತಿಗಳಿಗೆ ಕಳುಹಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಶಾಲೆಗಳಲ್ಲಿ ಒಂದೆರಡು ಪ್ರಕರಣಗಳು ದಾಖಲಾಗಿವೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್ ಈಶ್ವರ್ ಹೇಳಿದ್ದಾರೆ.